ವಿರಾಜಪೇಟೆ: ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ 40 ದಿನಗಳಲ್ಲಿ 11 ಕಡೆ ಕನ್ನ ಹಾಕಿದ್ದ ಇಬ್ಬರು ಕುಖ್ಯಾತ ಅಂತರರಾಜ್ಯ ಚೋರರನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇರಟ್ಟಿ ತಾಲ್ಲೂಕಿನ ಉಳಿಕಲ್‌ನ ಟಿ.ಎ.ಸಲೀಂ (42) ಹಾಗೂ ಸೋಮವಾರಪೇಟೆಯ ಚೌಡ್ಲು ಗ್ರಾಮದ ಎಂ.ಎ.ಸಂಜಯಕುಮಾರ್ (30) ಬಂಧಿತರು. ಇವರು ಕರ್ನಾಟಕ ಮತ್ತು ಕೇರಳದಲ್ಲಿ ಕಳೆದೊಂದು ತಿಂಗಳುಗಳಿಂದ ನಡೆಸಿದ್ದ ಒಟ್ಟು 11 ಕಳ್ಳತನ ಪ್ರಕರಣಗಳನ್ನು ಪೊಲೀಸರು ಬಯಲು ಮಾಡಿದ್ದಾರೆ. ಇವುಗಳಲ್ಲಿ ಕೊಡಗಿನಲ್ಲಿ 5, ಮೈಸೂರಿನಲ್ಲಿ 2 ಹಾಗೂ ಕೇರಳದಲ್ಲಿ 4 ಪ್ರಕರಣಗಳು ಸೇರಿವೆ.
ಈ ಕುರಿತು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇವರಿಬ್ಬರೂ ವೃತ್ತಿಪರ ಕಳ್ಳರಾಗಿದ್ದು, ಕಳ್ಳತನ ಪ್ರಕರಣವೊಂದರ ತನಿಖೆ ವೇಳೆ ಇವರು ಎಸಗಿದ್ದ ಇತರೆ ಕಳ್ಳತನ ಪ್ರಕರಣಗಳು ಗೊತ್ತಾಗಿವೆ’ ಎಂದು ಮಾಹಿತಿ ನೀಡಿದರು.
ಭೇತ್ರಿಯಲ್ಲಿ ಅಂಗಡಿ, ಬಿಟ್ಟಂಗಾಲದಲ್ಲಿ ದೇಗುಲದ ಹುಂಡಿ, ಗೋಣಿಕೊಪ್ಪಲಿನಲ್ಲಿ 1, ಪುಲಿಕಿಮಾಡು ದರ್ಗಾ ಭಂಡಾರ ಕಳ್ಳತನ, ಮೂರ್ನಾಡಿನ ಸತೀಶ್ ಅವರ ಮನೆಯ ಕಳ್ಳತನಕ್ಕೆ ಯತ್ನ, ಮೈಸೂರಿನಲ್ಲಿ 2 ಕಡೆ ದ್ವಿಚಕ್ರ ವಾಹನಗಳ ಕಳ್ಳತನ, ಕೇರಳದಲ್ಲಿ 4 ಕಡೆ ಇವರು ಕಳ್ಳತನ ಎಸಗಿದ್ದರು ಎಂದು ಅವರು ಹೇಳಿದರು.
ಪ್ರಮುಖ ಆರೋಪಿ ಸಲೀಂ ಕಳೆದ 20 ವರ್ಷಗಳಿಂದ ಕೇರಳ, ಮೈಸೂರು, ಕೊಡಗಿನಲ್ಲಿ ಕಳ್ಳತನ ಮಾಡುತ್ತಾ ಸಿಕ್ಕಿ ಬೀಳುತ್ತಾ ಜಾಮೀನಿನ ಮೇಲೆ ಬಿಡುಗಡೆ ಹೊಂದುತ್ತಾ ಬರುತ್ತಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತೆ ಕಳ್ಳತನ ಎಸಗುತ್ತಿದ್ದ. ವಿವಿಧ ಪ್ರಕರಣಗಳಲ್ಲಿ 2 ವರ್ಷ 10 ತಿಂಗಳು ಕಾಲ ಈತನಿಗೆ ಜೈಲು ಶಿಕ್ಷೆಯೂ ಆಗಿತ್ತು. 2022ರಲ್ಲಿ ಪೆಟ್ರೊಲ್ ಬಂಕ್‌ವೊಂದರಲ್ಲಿ ಕಳ್ಳತನ ಮಾಡಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದ ನಂತರ ಮತ್ತೆ 11 ಕಡೆ ಸಂಜಯ್‌ಕುಮಾರ್ ಜೊತೆ ಸೇರಿ ಕಳ್ಳತನ ಮಾಡಿದ್ದ ಎಂದು ಅವರು ತಿಳಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಡಿವೈಎಸ್‌ಪಿ ಮೋಹನ್‌ಕುಮಾರ್ ಉಸ್ತುವಾರಿಯಲ್ಲಿ ವಿರಾಜಪೇಟೆ ಸಿಪಿಐ ಬಿ.ಎಸ್.ಶಿವರುದ್ರ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಸಿ.ಸಿ.ಮಂಜುನಾಥ್, ವಾಣಿಶ್ರೀ, ರವೀಂದ್ರ, ಪ್ರಮೋದ್, ವೈಜ್ಞಾನಿಕ ತನಿಖಾ ಘಟಕದ ಇನ್‌ಸ್ಪೆಕ್ಟರ್ ರಾಮಕೃಷ್ಣ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.
ಅಪರಾಧಿಗಳಿಗೆ ಉಳಿಗಾಲವಿಲ್ಲ. ಯಾವುದೇ ಪ್ರಕರಣವಾದರೂ ಸರಿ ಪತ್ತೆ ಹಚ್ಚಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಇಲಾಖೆಯ ಅಧಿಕಾರಿಗಳು ಸಮರ್ಥರಿದ್ದಾರೆ. ಜಿಲ್ಲೆಯಲ್ಲಿ ಸಣ್ಣಪುಟ್ಟ ಕಳ್ಳತನ-ಅಪರಾಧವಾದರೂ ಸಾರ್ವಜನಿಕರು ಪ್ರಕರಣ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಪರಾಧಿಗಳ ಪತ್ತೆಗೆ ಸಹಕಾರ ನೀಡಬೇಕು ಎಂದು ಅವರು ಈ ಸಂದರ್ಭ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಗಾಂಜಾ ಮಾರಾಟ ಮಾಡುತ್ತಲೇ 12 ವಾಹನ ಕದಿದ್ದ ಆರೋಪಿಗಳು!
ವಿರಾಜಪೇಟೆ ನಗರ ಠಾಣೆಯ ವ್ಯಾಪ್ತಿಯಲ್ಲಿನ ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 5 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು 10 ದ್ವಿಚಕ್ರ ವಾಹನ ಸೇರಿದಂತೆ 12 ವಾಹನಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿಯ ಶಫೀಕ್ ಸಮೀರ್ ಮುನೀರ್ ದರ್ಶನ್ ಎಸ್ ಹಾಗೂ ವಿರಾಜಪೇಟೆಯ ಚಿಕ್ಕಪೇಟೆಯ ಮೊಹಮ್ಮದ್ ಆಸೀಂ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.83 ಕೆ.ಜಿ ಗಾಂಜಾ 10 ದ್ವಿಚಕ್ರ ವಾಹನ ಹಾಗೂ 2 ಕಾರುಗಳು ಸೇರಿದ ಒಟ್ಟು ₹ 4 ಲಕ್ಷ ಮೌಲ್ಯದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಕಳವಿಗೆ ಸಂಬಂಧಿಸಿದೆ ಪಿರಿಯಪಟ್ಟಣ ಹುಣಸೂರು ಹಾಗೂ ಬಿಳಿಕೆರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.