ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ಝಳಕ್ಕೆ ಆನೆಗಳು ಅರಣ್ಯದಿಂದ ಹೊರಕ್ಕೆ..

ಸೋಮವಾರಪೇಟೆ ಭಾಗದಲ್ಲಿ ಹೆಚ್ಚುತ್ತಲೇ ಇದೆ ಕಾಡಾನೆಗಳ ಹಾವಳಿ
Published 6 ಮೇ 2024, 6:27 IST
Last Updated 6 ಮೇ 2024, 6:27 IST
ಅಕ್ಷರ ಗಾತ್ರ

ಸೋಮವಾರಪೇಟೆ: ಒಂದೆಡೆ ಬಿಸಿಲಿನ ಝಳದಿಂದ ಬಸವಳಿದಿರುವ ಕಾಡಾನೆಗಳು ಅರಣ್ಯದಲ್ಲಿ ಕುಡಿಯಲು ನೀರು ಹಾಗೂ ತಮ್ಮ ಗುಡಾಣದಂತಹ ಹೊಟ್ಟೆ ತುಂಬಿಸಿಕೊಳ್ಳಲು ಇನ್ನಿಲ್ಲದಂತೆ ಹರಸಾಹಸ ಪಡುತ್ತಿರುವುದರಿಂದ ಸುತ್ತಲಿನ ಗ್ರಾಮದ ರೈತರು ಭಯಪಡುವಂತಾಗಿದೆ.

ಕಳೆದ ಬಾರಿ ಸರಿಯಾದ ಮಳೆಯಾಗದೇ ಇದ್ದುದ್ದರಿಂದ ಸಾಮಾನ್ಯವಾಗಿ ಸಿಗುತ್ತಿದ್ದ ನೀರು ಬತ್ತಿಹೋಗಿದೆ. ಕಾಡು ಒಣಗಿ ತಿನ್ನಲು ಏನು ಇಲ್ಲದಂತಹ ಪರಿಸ್ಥಿತಿ. ಕುಡಿಯುವ ನೀರಿಗಾಗಿ ಅಲೆಯುತ್ತಿವೆ. ಅಲ್ಲದೆ, ಕಾಡಿನಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ, ಕಾಫಿ ತೋಟಗಳಿಗೆ ನೀರು ಹಾಯಿಸುವಲ್ಲಿ ತಂಪಿರುವುದರಿಂದ ಅಲ್ಲಿಯೇ ಆಶ್ರಯ ಪಡೆಯುತ್ತಿವೆ.

11ರಿಂದ 12 ಆನೆಗಳ ಗುಂಪು ಬೆಳಿಗ್ಗೆನಿಂದ ಹೇಗೋ ಕಾಲ ಕಳೆದು ಸಂಜೆಯಾಗುತ್ತಲ್ಲೆ, ನಾಡಿನತ್ತ ಮುಖಮಾಡುತ್ತಿವೆ. ಮತ್ತದೆ ಬೆಳಗಾಗುತ್ತಲ್ಲೆ ಕಾಡಿನತ್ತ ಹಿಂದಿರುಗುವುದು ಬೇಸಿಗೆ ಸಮಯದಲ್ಲಿ ಮಾಮೂಲಿಯಾಗಿದೆ. ತಮ್ಮ ಹೊಟ್ಟೆ ಹೊರೆಯಲು ಅರಣ್ಯದಲ್ಲಿ ಸರಿಯಾದ ನೀರು ಮತ್ತು ಆಹಾರದ ವ್ಯವಸ್ಥೆಯಾಗಿದಲ್ಲಿ ಅವು ತಮ್ಮ ಸ್ಥಳವನ್ನು ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಆನೆ ಕಾರಿಡಾರಿನಲ್ಲಿ ಹೆಚ್ಚಾಗಿ ತೇಗದ ತೋಪುಗಳನ್ನು ಬೆಳೆಸಲಾಗಿದೆ. ಮತ್ತೊಂದೆಡೆ, ಅವುಗಳು ನಿತ್ಯ ಸಂಚರಿಸುವ ದಾರಿಯನ್ನು ಸೋಲಾರ್ ಬೇಲಿ ಮತ್ತಿತ್ತರ ಯೋಜನೆಗಳ ಮೂಲಕ ಕಟ್ಟಿಹಾಕುವ ಕೆಲಸ ಮಾಡಲಾಗುತ್ತಿದ್ದರೂ, ಆನೆಗಳ ದಾಹ ಮತ್ತು ಹಸಿವಿನ ಮುಂದೆ ಯೋಜನೆಗಳು ಯಾವುದೂ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ.

ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಅವುಗಳ ನಿಯಂತ್ರಣಕ್ಕೆ ಹಲವು ಯೋಜನೆಗಳನ್ನು ಸರ್ಕಾರ ಮಾಡಿದರೂ, ಯಾವುದೂ ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಯಶಸ್ವಿಯಾಗದೆ, ಇಂದಿಗೂ ಜನರು ಪರದಾಡುತ್ತಿದ್ದಾರೆ.

ಮೊದಲು ಸೋಲಾರ್ ಬೇಲಿಯನ್ನು ಆಯ್ದ ಪ್ರದೇಶಗಳಲ್ಲಿ ಅಳವಡಿಸಲಾಗಿತ್ತು. ಆದರೆ, ನಂತರ ಅದರ ನಿರ್ವಹಣೆಯಾಗದೆ, ವಿಫಲವಾಯಿತು. ಮತ್ತೆ ದೊಡ್ಡ ಕಂದಕಗಳನ್ನು ಅರಣ್ಯದ ಸುತ್ತ ತೆಗೆಸಿದರೂ, ಕಲ್ಲು ಸಿಕ್ಕಲ್ಲಿ ಬಿಡಲಾಗಿತ್ತು. ನಂತರವೂ ಕಾಡಾನೆಗಳ ನಿಯಂತ್ರಣ ಸಾಧ್ಯವಾಗದಿದ್ದಾಗ, ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಸರ್ಕಾರ ಮುಂದಾಯಿತು. ಆದರೆ, ಅದೂ ಕೂಡ ಆನೆಯನ್ನು ಕಾಡಿನಲ್ಲಿ ಬಂಧಿಸಲು ವಿಫಲವಾಗಿದ್ದು, ಬ್ಯಾರಿಕೇಡ್ ಕಿತ್ತು ಆನೆಗಳು ಕಾಫಿ ತೋಟ ಹಾಗೂ ಜನವಸತಿ ಪ್ರದೇಶಗಳಿಗೆ ದಾಳಿ ಇಡುತ್ತಿವೆ. ಇದರೊಂದಿಗೆ ಹಗಲಿನಲ್ಲಿಯೇ ರಸ್ತೆಯಲ್ಲಿ ಸಂಚರಿಸುವ ಮೂಲಕ ಜನರು ರಸ್ತೆಯಲ್ಲಿ ಸಂಚರಿಸಲು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈಚೆಗೆ 6 ಕಾಡಾನೆಗಳು ಕಾಜೂರು ದುರ್ಗಾ ಎಸ್ಟೇಟ್ ಬಳಿ ಹಾಕಲಾಗಿದ್ದ ರೈಲ್ವೇ ಕಂಬಿಗೆ ಅಳವಡಿಸಿದ್ದ ಸಿಮೆಂಟ್‍ನ ನಾಲ್ಕು ಪಿಲ್ಲರ್‌ಗಳನ್ನು ಪುಡಿಗಟ್ಟಿ, ಕಾಫಿ ತೋಟ ಪ್ರವೇಶಿಸಿವೆ. ಮತ್ತೆ ಬೆಳಿಗ್ಗೆ 6 ಘಂಟೆಯ ಸಮಯದಲ್ಲಿ ವಾಪಸು ಅರಣ್ಯಕ್ಕೆ ದುರ್ಗಾ ಎಸ್ಟೇಟ್ ಕೊಲ್ಲಿ ಬಳಿ ಅಳವಡಿಸಿರುವ ಗೇಟಿನ ಪಕ್ಕದ ಪಿಲ್ಲರ್ ಪುಡಿಗಟ್ಟಿ ಅರಣ್ಯ ಪ್ರವೇಶಿಸಿವೆ.

ಸೋಮವಾರಪೇಟೆ ಕಾಜೂರು ಮೀಸಲು ಅರಣ್ಯದಲ್ಲಿ ನೂತನವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕಾಡಾನೆಗಳು ಅದನ್ನು ಮುರಿದು ಗ್ರಾಮವನ್ನು ಪ್ರವೇಶಿಸಿರುವುದು.
ಸೋಮವಾರಪೇಟೆ ಕಾಜೂರು ಮೀಸಲು ಅರಣ್ಯದಲ್ಲಿ ನೂತನವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕಾಡಾನೆಗಳು ಅದನ್ನು ಮುರಿದು ಗ್ರಾಮವನ್ನು ಪ್ರವೇಶಿಸಿರುವುದು.
ಸೋಮವಾರಪೇಟೆ ಸಮೀಪದ ಯಡವಾರೆ ಅರಣ್ಯದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕೆಸರು ಮಿಶ್ರಿತ ಕಾಂಕ್ರಿಟ್ ತುಂಬಿ ಕಬ್ಬಿಣದ ಕಂಬಗಳನ್ನು ನಿಲ್ಲಿಸುತ್ತಿದ್ದ ಸಂದರ್ಭ.
ಸೋಮವಾರಪೇಟೆ ಸಮೀಪದ ಯಡವಾರೆ ಅರಣ್ಯದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಸಂದರ್ಭ ಕೆಸರು ಮಿಶ್ರಿತ ಕಾಂಕ್ರಿಟ್ ತುಂಬಿ ಕಬ್ಬಿಣದ ಕಂಬಗಳನ್ನು ನಿಲ್ಲಿಸುತ್ತಿದ್ದ ಸಂದರ್ಭ.
 ಕುಂಬೂರು ಸೋಮಪ್ಪ
 ಕುಂಬೂರು ಸೋಮಪ್ಪ
ಗೌತಮ್
ಗೌತಮ್
 ರಾಜೇಶ್
 ರಾಜೇಶ್
ದಿನೇಶ್
ದಿನೇಶ್

ಪ್ರತಿಕ್ರಿಯೆಗಳು ಆನೆ ಸಂಚರಿಸುವ ವ್ಯಾಪ್ತಿಯಲ್ಲಿ ಸ್ಥಳೀಯ ಜನರು ಜೀವಭಯದಲ್ಲೇ ಜೀವನ ಸಾಗಿಸುತ್ತಿದ್ದು. ವಾಹನ ಸವಾರರು ಭಯದಲ್ಲಿ ಚಾಲನೆ ಮಾಡಬೇಕಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಕಾಡಾನೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಜನರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು. -ಕುಂಬೂರು ಸೋಮಪ್ಪ ಕಾರ್ಮಿಕ ನಾಯಕ.

ಕಾಡು ಪ್ರಣಿಗಳಿಗೆ ಅರಣ್ಯದಲ್ಲಿಯೇ ಸೂಕ್ತ ನೀರು ಮತ್ತು ಆಹಾರ ಸಿಗುವಂತೆ ಅರಣ್ಯ ಇಲಾಖೆ ನೋಡಿಕೊಂಡಿದ್ದಲ್ಲಿ ಅವುಗಳ ಉಪಟಳ ಇರುತ್ತಿರಲಿಲ್ಲ. ತೇಗದ ತೋಪುಗಳನ್ನು ಬೆಳೆಸುವುದರಿಂದ ಆನೆಗಳಿಗೆ ಆಹಾರ ಸಿಗದಂತೆ ಆಯಿತು. ವರ್ಷಕ್ಕೆ ಸಾಕಷ್ಟು ವೆಚ್ಚ ಮಾಡುತ್ತಿರುವ ಅರಣ್ಯ ಇಲಾಖೆ ಮುಂದಿನ ದಿನಗಳಲ್ಲಾದರೂ ಕಾಡು ಪ್ರಾಣಿಗಳಿಗೆ ಸರಿಯಾಗಿ ಆಹಾರ ಮತ್ತು ನೀರು ಸಿಗುವಂತಹ ಯೋಜನೆಗಳನ್ನು ಮಾಡಬೇಕಿದೆ. -ಕಿರಗಂದೂರು ಗ್ರಾಮದ ಗೌತಮ್.

ಕಾಜೂರು ಯಡವಾರೆ ಸಜ್ಜಳ್ಳಿ ಭಾಗದಲ್ಲಿ ಸೋಲಾರ್ ಬೇಲಿ ಟ್ರಂಚ್ ಮಾಡಿ ಹ್ಯಾಂಗಿಂಗ್ ಸೋಲಾರ್ ತಂತಿಬೇಲಿ ನಿರ್ಮಿಸಲಾಗಿತ್ತು. ಆದರೂ ಕಾಡಾನೆಗಳು ತಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಿಕೊಂಡು ಕೃಷಿ ಭೂಮಿ ತಲುಪುತ್ತವೆ. ಈ ಸ್ಥಳದಲ್ಲಿ ಈಗ ₹ 4.9 ಕೋಟಿ ವೆಚ್ಚದ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಗುಣಮಟ್ಟಕ್ಕೆ ಆದ್ಯತೆ ನೀಡಿಲ್ಲ. ಸರಿಯಾಗಿ ಕಾಮಗಾರಿ ಮಾಡದ ಹಿನ್ನೆಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. - ರಾಜೇಶ ಯಡವಾರೆ ಗ್ರಾಮ

ರೈಲ್ವೇ ಬ್ಯಾರಿಕೇಡ್ ನಿರ್ಮಾಣವನ್ನು ತುಂಡು ಗುತ್ತಿಗೆ ನೀಡಿ ಮಾಡಿಸಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡುತ್ತಿಲ್ಲ ಎಂದು ಒಮ್ಮೆ ಗ್ರಾಮಸ್ಥರು ಕೆಲಸವನ್ನು ತಡೆಹಿಡಿದಿದ್ದರು. ಮಣ್ಣು ಮಿಶ್ರಿತ ಜಲ್ಲಿ ಬಳಸಿ ರಾತ್ರಿ ಸಮಯದಲ್ಲಿಯೂ ಕಾಮಗಾರಿಯನ್ನು ಬೇಕಾಬಿಟ್ಟಿ ಮಾಡಿದ್ದಾರೆ. ನಿಗದಿತವಾಗಿ ರೈಲ್ವೇ ಕಂಬಿಗಳನ್ನು ಭೂಮಿಯಲ್ಲಿ ನೆಟ್ಟಿಲ್ಲ. ಕಾಮಗಾರಿಯ ಬಗ್ಗೆ ಸರ್ಕಾರ ತನಿಖೆ ಮಾಡಿಸಬೇಕಿದೆ. - ದಿನೇಶ್ ಹೊಸತೋಟ ಗ್ರಾಮ.

ಬೇಸಿಗೆ ಕಾಲವಾಗಿರುವುದರಿಂದ ಕಾಫಿ ತೋಟಗಳಲ್ಲಿ ನೀರು ಹಾಯಿಸುತ್ತಿದ್ದು ತಂಪಾದ ವಾತಾವರಣೆ ಅರಸಿ ಕಾಡಾನೆಗಳು ಹೊರಗೆ ಬರುತ್ತಿವೆ. ಕಾಡಿನಲ್ಲಿ ಅವುಗಳಿಗೆ ಸರಿಯಾಗಿ ಆಹಾರವೂ ಸಿಗುತ್ತಿಲ್ಲ. ಜನರು ಬೆಳಿಗ್ಗೆ ಮತ್ತು ರಾತ್ರಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು. ರಾತ್ರಿ ಸಮಯದಲ್ಲಿ ಟಾರ್ಚ್ ಹಿಡಿದು ಹೊರಗೆ ಬರಬೇಕೆಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದೇವೆ. ರೈಲ್ವೇ ಬ್ಯಾರಿಕೇಡ್‍ಗೆ ಸೀಮೆಂಟ್ ಪಿಲ್ಲರ್ ಅಳವಡಿಸಿ ಕೆಲವೇ ದಿನಗಳಾvದ್ದರಿಂದ ಅವುಗಳು ತುಂಡರಿಸಿ ಹೊರಗೆ ಬಂದಿವೆ.- ಗೋಪಾಲ್ ಅರಣ್ಯ ಇಲಾಖೆಯ ಎಸಿಎಫ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT