ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸೋಮವಾರಪೇಟೆ: ಜಾನಪದ ಶೈಲಿ ಸಬ್ಬಮ್ಮ ಸುಗ್ಗಿ ಉತ್ಸವ

ನಾಳೆ ಸಂಪನ್ನಗೊಳ್ಳಲಿದೆ ನಗರಳ್ಳಿ ಮಹೋತ್ಸವ
Last Updated 8 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕಳೆದ 15 ದಿನಗಳಿಂದ ತಾಲ್ಲೂಕಿನ ಅಲ್ಲಲ್ಲಿ ನಡೆಯುತ್ತಿದ್ದ ಸಬ್ಬಮ್ಮ ದೇವರ ಸುಗ್ಗಿ ಉತ್ಸವಕ್ಕೆ ಅಂತಿಮ ತೆರೆ ಎಳೆಯುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ತಾಲ್ಲೂ ಕಿನ ನಗರಳ್ಳಿ ಗ್ರಾಮದಲ್ಲಿ ಏಪ್ರಿಲ್ 10ರಂದು ಕೊನೆಯ ಉತ್ಸವ ಜರುಗಲಿದೆ. ಸುಗ್ಗಿ ಕಟ್ಟೆಯಲ್ಲಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವ ಕೊನೆಗೊಳ್ಳಲಿದೆ.

ವಾರ್ಷಿಕ ಸುಗ್ಗಿ, ಕೂತಿ ನಾಡು ಸಬ್ಬಮ್ಮ ದೇವಿಯ (ಲಕ್ಷ್ಮಿ)ಉತ್ಸವ ಎಂದೇ ಹೆಸರಾಗಿರುವ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ಇಲ್ಲಿ ಆಚರಣೆ ಕಂಡಿದೆ.

ತಾಲ್ಲೂಕಿನ ನಗರಳ್ಳಿ ಗ್ರಾಮದ ಸಬ್ಬಮ್ಮ ದೇವರ ಸಾಂಪ್ರದಾಯಿಕ ಸುಗ್ಗಿ ಉತ್ಸವ ಈಗಾಗಲೇ ಆರಂಭವಾಗಿದೆ. ಈ ಭಾಗಗಳಲ್ಲಿ ಎಲ್ಲೆಡೆ ಆಚರಿಸುವ ಸುಗ್ಗಿ ಉತ್ಸವದಲ್ಲಿ ಸಬ್ಬಮ್ಮ ದೇವರನ್ನೇ ಪೂಜಿಸಲಾಗುತ್ತದೆ. ಜಾನಪದ ಹಿನ್ನೆಲೆಯುಳ್ಳ ಸುಗ್ಗಿ ಉತ್ಸವ ಹಲವು ಕಟ್ಟುಪಾಡಿನೊಂದಿಗೆ ಸಂಬಂಧಿಸಿದ ಗ್ರಾಮಸ್ಥರು ಆಚರಿಸಿದರೆ, ಕೊನೆಯ ದಿನ ಎಲ್ಲೆಡೆಗಳಿಂದ ಆಗಮಿಸುವ ಕುಟುಂಬಸ್ಥರು, ಗೆಳೆಯರೊಂದಿಗೆ ಪೂಜೆ ಹಾಗೂ ವಿವಿಧ ಭಕ್ಷ್ಯ ಭೋಜನಗಳ ಸವಿಯೊಂದಿಗೆ ಕೊನೆಗೊಳ್ಳುತ್ತದೆ.

‘ಈ ಭಾಗದಲ್ಲಿ 15 ದಿನಗಳ ಕಾಲ ರೈತರು ಕೃಷಿ ಚಟುವಟಿಕೆಗಳನ್ನು ಮಾಡುವುದಿಲ್ಲ. ಹಾಸನ ಜಿಲ್ಲೆಗೆ ಹೊಂದಿಕೊಂಡಂತೆ ನಮ್ಮ ಗ್ರಾಮ ಇದ್ದು, ಸಕಲೇಶಪುರದಿಂದಲೂ ಸಾಕಷ್ಟು ಜನರು ಸುಗ್ಗಿಪೂಜೆಯಲ್ಲಿ ಪಾಲ್ಗೊಲ್ಳುವುದು ವಿಶೇಷ. ಏ. 10 ಸೋಮವಾರ ಸುಗ್ಗಿ ಉತ್ಸವ ತೆರೆ ಕಾಣಲಿದೆ’ ಎಂದು ಸುಗ್ಗಿ ಆಚರಣಾ ಸಮಿತಿ ಅಧ್ಯಕ್ಷ ಕೆ.ಬಿ ಜಗದೀಶ್ ತಿಳಿಸಿದರು.

ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಸೇರಿದಂತೆ ಪಕ್ಕದ ಸಕಲೇಶಪುರ ತಾಲ್ಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿ ಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ತೋರಿಸುತ್ತದೆ.

ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣ ವಾಗಿ ತೊಡಗಿಸಿಕೊಳ್ಳುವ ಸಮಯದಲ್ಲಿ ಕೃಷಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭಿಕ್ಷೆಯಿಂದಿರ ಬೇಕು, ಸಮೃದ್ಧ ಫಸಲು ಕೈಸೇರಬೇಕು. ಗ್ರಾಮದಲ್ಲಿ ರೋಗರುಜಿನಗಳು ಬರಬಾ ರದು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

15 ದಿನ ಕಟ್ಟುನಿಟ್ಟಾಗಿ ಕಟ್ಟುಪಾಡು ಗಳನ್ನು ಗ್ರಾಮಸ್ಥರು ವಿಧಿಸಿಕೊಳ್ಳುತ್ತಾರೆ. ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು ಸುಗ್ಗಿ ಹಬ್ಬಕ್ಕೆ ತವರು ಮನೆಗೆ ಆಹ್ವಾನಿಸಲಾಗುತ್ತದೆ. ನಗರ ಪ್ರದೇಶಗ ಳಲ್ಲಿ ನೌಕರಿ ಮಾಡುವ ಗ್ರಾಮದ ಯುವಕ- ಯುವತಿಯರು ತಮ್ಮೂರಿಗೆ ಹೊರಡುವುದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ಮುಖ್ಯವಾದ ಶುಭ ಕಾರ್ಯಕ್ಕೆ ತಪ್ಪಿಸಿಕೊಂಡರೂ ಕೂಡ, ಊರಿನಲ್ಲಿ ನಡೆಯುವ ಸುಗ್ಗಿ ಹಬ್ಬಕ್ಕೆ ಹಾಜರಾಗಿ ದೇವಿ ದರ್ಶನವನ್ನು ಪಡೆದು ಕುಟುಂಬದೊಂದಿಗೆ ಹಬ್ಬ ಆಚರಿಸುತ್ತಾರೆ.

ಈ ಭಾಗದಲ್ಲಿ ನಡೆಯುವ ಪ್ರಮುಖ ಜಾನಪದ ಶೈಲಿಯ ಸುಗ್ಗಿ ಸುತ್ಸವದಲ್ಲಿ ಪಾಲ್ಗೊಳ್ಳುವುದೇ ಒಂದು ವಿಶೇಷ. ಕೊನೆಯ ದಿನ ಈ ಊರಿನಲ್ಲಿ ಇದ್ದು, ಬೇರೆಡೆ ಹೋಗಿ ನೆಲೆಸಿರುವವರು, ಮದುವೆಯಾಗಿ ಹೊರ ಹೋಗಿರುವವರು, ನೆಂಟರಿಷ್ಟರು ಎಲ್ಲರೂ ಆಗಮಿಸುವುದು ವಿಶೇಷ. ಎಲ್ಲರೊಂದಿಗೆ ಸೇರಿ ಸುಗ್ಗಿ ಉತ್ಸವವನ್ನು ಆಚರಿಸುವುದಾಗಿ ಜೋಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT