ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ತರಲು ಹೋದ ವ್ಯಕ್ತಿ ಶವವಾಗಿ ಪತ್ತೆ: ಕುಟುಂಬಸ್ಥರಿಂದ ಕೊಲೆಯ ಆರೋಪ

ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಕ್ರಮ– ಭರವಸೆ
Last Updated 11 ಏಪ್ರಿಲ್ 2020, 15:42 IST
ಅಕ್ಷರ ಗಾತ್ರ

ವಿರಾಜಪೇಟೆ: ಜಾನುವಾರು ಖರೀದಿಗೆಂದು ಕಳೆದ ನಾಲ್ಕು ದಿನಗಳ ಹಿಂದೆ ತೆರಳಿದ್ದ ಕೊಡಗು ಜಿಲ್ಲೆಯ ಗುಂಡಿಕೆರೆಯ ನಿವಾಸಿ ಎಂ.ಎಂ.ಮೂಸಾ (65) ಅವರ ಮೃತದೇಹವು ಸಮೀಪದ ಬಿಟ್ಟಗಾಲ ಗ್ರಾಮದ ಬಳಿ ಶನಿವಾರ ಪತ್ತೆಯಾಗಿದೆ.

ಮೂಸಾ ಅವರು ಏ.7ರಂದು ಕೊಳತ್ತೊಡು ಬೈಗೋಡು ಗ್ರಾಮಕ್ಕೆ ತೆರಳಿ ಎತ್ತನ್ನು ಖರೀದಿಸಿ, ನಂತರ ಎತ್ತಿನೊಂದಿಗೆ ಮರಳುತ್ತಿದ್ದರು. ಆದರೆ, ಮೂಸಾ ಅವರು ಮನೆಗೆ ವಾಪಸ್ಸಾಗಿರಲಿಲ್ಲ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ಅವರ ಪುತ್ರ ಸಲಾಂ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈಗ ಮೂಸಾ ಅವರ ಮೃತದೇಹ ಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ.

ಮೃತದೇಹವು ಮರವೊಂದರ ಕೆಳಭಾಗದಲ್ಲಿ ಪತ್ತೆಯಾಗಿದೆ. ಮೃತದೇಹ ಬಿದ್ದಿದ್ದ ಜಾಗದಿಂದ ಸಾಕಷ್ಟು ದೂರದಲ್ಲಿ ಕಟ್ಟಿ ಹಾಕಿದ್ದ ಸ್ಥಿತಿಯಲ್ಲಿದ್ದ ಎತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಸಂಶಯಾಸ್ಪದ ಸಾವು’ ಎಂದು ಪೊಲೀಸರು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್, ಸಿಪಿಐ ಕ್ಯಾತೇಗೌಡ ಹಾಗೂ ಗಾಮಾಂತರ ಠಾಣೆಯ ಎಸ್ಐ ವೀಣಾ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.

ಕೊಲೆ ಶಂಕೆ:‘ತಂದೆಯ ಸಾವು ಆಕಸ್ಮಿಕವಲ್ಲ. ಅವರನ್ನು ಗುರುತು ಸಿಗದ ರೀತಿಯಲ್ಲಿ ಕೊಲೆ ಮಾಡಲಾಗಿದೆ.ಪೊಲೀಸರು ತನಿಖೆ ನಡೆಸಿ ನಿಜಾಂಶವನ್ನು ಬೆಳಕಿಗೆ ತರಬೇಕು’ ಎಂದು ಮೂಸಾ ಅವರ ಪುತ್ರ ಸಲಾಂ ಕೋರಿದ್ದಾರೆ.

ಮೂಸಾ ಅವರಿಗೆ ಹಸುಗಳನ್ನು ಸಾಕುವ ಅಭ್ಯಾಸವಿದೆ. ಮನೆಯಲ್ಲಿ ಐದು ಹಸುಗಳಿವೆ. ಎತ್ತು ಖರೀದಿಸಲು ಮುಂದಾಗಿದ್ದರು. ಅವರ ಬಳಿ ₹ 28 ಸಾವಿರ ನಗದು ಇತ್ತು. ಒಂದು ಎತ್ತನ್ನು ₹ 18 ಸಾವಿರಕ್ಕೆ ಖರೀದಿಸಿದ್ದು, ಬಾಕಿ ₹ 10 ಸಾವಿರವನ್ನು ಅಪಹರಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಮೂಸಾ ಅವರು ನಾಪತ್ತೆಯಾದ ಮಾಹಿತಿ ಲಭಿಸುತ್ತಿದ್ದಂತೆ ಅಂದು ಅವರನ್ನು ಹುಡುಕಿಕೊಂಡು ಬೇಟೋಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ.ಉಮ್ಮರ್ ಫಾರೂಕ್‌ ಹಾಗೂ ಸಂಗಡಿಗರು ಬಾಳಗೋಡಿಗೆ ತೆರಳಿದ್ದರು. ಅವರ ಮೇಲೆ ಒಂದು ಗುಂಪು ಹಲ್ಲೆ ನಡೆಸಿತ್ತು ಎನ್ನಲಾಗಿದೆ. ಫಾರೂಕ್‌ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ.

ಮತ್ತೊಂದು ದೂರು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳುಗೋಡಿನ ಭೀಮಯ್ಯ ಅವರೂ ದೂರು ನೀಡಿದ್ದು ಮತ್ತೊಂದು ಗುಂಪಿನ ಐವರ ಮೇಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT