ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರಂಗಿ: ಕುಸಿದ ನಾಲೆಯ ಕಾಂಕ್ರೀಟ್!

ಹುದುಗೂರು ಬಳಿ ಒಳಗಿನ ಒತ್ತಡದಿಂದ ಬರುತ್ತಿರುವ ನೀರು, ಕಾಂಕ್ರೀಟ್ ಕುಸಿತಕ್ಕೆ ಕಾರಣ
Published 4 ಆಗಸ್ಟ್ 2024, 6:23 IST
Last Updated 4 ಆಗಸ್ಟ್ 2024, 6:23 IST
ಅಕ್ಷರ ಗಾತ್ರ

ಕುಶಾಲನಗರ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿ ಮುಗಿಯುವ ಮುನ್ನವೇ ನಾಲೆಯ ಕಾಂಕ್ರೀಟ್ ಕುಸಿಯಲು ಆರಂಭಿಸಿದೆ.

ಜಲಾಶಯದ ಎಡದಂಡೆ ಮುಖ್ಯ ನಾಲೆಯನ್ನು ₹ 49.75 ಕೋಟಿ ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಮುಖ್ಯ ನಾಲೆಯಿಂದ 7 ಕಿ.ಮೀವರೆಗಿನ ಆಧುನೀಕರಣ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿತ್ತು. ಉಳಿದ‌ ಕಾಮಗಾರಿಯನ್ನು ಮುಂಗಾರು ಮಳೆ ಆರಂಭಕ್ಕೂ ಮುನ್ನ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ಸೂಚನೆ ನೀಡಿದ್ದರು. ಆದರೆ ಕಾಮಗಾರಿಯನ್ನು ಇನ್ನೂ ಮುಗಿಸಲು ಸಾಧ್ಯವಾಗಿಲ್ಲ.

ಹುದುಗೂರು ಬಳಿಯ ನಾಲೆಯ ಕಾಂಕ್ರೀಟ್ ಕುಸಿದಿದೆ. ಇದೇ ರೀತಿ ಕಳೆದ 4 ದಿನಗಳ ಹಿಂದೆ ಮದಲಾಪುರ ಬಳಿ ಹಾರಂಗಿ‌ ಮುಖ್ಯ ನಾಲೆಗೆ ಮಣ್ಣು ಕುಸಿದಿದೆ. ಜೊತೆಗೆ, ಕಾಂಕ್ರೀಟ್ ನಾಲೆ ಕೂಡ ಬಿರುಕು ಬಿಟ್ಟಿದೆ. ಶಾಸಕ ಡಾ.ಮಂತರ್‌ಗೌಡ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಾಲೆ ತೆಗೆಯಲು ತೆಗೆದ ಮಣ್ಣು ಪಕ್ಕದಲ್ಲಿ ರಾಶಿ ಹಾಕಿದ ಹಿನ್ನೆಲೆಯಲ್ಲಿ ಮಳೆಯಿಂದ ಜಾರಿ ನಾಲೆ ಮುಚ್ಚಿಕೊಂಡಿದೆ ಎಂದು ರೈತರು ದೂರಿದರು.

ನಾಲೆಗೆ ತುಂಬಿರುವ ಮಣ್ಣು ತೆಗೆದ ನಾಲೆ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕರು ಎಚ್ಚರಿಕೆ ನೀಡಿದ್ದರು. ನಿರಂತರ ಮಳೆಯಿಂದಲೋ ಅಥವಾ ಕಾಮಗಾರಿ ಗುಣಮಟ್ಟದ ಕೊರತೆಯೋ ಒಟ್ಟಾರೆ ಇತ್ತೀಚೆಗೆ ಕೈಗೊಂಡ ಕಾಮಗಾರಿ ನೀರು ಪಾಲಾಗುತ್ತಿದೆ. ಇದೇ ರೀತಿ ನಾಲೆಗಳು ಕುಸಿಯುತ್ತಿದ್ದರೆ. ನೀರು ಪೋಲು ಆಗುವುದರ ಜೊತೆಗೆ ರೈತರ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಲಿದೆ ರೈತ ಮುಖಂಡ ಗಣೇಶ್ ಅಸಮಧಾನ ವ್ಯಕ್ತಪಡಿಸಿದರು.

ನಿರ್ವಹಣೆ ಗುತ್ತಿಗೆದಾರರೇ ಮಾಡಬೇಕು

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಾರಂಗಿ ಕಾರ್ಯಪಾಲಕ ಪುಟ್ಟಸ್ವಾಮಿ ‘ಹುದುಗೂರು ಬಳಿಯ ಕೇವಲ ಒಂದು ನಿರ್ದಿಷ್ಟ ಜಾಗದಲ್ಲಿ ಮಾತ್ರವೇ ಒಳಗಿನಿಂದ ನೀರು ಬಹಳ ಒತ್ತಡದಿಂದ ಬರುತ್ತಿದೆ. ಹಾಗಾಗಿ 4 ಇಂಚು ಕಾಂಕ್ರೀಟ್ ಆ ಜಾಗದಲ್ಲಿ ಮಾತ್ರವೇ ಕುಸಿದಿದೆ. ಈ ಕಾಮಗಾರಿಯ ನಿರ್ವಹಣೆ 3 ವರ್ಷಗಳ ಕಾಲ ಗುತ್ತಿಗೆದಾರರದ್ದೇ. ಹಾಗಾಗಿ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಅವರ ಖರ್ಚಿನಲ್ಲೇ ದುರಸ್ತಿ ಮಾಡುತ್ತಾರೆ’ ಎಂದು ಹೇಳಿದರು.

ಕುಶಾಲನಗರ ಸಮೀಪದ ಮದಲಾಪುರ ಬಳಿ ಹಾರಂಗಿ ಮುಖ್ಯ ನಾಲೆ ಕುಸಿದಿರುವ ದೃಶ್ಯ
ಕುಶಾಲನಗರ ಸಮೀಪದ ಮದಲಾಪುರ ಬಳಿ ಹಾರಂಗಿ ಮುಖ್ಯ ನಾಲೆ ಕುಸಿದಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT