ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು | ವಿದ್ಯಾರ್ಥಿಗಳು ಸಮಸ್ಯೆ ಸವಾಲಾಗಿ ಸ್ವೀಕರಿಸಿ

ಕಾವೇರಿ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ
Published 2 ಜೂನ್ 2024, 16:31 IST
Last Updated 2 ಜೂನ್ 2024, 16:31 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡವ ಮತ್ತು ಕನ್ನಡ ಜಾನಪದ ಗೀತೆಗಳ ನೃತ್ಯ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಸಮೂಹ ನೃತ್ಯಗಳ ಮೂಲಕ ಸ್ಥಳೀಯ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶನಿವಾರ ನೀಡಿದ ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಮಿಗಿಲಾಗಿದ್ದವು. ಕೊಡವ ಸಾಂಪ್ರದಾಯಕ ಉಡುಪಿನಲ್ಲಿ ನೀಡಿದ ಕೊಡವ ಜಾನ ನೃತ್ಯ ಮರೆಯಾಗುತ್ತಿರುವ ಕೊಡವ ಜಾನಪದ ಕಲೆಗೆ ಹೊಸ ಭಾಷ್ಯ ಬರೆದಂದಿತ್ತಿತ್ತು. ಪಂರಂಪರಾಗತವಾಗಿ ಬೆಳೆದುಬಂದ ಕಲೆಯನ್ನು ಯುವ ಜನಾಂಗಕ್ಕೆ ಪರಿಚಯಿಸಿದ ರೀತಿ ಅನುಕರಣೀಯವಾಗಿತ್ತು.

ಜತೆಗೆ ಕನ್ನಡ ಜಾನಪದ ಹಾಗೂ ಸಿನಿಮಾ ಗೀತೆಗಳಿಗೆ ನೀಡಿದ ಸಾಮೂಹಿಕ ನೃತ್ಯಕ್ಕೆ ಸಭಾಂಗಣದಲ್ಲಿ ತುಂಬಿದ್ದ ವಿದ್ಯಾರ್ಥಿ ಸಮೂಹ ಕುಣಿದು ಕುಪ್ಪಳಿಸಿತು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ, ಹಿಂದಿ ಉಪನ್ಯಾಸಕಿ ಡಾ. ಸವಿತಾ, ಕನ್ನಡ ಉಪನ್ಯಾಸಕಿ ಡಾ.ರೇವತಿ ಪೂವಯ್ಯ, ಎನ್‌ಸಿಸಿ ವಿಭಾಗದಲ್ಲಿ ಸಾಧನೆ ಮಾಡಿದ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಝೀ ಕನ್ನಡ ಸರಿಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ ವಿದ್ಯಾರ್ಥಿ ಅನ್ವಿತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ: ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಸಮಸ್ಯೆಗಳು ಎದುರಾದಾಗ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಧೈರ್ಯದಿಂದ ಎದುರಿಸಿದಾಗ ಮಾತ್ರ ಯಶಸ್ವಿ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ಅವಧಿಯಲ್ಲಿ ಸ್ಪಷ್ಟ ಗುರಿ ಹಾಗೂ ದೂರದೃಷ್ಟಿ ಇಟ್ಟುಕೊಂಡು ಮುಂದುವರಿಯಬೇಕು. ಅವಕಾಶಗಳು ಬರುವ ಸಂದರ್ಭದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾವೇರಿ ವಿದ್ಯಾಸಂಸ್ಥೆ ಹಲವು ದಶಕಗಳಿಂದಲೂ ಸಮಾಜಕ್ಕೆ ಶಿಕ್ಷಣದ ಮೂಲಕ ಉತ್ತಮ ಕೊಡುಗೆ ನೀಡುತ್ತಿದೆ. ಇದೊಂದು ಮಾದರಿ ವಿದ್ಯಾಸಂಸ್ಥೆಯಾಗಿ ಬೆಳೆದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿಧಾನಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಕೂಡ ಮುಖ್ಯವಾಗಿದೆ. ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು. ದುಶ್ಚಟಗಳಿಗೆ ಆಸ್ಪದ ಕೊಡದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಪಿ.ಬೋಪಣ್ಣ, ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಪ್ರಯತ್ನಿಸಬೇಕು. ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ. ಎಂ.ಬಿ.ಕಾವೇರಪ್ಪ ವಾರ್ಷಿಕ ವರದಿ ವಾಚಿಸಿದರು.ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಅಜಯ್ ಕುಮಾರ್, ಐಕ್ಯೂಎಸಿ ಸಂಚಾಲಕಿ ಡಾ. ನಯನಾ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಎಂ. ದ್ಯಾನ್ ದೇವಯ್ಯ, ಪದಾಧಿಕಾರಿಗಳಾದ ತಷ್ಮ ದೇಚಮ್ಮ, ಎಂ.ಪಿ.ಯಶೋಧ, ಜಗತ್ ಬೆಳ್ಳಿಯಪ್ಪ, ಸಾಮುಯಲ್ ಜೋನತನ್ ಜಾಷ್ಪ, ಟಿ.ಆರ್.ರಿಯಾನ, ಅನ್ವಿತ್ ಕುಮಾರ್, ಉಪ ಪ್ರಾಂಶುಪಾಲರಾದ ಪ್ರೊ.ಎಂ.ಎಸ್. ಭಾರತಿ, ಎನ್.ಪಿ.ರೀತಾ ಹಾಜರಿದ್ದರು.

ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕೊಡವ ಜಾನಪದ ನೃತ್ಯ ಪ್ರದರ್ಶಿಸಿದರು
ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕೊಡವ ಜಾನಪದ ನೃತ್ಯ ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT