ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನಕ್ಕೆ ಆಗ್ರಹ, ಕಾಡಾನೆ ಹಾವಳಿ ತಡೆಗೆ ಒತ್ತಾಯ

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳ ರಿಂಗಣ
Last Updated 17 ಸೆಪ್ಟೆಂಬರ್ 2022, 16:51 IST
ಅಕ್ಷರ ಗಾತ್ರ

ಸಿದ್ದಾಪುರ: ಲೈನ್‌ಮನೆಗಳ ನಿವಾಸಿಗಳ ಸೂರಿಲ್ಲದ ಪರದಾಟ, ಕಾಡಾನೆಯಿಂದ ಹೈರಾಣಾದಬೆಳೆಗಾರರೂ ಸೇರಿದಂತೆ ಹಲವು ಸಮಸ್ಯೆಗಳು ಇಲ್ಲಿನ ಕಳತ್ಮಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ರಿಂಗಣಿಸಿದವು.

ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪರಿಹಾರ ದೊರಕಿಸುವ ಭರವಸೆ ನೀಡಿದರು.

ಗ್ರಾಮಸ್ಥರಾದ ಎಚ್.ಎಂ ಕಾವೇರಿ ಮಾತನಾಡಿ, ‘ಕಳತ್ಮಾಡು ಗ್ರಾಮದಲ್ಲಿ 3 ಎಕರೆಯನ್ನು ನಿವೇಶನಕ್ಕಾಗಿ ಕಾಯ್ದಿರಿಸಲಾಗಿದ್ದು, ವಿರಾಜಪೇಟೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಹೆಸರಿನಲ್ಲಿ ಪಹಣಿ ಪತ್ರ ವರ್ಗಾಯಿಸಲಾಗಿದೆ’ ಎಂದರು.

ಈ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ‘ಗೋಮಾಳ ಜಾಗದಲ್ಲಿ ಯಾವುದೇ ಕಾರಣಕ್ಕೂ ವಸತಿಗೆ ಅನುಮತಿ ನೀಡಬಾರದು. ಹಾಲು ಉತ್ಪಾದನಾ ಕೇಂದ್ರದ ಅಗತ್ಯವಿದ್ದು, ಗೋಮಾಳ ಜಾಗದಲ್ಲಿ ಕೇಂದ್ರ ಸ್ಥಾಪಿಸಲು ಜಾಗ ನೀಡಬೇಕು’ ಎಂದು ಒತ್ತಾಯಿಸಿದರು. ಈ ವೇಳೆ ನಿವೇಶನ ರಹಿತರು ಹಾಗೂ ಕೆಲ ಗ್ರಾಮಸ್ಥರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ‘ಗೋಮಾಳ ಜಾಗವನ್ನು ನಿವೇಶನಕ್ಕೆ ಬಳಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ 359 ಎಕರೆ ಸರ್ಕಾರಿ ಜಾಗವನ್ನು ನಿವೇಶನಕ್ಕಾಗಿಯೇ ಗುರುತಿಸಲಾಗಿದೆ. ಗ್ರಾಮ ಪಂಚಾಯಿತಿಯ ನಿವೇಶನ ರಹಿತರ ಪಟ್ಟಿಯಲ್ಲಿ ನೋಂದಾಯಿಸಿರುವವರಿಗೆ ನಿವೇಶನ ಕಲ್ಪಿಸಲಾಗುವುದು’ ಎಂದರು.

‘ನಿವೇಶನಕ್ಕಾಗಿ ಗುರುತಿಸಿರುವ ಜಾಗದಲ್ಲೇ ನಿವೇಶನ ಕಲ್ಪಿಸಬೇಕು’ ಎಂದು ಕೆಲವರು ಒತ್ತಾಯಿಸಿದರು. ಜಿಲ್ಲಾಧಿಕಾರಿ ನಿವೇಶನದ ಬಗ್ಗೆ ನ್ಯಾಯಯುತ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿ ಕೆಲವು ನಿವೇಶನ ರಹಿತರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಮಿತಿಮೀರಿದ ಕಾಡಾನೆ ಹಾವಳಿ

ಗ್ರಾಮಸ್ಥ ಕೊಲ್ಲೀರ ಧರ್ಮಜ್ಜ ಮಾತನಾಡಿ, ‘ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಪ್ರತಿದಿನ ಕೃಷಿ ಫಸಲನ್ನು ನಾಶ ಮಾಡುತ್ತಿದೆ. ರೈತರಿಗೆ ಸೋಲಾರ್ ಬೇಲಿ ಅಳವಡಿಸಲು ಶೇ 100ರಷ್ಟು ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಡಾನೆ ಹಾವಳಿಯಿಂದ ಒಂದು ಎಕರೆ ಜಾಗದ ಕೃಷಿ, ಗಿಡಗಳು ನಾಶವಾದರೇ, ಅತ್ಯಲ್ಪ ಪರಿಹಾರ ನೀಡುತ್ತಿದ್ದಾರೆ. ಪರಿಹಾರದ ಮೊತ್ತವನ್ನು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು

ಗೋಪಿ ಚಿಣ್ಣಪ್ಪ ಮಾತನಾಡಿ, ‘ಕಾಡಾನೆಯಿಂದಾಗಿ ಗ್ರಾಮದ ಶೇ 80ರಷ್ಟು ಜನರು ಭತ್ತದ ಕೃಷಿಯನ್ನು ಮಾಡದೇ ಗದ್ದೆಯನ್ನು ಪಾಳು ಬಿಟ್ಟಿದ್ದಾರೆ. ಕಾಫಿ, ಅಡಿಕೆ, ತೆಂಗು ಸೇರಿದಂತೆ ಫಸಲು ನಾಶವಾಗುತ್ತಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬ ಗ್ರಾಮಸ್ಥರ ಮನವಿಗೆ, ‘ಕಿರಿದಾದ ರಸ್ತೆ ಇರುವುದರಿಂದ ಬಸ್ ಸಂಪರ್ಕ ಸಾಧ್ಯವಿಲ್ಲ. ಮಿನಿ ಬಸ್‌ ಒದಗಿಸುವ ಬಗ್ಗೆ ಚರ್ಚಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕಿ ಗೀತಾ ತಿಳಿಸಿದರು.

ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡುವ ಪೋಷಣ್ ಅಭಿಯಾನ, ಉಚಿತ ಜಾಬ್ ಕಾರ್ಡ್ ನೋಂದಣಿ, ಪಶು ವೈದ್ಯಕೀಯ ಸೇವೆ, ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವಂತಹ ಮಳಿಗೆಗಳನ್ನು ತೆರೆದಿದ್ದದ್ದು ವಿಶೇಷವಾಗಿತ್ತು.

ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಸೋಮಯ್ಯ, ಉಪಾಧ್ಯಕ್ಷ ಪೂಣಚ್ಚ, ವಿರಾಜಪೇಟೆ ತಹಶೀಲ್ದಾರರಾದ ಅರ್ಚನಾ ಭಟ್, ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT