ನಾಪೋಕ್ಲು: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೆಕಾಡು ಪೈಸಾರಿ ನಿವಾಸಿಗಳ ಸ್ಥಳ. ಇಲ್ಲಿನ ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಸಮೀಪದ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಈ ಶೈಕ್ಷಣಿಕ ವರ್ಷದಲ್ಲಿ 85 ಮಕ್ಕಳು ಇಲ್ಲಿಗೆ ಸೇರಿದ್ದಾರೆ. ಈ ಸರ್ಕಾರಿ ಶಾಲೆ ಮಡಿಕೇರಿಯಿಂದ 20 ಕಿಲೋಮೀಟರ್ ದೂರದಲ್ಲಿದೆ. ಇವರಿಗೆ ಬೋಧಿಸಲು 7 ಮಂದಿ ಶಿಕ್ಷಕರಿದ್ದಾರೆ.
ಶಾಲೆಯ ಹೊರನೋಟ ಎಲ್ಲರನ್ನು ಆಕರ್ಷಿಸುತ್ತದೆ. 4 ಎಕರೆ ವಿಸ್ತೀರ್ಣದ ಶಾಲಾ ಕಟ್ಟಡದ ಮಾದರಿ ರೈಲನ್ನು ಹೋಲುತ್ತದೆ. ಹಡಗು, ವಿಮಾನದ ಚಿತ್ರಗಳು ಗೋಡೆಯಲ್ಲಿ ರಾರಾಜಿಸುತ್ತಿವೆ.
ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸದಾ ಮುಂದು. ಕ್ರೀಡೆಯಲ್ಲಿ, ಪರಿಸರ ಚಟುವಟಿಕೆಗಳಲ್ಲಿ, ಕಂಪ್ಯೂಟರ್ ಕಲಿಕೆಯಲ್ಲಿ ಹಾಗೂ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತಾ ಮುಂದು ತಾ ಮುಂದು ಎಂದು ಭಾಗವಹಿಸುತ್ತಿದ್ದು, ಹಲವು ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿಯ ಸಂಪೂರ್ಣ ಸಹಕಾರದೊಂದಿಗೆ ಈ ಶಾಲೆಯ ಯಶೋಗಾಥೆ ಇದೆ.
2007ರಲ್ಲಿ ಶಾಲೆ ಆರಂಭವಾದಾಗ ಕೇವಲ 20 ವಿದ್ಯಾರ್ಥಿಗಳಿದ್ದರು. ಇಬ್ಬರು ಶಿಕ್ಷಕರು ಈಗ 1ರಿಂದ 7ರವರೆಗೆ 85 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಚಟುವಟಿಕೆ ಮೂಲಕ ಶಿಕ್ಷಣ ಪಡೆಯುವತ್ತ ಇಲ್ಲಿ ಗಮನ ಹರಿಸಲಾಗುತ್ತಿದೆ. ಅಂತೆಯೇ ಪರಿಸರ ಸಂಬಂಧಿ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಾರೆ. ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಹಾಗೂ ಕಂಪ್ಯೂಟರ್ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಡೆಸಲಾದ ಚದುರಂಗ ಸ್ಪರ್ಧೆಯಲ್ಲಿ ಶಾಲಾ ಮಕ್ಕಳು ತಮ್ಮ ಪ್ರತಿಭೆ ಮೆರೆದಿದ್ದಾರೆ. ಹಲವು ವೈಜ್ಞಾನಿಕ ಪ್ರಯೋಗಗಳ ಮೂಲಕ ವಿಜ್ಞಾನ ಕಲಿಕೆ ಆಗುತ್ತಿದೆ. ಉತ್ತಮ ಪ್ರಯೋಗಶಾಲೆ ಇದೆ. ಯೋಗದಲ್ಲಿ ಮಕ್ಕಳು ಪಾಲ್ಗೊಳ್ಲುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ಮು೦ದು. ಹಾಗಾಗಿ, ಶಿಕ್ಷಕರೊಂದಿಗೆ ಬೆರೆತು ಶಾಲಾ ಪರಿಸರದಲ್ಲಿ ಉದ್ಯಾನ, ತರಕಾರಿ ತೋಟಗಳನ್ನು ನಿರ್ಮಿಸಿದ್ದಾರೆ.
ವಿಶ್ವ ಪರಿಸರ ದಿನ, ರಾಷ್ಟ್ರೀಯ ವಿಜ್ಞಾನ ದಿನ, ಮಹಿಳಾ ದಿನ, ರಾಷ್ಟ್ರೀಯ ಹಬ್ಬಗಳು ಎಲ್ಲವನ್ನು ಇಲ್ಲಿ ವಿದ್ಯಾರ್ಥಿಗಳು ಆಚರಿಸುತ್ತಾರೆ. ವಿಷಯ ಪರಿಣಿತರನ್ನು ಕರೆಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಲಾಗುತ್ತಿದೆ. ವಿವಿಧ ಪಕ್ಷಿಗಳ ಬಗ್ಗೆ ಮಾಹಿತಿ, ಆಕಾಶಯಾನ ಕುರಿತ ಮಾಹಿತಿ, ಪ್ರವಾಸ, ಚಿತ್ರಕಲೆ, ವೈಜ್ಞಾನಿಕ ಮಾದರಿಗಳ ತಯಾರಿ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ಕೆಲವು ಕಾರ್ಯಕ್ರಮಗಳು ಮೂಡಿಬಂದಿವೆ.
ಪಠ್ಯ ಬೋಧನೆಗಷ್ಟೇ ಶಾಲೆ ಸೀಮಿತವಾಗಿಲ್ಲ. ಮಕ್ಕಳಿಗೆ ಕಲಿಕೆ ಹೊರತುಪಡಿಸಿದ ಶಿಕ್ಷಣವನ್ನು ನೀಡುತ್ತಿದ್ದೇವೆ. ಗ್ರಾಮಸ್ಥರು ಪಂಚಾಯಿತಿ ಜಿಲ್ಲಾಡಳಿತದ ಸಹಕಾರದೊಂದಿಗೆ ಉತ್ತಮ ಶಾಲೆಯಾಗಿ ಗುರುತಿಸಿಕೊಂಡಿದೆ-ಸುನಂದಿನಿ ಶಾಲೆಯ ಮುಖ್ಯ ಶಿಕ್ಷಕಿ
ಚಿಣ್ಣರ ಕನವರಿಕೆಗಳು! ‘ನಮ್ಮ ಭೂಮಿ ಸುಂದರ’ ಇದು ವಾಟೆಕಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕೆ.ಡಿ.ಚೈತಾಲಿ ಬರೆದ ಬರಹ. ‘ಓದುವ ಬೆಳಕು’ ಯೋಜನೆಯಡಿ ಮಕ್ಕಳು ಬರೆದ ಕಥೆಗಳಲ್ಲಿ ಇದೂ ಒಂದು. ಇಂತಹ 38 ಕಥೆಗಳ ಸಂಗ್ರಹ ‘ಚಿಣ್ಣರ ಕನವರಿಕೆಗಳು’ ಕೃತಿಯಲ್ಲಿವೆ. ಪಂಚಾಯತ್ ರಾಜ್ ಇಲಾಖೆಯು ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಸಣ್ಣ ಕಥೆಬರೆಯುವ ಅಭಿಯಾನವನ್ನು ಆಯೋಜಿಸಿದ್ದು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬರೆದ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಗ್ರಂಥಪಾಲಕಿ ಸಣ್ಣಮ್ಮ ಪಿಡಿಒ ಅಬ್ದುಲ್ಲ ಸಹಶಿಕ್ಷಕಿ ಸೌಮ್ಯಾ ವಾರ್ಡ್ ಸದಸ್ಯರಾದ ಮೊಣ್ಣಪ್ಪ ಕುಸುಮಾ ಮತ್ತು ಪತ್ರಕರ್ತ ಕೂಡಂಡ ರವಿ ಕೃತಿ ಬಿಡುಗಡೆಗೆ ಕೈಜೋಡಿಸಿದ್ದಾರೆ. -ಟಿ.ಬಿ.ಕುಮಾರಸ್ವಾಮಿಸಹ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.