ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಪಡಿತರಕ್ಕಾಗಿ ಕಾದು ನಿಂತು ಸುಸ್ತಾದ ಜನರು

ಜೀವನ ನಿರ್ವಹಣೆ ಕಷ್ಟ: ಬಹುತೇಕ ಬಡಜನರ ಅಳಲು
Last Updated 11 ಮೇ 2021, 4:33 IST
ಅಕ್ಷರ ಗಾತ್ರ

ಕುಶಾಲನಗರ: ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಆಹಾರ ಧಾನ್ಯ ಪಡೆಯಲು ಜನರು ಪರದಾಡುತ್ತಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಇದೀಗ ಜೀವನ ನಿರ್ವಹಣೆಯೇ ಕಷ್ಟವಾಗಿದ್ದು, ಪಡಿತರದಲ್ಲಿ ನೀಡುವ ಆಹಾರ ಧಾನ್ಯವೇ ಬದುಕಿಗೆ ಮೂಲವಾಗಿದೆ.

ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಕ್ಕಿ ಪೂರೈಕೆಯಾಗಿದ್ದು, ಕೆಲವು ಅಂಗಡಿಗಳಲ್ಲಿ ವಿತರಣೆ ಕೂಡಾ ನಡೆಯುತ್ತಿದೆ. ಲಾಕ್‌ಡೌನ್‌ ಸಮಯ ದೊಳಗೆ ಪಡೆಯಲೆಂದು ಸಾಕಷ್ಟು ಜನ ಬೆಳಿಗ್ಗೆಯೇ ಬಂದಿದ್ದರಿಂದ ದಟ್ಟಣೆ ಆಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ (ಕುಶಾಲನಗರ ಇನ್ನೂ ಪ್ರತ್ಯೇಕಿಸಿಲ್ಲ) ಸುಮಾರು 43 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದು, 1.35 ಲಕ್ಷ ಫಲಾನುಭವಿಗಳಿದ್ದಾರೆ. ಅಂತ್ಯೋದಯ ಯೋಜನೆಯಡಿ ಮೂರು ಸಾವಿರ ಕಾರ್ಡ್‌ದಾರರಿದ್ದು, 11 ಸಾವಿರ ಫಲಾನುಭವಿಗಳಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಶುಕ್ರವಾರ ಎರಡು ದಿನಗಳು ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 12 ಗಂಟೆ ನಿಗದಿಪಡಿಸಲಾಗಿದೆ. ಪಡಿತರ ಚೀಟಿದಾರರು ಆಹಾರ ಧಾನ್ಯ ಪಡೆಯಲು ಅಂಗಡಿಗಳ ಮುಂದೆ ಸೇರುತ್ತಿದ್ದು, ಕೊರೊನಾವನ್ನು ಮರೆತು ಸೇರುವ ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಕೋವಿಡ್‌ ನಿಯಮವೂ ಪಾಲನೆಯಾಗಲಿಲ್ಲ.

ಕುಶಾಲನಗರ ರೈತ ಭವನ ಆವರಣದಲ್ಲಿರುವ ನ್ಯಾಯಬೆಲೆ ಅಂಗಡಿ ಮುಂದೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ದಾರರು, ಅಂತ್ಯೋದಯ ಫಲಾನುಭವಿಗಳು ಬೆಳಿಗ್ಗೆಯಿಂದಲೇ ಜಮಾಯಿಸಿದ್ದರು. ಆದರೂ ಬಹುತೇಕ ಜನರಿಗೆ ಪಡಿತರ ಧಾನ್ಯ ಸಿಗದೆ ಬರಿಗೈಯಲ್ಲಿ ಹಿಂತಿರುಗಿದರು.

ಒಟಿಪಿ ಮೂಲಕ ವಿತರಣೆಯೂ ತೊಂದರೆ: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಒಟಿಪಿ ಕಡ್ಡಾಯ ಮಾಡಲಾಗಿದೆ. ಹಿಂದೆ ಬೆರಳಚ್ಚು ನೀಡಿ ಆಹಾರ ಧಾನ್ಯ ಪಡೆಯುತ್ತಿದ್ದರೂ ಬೆರಳಚ್ಚು ಪಡೆಯಲು ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಒಟಿಪಿ ಜಾರಿಗೆ ತರಲಾಗಿದೆ. ಇದರಿಂದ ಆಹಾರ ಧಾನ್ಯ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ವಾರದಲ್ಲಿ ಎರಡು ದಿನ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಿರುವುದರಿಂದ ಪಡಿತರ ಧಾನ್ಯ ಪಡೆಯಲು ತೊಂದರೆ ಉಂಟಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT