ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ನಗರಕ್ಕೆ ವಿಜಯೇಂದ್ರ, ಬಿರುಸು ಪಡೆಯಲಿರುವ ಪ್ರಚಾರ

ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ ಬಿಜೆಪಿ, ನಾಮಪ‍ತ್ರ ಸಲ್ಲಿಕೆಗೂ ಮುನ್ನವೇ ಕಾರ್ಯಕರ್ತರ ಬೃಹತ್ ಸಮಾವೇಶ
Published 27 ಮಾರ್ಚ್ 2024, 6:39 IST
Last Updated 27 ಮಾರ್ಚ್ 2024, 6:39 IST
ಅಕ್ಷರ ಗಾತ್ರ

ಮಡಿಕೇರಿ: ಮೈಸೂರು– ಕೊಡಗು ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮಾರ್ಚ್ 27ರಂದು ನಗರಕ್ಕೆ ಬರಲಿದ್ದು, ಪಕ್ಷದ ಪಾಳೇಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಬೆಳಿಗ್ಗೆ 11 ಗಂಟೆಗೆ ಕ್ರಿಸ್ಟಲ್‌ ಕೋರ್ಟ್‌ನಲ್ಲಿ ನಡೆಯುವ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುವ ಮೂಲಕ ಬಹಿರಂಗ ಅಧಿವೇಶನಕ್ಕೆ ಅವರು ಮುನ್ನುಡಿ ಬರೆಯಲಿದ್ದಾರೆ.

ಈ ಕುರಿತು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ‘ವಿಜಯೇಂದ್ರ ಅವರೊಂದಿಗೆ ಕೊಡಗು ಉಸ್ತುವಾರಿ ಡಾ.ಅಶ್ವತ್ಥನಾರಾಯಣ, ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮುಖಂಡರಾದ ರಾಮದಾಸ್, ಮೈ.ವಿ.ರವಿಶಂಕರ, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಹಲವು ನಾಯಕರು ಭಾಗವಹಿಸುವರು’ ಎಂದು ತಿಳಿಸಿದರು.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸಲಿದ್ದು, ಕೊಡಗು ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೈಸೂರಿಗೆ ತೆರಳಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲೇ ಈ ಕ್ಷೇತ್ರವು ಪ್ರತಿಷ್ಠೆಯ ಕಣದ ಸಾಲಿಗೆ ಸೇರಿದೆ. ಸುಮಾರು 2 ಲಕ್ಷ ಮತಗಳ ಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಈ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅತ್ಯಧಿಕ ಮತಗಳ ಅಂತರದಿಂದ ಯದುವೀರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ ಎಂದರು.

ಯದುವೀರ್ ಅವರು ರಾಜ ವಂಶಸ್ಥ, ಯಾರ ಕೈಗೂ ಸಿಗುವುದಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯದುವೀರ್ ಅವರು ಅತ್ಯಂತ ಸರಳ ಜೀವಿ ಮತ್ತು ಅಭಿವೃದ್ಧಿಪರ ಚಿಂತನೆ ಇರುವ ವ್ಯಕ್ತಿ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಹೇಳಿದರು.

‘ಪ್ರತಿಸ್ಪರ್ಧಿಯನ್ನು ನಿರ್ಲಕ್ಷಿಸಿ ನಾವು ಮೈಮರೆಯುವುದಿಲ್ಲ, ಯದುವೀರ್ ಅವರ ಗೆಲುವಿಗಾಗಿ ನಿರಂತರ ಶ್ರಮ ವಹಿಸುತ್ತೇವೆ. ಈಗಾಗಲೇ ಬೂತ್ ಮಟ್ಟದಿಂದ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ವರೆಗೂ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ವಿ.ಕೆ.ಲೋಕೇಶ್, ಜಿಲ್ಲಾ ವಕ್ತಾರ ಅರುಣ್ ಕುಮಾರ್ ಹಾಗೂ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಉಪಾಧ್ಯಾಯ
ಸುಬ್ರಹ್ಮಣ್ಯ ಉಪಾಧ್ಯಾಯ

ಇಂದು ಮಡಿಕೇರಿಯ ಕ್ರಿಸ್ಟಲ್‌ ಕೋರ್ಟ್‌ನಲ್ಲಿ ಸಮಾವೇಶ ಏಪ್ರಿಲ್ 3ರಂದು ಯದುವೀರ್ ನಾಮಪತ್ರ ಸಲ್ಲಿಕೆ ಬಿರುಸು ಪಡೆದ ರಾಜಕೀಯ ಚಟುವಟಿಕೆಗಳು

ಬೋಗಸ್ ಶ್ವೇತಪತ್ರ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಈಚೆಗೆ ತಾವು ಮಾಡಿರುವ ಅಭಿವೃದ್ಧಿ ಕುರಿತು ಬಿಡುಗಡೆ ಮಾಡಿದ ಶ್ವೇತಪತ್ರ ಬೋಗಸ್ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಟೀಕಿಸಿದರು. ಅವರು ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ಅರ್ಧದಷ್ಟು ಅನುದಾನ ಈ ಹಿಂದಿನ ಶಾಸಕ ಕೆ.ಜಿ.ಬೋಪಯ್ಯ ಅವರ ಅವಧಿಯದ್ದಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಪೊನ್ನಣ್ಣ ಅವರು ಜನರನ್ನು ಮರುಳು ಮಾಡಲು ಶ್ವೇತಪತ್ರ ಬಿಡುಗಡೆ ಮಾಡಿದ್ದಾರೆ. ಆದರೆ ಕೊಡಗು ಜಿಲ್ಲೆಯ ಜನ ಬುದ್ದಿವಂತರಾಗಿದ್ದು ಇದನ್ನೆಲ್ಲ ನಂಬುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT