ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಭಯ ಬೇಡ: ಎಚ್ಚರ ವಹಿಸಿ’

ಕುಟ್ಟ, ಕರಿಕೆ, ಮಾಕುಟ್ಟ ಗಡಿ ಪ್ರದೇಶದಲ್ಲಿ ಮುನ್ನೆಚರಿಕೆ ಕ್ರಮ
Last Updated 7 ಫೆಬ್ರುವರಿ 2020, 14:04 IST
ಅಕ್ಷರ ಗಾತ್ರ

ಮಡಿಕೇರಿ: ಚೀನಾ ಸೇರಿದಂತೆ ಇತರ ರಾಷ್ಟ್ರಗಳಿಂದ ಬರುವ ಪ್ರವಾಸಿಗರ ಬಗ್ಗೆ ಸ್ಥಳೀಯರು ನಿಗಾ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಕೋರಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಕೊರೊನಾ ವೈರಸ್ ಸೋಂಕಿತರ ನಿರ್ವಹಣೆ ಮತ್ತು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಯಾವುದೇ ಹಂತದಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟರೆ ಅವರ ಬಗ್ಗೆ ಗೋಪ್ಯತೆ ಕಾಪಾಡಬೇಕು. ಸೋಂಕಿತ ವ್ಯಕ್ತಿಯಿಂದ ಕನಿಷ್ಠ 6 ಅಡಿ ದೂರದಲ್ಲಿ ನಿಂತು ಮಾತನಾಡಬೇಕು. ಸೋಂಕಿತರನ್ನು ಸ್ಪರ್ಶಿಸಿದ ಬಳಿಕ ಸಾಬೂನಿನಲ್ಲಿ ಕೈಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ನಂತರ ನಿಮ್ಮ ಕಣ್ಣು ಮತ್ತು ಬಾಯಿಯನ್ನು ಸ್ಪರ್ಶಿಸಬೇಕು. ಯಾರಾದರು ತೀವ್ರ ರೀತಿಯಲ್ಲಿ ಕೆಮ್ಮುತ್ತಿದ್ದರೆ, ಅವರಿಗೆ ಕೆಮ್ಮುವ ಸಂದರ್ಭ ಕರವಸ್ತ್ರವನ್ನು ಅಡ್ಡ ಹಿಡಿಯುವಂತೆ ಸಲಹೆ ಮಾಡಬೇಕು’ ಎಂದರು.

ಜನರಲ್ಲಿ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್‌ಇಡಿ ವಾಹನ ಸಂಚಾರವನ್ನುಸಹ ಆರಂಭಿಸಿದ್ದು, ಗೋಣಿಕೊಪ್ಪಲಿನಲ್ಲಿ, ವಿರಾಜಪೇಟೆ ತಾಲ್ಲೂಕು ಮಟ್ಟದ ಮತ್ತು ಕುಶಾಲನಗರದಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಯಾನರ್‌ ಬಿಡುಗಡೆ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಬ್ಯಾನರ್‌ನ್ನು ಜಿಲ್ಲಾಧಿಕಾರಿಅನೀಸ್ ಕಣ್ಮಣಿ ಜಾಯ್ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಜಿಲ್ಲೆಯ ಕುಟ್ಟ, ಕರಿಕೆ ಮತ್ತು ಮಾಕುಟ್ಟ ಗಡಿ ಪ್ರದೇಶಗಳು ಪಕ್ಕದ ಕೇರಳ ಗಡಿಗೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಕೊರೊನಾ ವೈರಸ್ ಬಗ್ಗೆ ತೀವ್ರ ಕಟ್ಟೆಚ್ಚರ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಿನ್ನೆಲೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಗಡಿಭಾಗದಲ್ಲಿ ಬ್ಯಾನರ್‌ಗಳು ಸೂಕ್ತ ಅರಿವು ನೀಡಲು ಸಹಕಾರಿಯಾಗಲಿದೆ ಎಂದರು.

ಮಾಹಿತಿ ನೀಡಲು ಮನವಿ

ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲಾ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಗೆ ಚೀನಾ ಹಾಗೂ ಇನ್ನಿತರ ಕೊರೊನಾ ಬಾಧಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರು ಕೊರೊನಾ ವೈರಸ್ ಲಕ್ಷಣಗಳ ಬಗ್ಗೆ ಸ್ವಯಂ ಘೋಷಣಾ ನಮೂನೆಯಲ್ಲಿ ಮಾಹಿತಿ ನೀಡಬಹುದಾಗಿದೆ.

ಸ್ವಯಂ ಘೋಷಣಾ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸದೇ ಗೌಪ್ಯತೆ ಕಾಪಾಡಲಾಗುವುದು ಎಂದು ಮೋಹನ್ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT