ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಜಾನಪದ ವೈವಿಧ್ಯಗಳ ಅನಾವರಣ

ಮಡಿಕೇರಿಯಲ್ಲಿ ವಿಶ್ವ ಜಾನಪದ ದಿನಾಚರಣೆ, ಜನಪದ ಗೀತೆಗಳ ಅನುರಣನ
Published 30 ಆಗಸ್ಟ್ 2024, 4:43 IST
Last Updated 30 ಆಗಸ್ಟ್ 2024, 4:43 IST
ಅಕ್ಷರ ಗಾತ್ರ

ಮಡಿಕೇರಿ: ಬೀಸುವ ಕಲ್ಲಿನ ಶಬ್ದದೊಂದಿಗೆ ಅನುಕರಣಿಸುತ್ತಿದ್ದ ‘ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ...’ ಎಂಬ ಜನಪದ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೈವಿಧ್ಯಮಯವಾದ ಜಾನಪದ ಪುಟಗಳು ತೆರೆದುಕೊಂಡವು.

ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗವು ಇಲ್ಲಿನ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಜಾನಪದ ವೈವಿಧ್ಯ ಕಾರ್ಯಕ್ರಮ’ದಲ್ಲಿ ಜಾನಪದ ಸೊಗಡು ಮೇಳೈಸಿತ್ತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದುಡಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಮಕ್ಕಳ ಮುಖಗಳು  ಅರಳಿದವು.

‘ಒಲಿದು ಬಾರಮ್ಮಯ್ಯ ಒಲಿದು ಬಾರೆ, ಬೆಟ್ಟದ ಚಾಮುಂಡಿ ಒಲಿದು ಬಾರೆ’, ಬಾ ಬಸವ ಬಾರಯ್ಯ ಬಸವ ... ಮೊದಲಾದ ಜನಪದ ಗೀತೆಗಳು ಮನ ಸೆಳೆದವು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಂಘದಿಂದ ನಡೆದ ಸಾಂಸ್ಕೃತಿಕ ನೃತ್ಯವು ಕಣ್ಮನ ಸೆಳೆಯಿತು. ಮಡಿಕೇರಿಯ ಸಪ್ತಸ್ವರ ಕಲಾವಿದರ ಬಳಗದಿಂದ ನಡೆದ ಜಾನಪದ ಗೀತೆ ಗಾಯನ, ಶನಿವಾರಸಂತೆಯ ಜಾನಪದ ಕಲಾವಿದ ಮೊಗೇರ ಸುರೇಶ್ ಅವರಿಂದ ಜಾನಪದ ಗೀತ ಗಾಯನ, ಕಾಶಿ ಅಚ್ಚಯ್ಯ ಅವರಿಂದ ದುಡಿಪಾಟ್, ವೀರಾಜಪೇಟೆಯ ಕಲಾವಿದ ಸಾದಿಕ್ ಹಂಸ ತಂಡದ ಕುಂಚಗಾಯನ ವಿದ್ಯಾರ್ಥಿಗಳ ಗಮನ ಸೆಳೆಯುವಲ್ಲಿ ಸಫಲವಾದವು. ಇವುಗಳಿಗೆ ಪೂರಕವಾಗಿದ್ದ ವಿವಿಧ ಜಾನಪದ ಪರಿಕರಗಳ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆಯಿತು.

ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ ಮಾತನಾಡಿ, ‘ಜಾನಪದ ಜೀವನ ಪದ್ಧತಿ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಜಾನಪದ ಅಗಾಧವಾಗಿದ್ದರೂ ಗ್ರಂಥಗಳಲ್ಲಿ ಅದು ಉಳಿದುಕೊಂಡಿಲ್ಲ. ಬಾಯಿಂದ ಬಾಯಿಗೆ ವರ್ಗವಾಗಿರುವ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಿದೆ’ ಎಂದರು.

ಪ್ರಾಸ್ತಾವಿಕವಾಗಿ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಕೂಡಿ ಬಾಳುವ ಕುರಿತು ಮಾತನಾಡಿದರು. ‘ಕೂಡಿ ಬಾಳುವ ಸಂತೋಷವನ್ನು ಉಳಿಸಿಕೊಂಡು ಬಂದವರೇ ಜಾನಪದರು. ಜಾನಪದರು ಎಂದಿಗೂ ಪ್ರಚಾರ ಮತ್ತು ಪ್ರಸಿದ್ಧಿಗೆ ಒಳಪಟ್ಟವರಲ್ಲ. ತಾಂತ್ರಿಕತೆ ಹೆಚ್ಚಾದಂತೆ ಜಾನಪದ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಮೊಗೇರ ಸುರೇಶ್ ಹಾಗೂ ಸಾದಿಕ್ ಹಂಸ ಅವರನ್ನು ಸನ್ಮಾನಿಸಲಾಯಿತು.

ಜಾನಪದ ಪರಿಷತ್ತಿನ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಖಜಾಂಚಿ ಸಂಪತ್ ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಕಾವೇರಿ ಪ್ರಕಾಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್, ಡಾ.ಕಾವೇರಿ ಪ್ರಕಾಶ್, ಜಯಲಕ್ಷ್ಮಿ, ಸಂಪತ್ ಕುಮಾರ್ ಭಾಗವಹಿಸಿದ್ದರು.

ಜಾನಪದ ವೈವಿಧ್ಯ ಕಾರ್ಯಕ್ರಮದಲ್ಲಿ ವೈವಿಧ್ಯಮಯವಾದ ಜಾನಪದ ನೃತ್ಯಗಳನ್ನು ಕಲಾವಿದರು ಪ್ರದರ್ಶಿಸಿದರು
ಜಾನಪದ ವೈವಿಧ್ಯ ಕಾರ್ಯಕ್ರಮದಲ್ಲಿ ವೈವಿಧ್ಯಮಯವಾದ ಜಾನಪದ ನೃತ್ಯಗಳನ್ನು ಕಲಾವಿದರು ಪ್ರದರ್ಶಿಸಿದರು
ಮಡಿಕೇರಿಯಲ್ಲಿ ನಡೆದ ಜಾನಪದ ವೈವಿಧ್ಯ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳು ನಾಗರಿಕರು
ಮಡಿಕೇರಿಯಲ್ಲಿ ನಡೆದ ಜಾನಪದ ವೈವಿಧ್ಯ ಕಾರ್ಯಕ್ರಮವನ್ನು ಕಣ್ತುಂಬಿಕೊಂಡ ವಿದ್ಯಾರ್ಥಿಗಳು ನಾಗರಿಕರು

ಮೊಗೇರ ಸುರೇಶ್, ಸಾದಿಕ್ ಹಂಸ ಅವರಿಗೆ ಸನ್ಮಾನ ಸೂಜಿಗಲ್ಲಿನಂತೆ ಸೆಳೆದ ಜಾನಪದ ಪರಿಕರಗಳ ಪ್ರದರ್ಶನ ಜಾನಪದ ಗೀತೆಗಳನ್ನು ಹಾಡಿದ ಕಲಾವಿದರು

ಜಾನಪದ ಕುರಿತು ಗಂಭೀರ ಚಿಂತನೆ ಅಗತ್ಯ; ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ ‘ಜನಪದ ಕಲೆ ಮತ್ತು ಸಾಹಿತ್ಯ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಈ ಬಗ್ಗೆ ಗಂಭೀರವಾದ ಚಿಂತನೆಯ ಅಗತ್ಯ ಇದೆ’ ಎಂದು ಪ್ರತಿಪಾದಿಸಿದರು. ಜೀವನ ಪದ್ಧತಿಯಂತೆ ನಮ್ಮೊಳಗೆ ಹಾಸುಹೊಕ್ಕಾಗಿರುವ ಜಾನಪದ ಸಂಸ್ಕೃತಿ ಕಲೆ ಸಾಹಿತ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ ಎಂದರು. ‘ಜಾನಪದ ಪರಿಷತ್ ಕೇವಲ ಪಟ್ಟಣಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಭಾಗದಲ್ಲೂ ಕಾರ್ಯಕ್ರಮ ಆಯೋಜಿಸುತ್ತಿದೆ’ ಎಂದು ಶ್ಲಾಘಿಸಿದ ಅವರು ‘ಜಾನಪದ ಉತ್ಸವಗಳು ಹೆಚ್ಚು ಹೆಚ್ಚು ನಡೆಯಬೇಕು. ಜಾನಪದ ಪರಿಷತ್ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮನಸ್ಸುಗಳನ್ನು ಜೋಡಿಸುವ ಕೆಲಸ; ಅನಂತಶಯನ

ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ ‘ಜಾನಪದೀಯ ಮನಸ್ಸುಗಳನ್ನು ಜೋಡಿಸುವ ಕೆಲಸವನ್ನು ಪರಿಷತ್ ಮಾಡುತ್ತಿದೆ’ ಎಂದರು. ಜಾನಪದೀಯರಲ್ಲಿ ಯಾವುದೇ ಭೇಧ ಭಾವವಿಲ್ಲ. ಸಹಜ ಪ್ರೀತಿಯಿಂದ ಬೆಳೆದು ಬಂದವರು. ಇಂದಿನ ದಿನಮಾನದಲ್ಲಿ ಎಲ್ಲವೂ ಭಿನ್ನವಾಗಿದೆ. ಒಗ್ಗಟ್ಟು ಮರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಉತ್ತಮ ಹಾಗೂ ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಜಾನಪದ ಸಹಕಾರಿ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾನಪದವನ್ನು ಮೈಗೂಡಿಸಿಕೊಳ್ಳಬೇಕು. ಯುವ ಜನಾಂಗ ತಾಂತ್ರಿಕ ಬದುಕಿನಲ್ಲಿ ಕಳೆದುಹೋಗಬಾರದು ಎಂದೂ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT