ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಗಂಟೆಯಲ್ಲೇ ಕಳವು ಆರೋಪಿ ಬಂಧನ: ಮಡಿಕೇರಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಮನೆಯಲ್ಲಿರುವ ಒಂಟಿ ಮಹಿಳೆಯರು ಎಚ್ಚರಿಕೆ ವಹಿಸಲು ಸಲಹೆ
Last Updated 14 ಅಕ್ಟೋಬರ್ 2022, 11:19 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಅಪ್ಪಚ್ಚುಕವಿ ರಸ್ತೆಯಲ್ಲಿನ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರಿಂದ ಚಿನ್ನದ ಸರ ಹಾಗೂ ಕಿವಿಯೋಲೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 65.9 ಗ್ರಾಂ ತೂಕದ ಚಿನ್ನದ ಸರ ಹಾಗೂ ₹ 52,600 ನಗದನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಗೌಳಿಬೀದಿ ನಿವಾಸಿ ಎಚ್.ಆರ್.ಲೋಕೇಶ್ (42) ಹಾಗೂ ಮಹದೇವಪೇಟೆಯ ಬಿ.ಎಸ್.ವಸಂತ (60) ಬಂಧಿತರು. ಕಳವು ಮಾಡಿದ್ದ ಚಿನ್ನದ ಸರವನ್ನು ಆರೋಪಿಯಿಂದ ತೆಗೆದುಕೊಂಡು ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಗಿರವಿ ಇಟ್ಟಿದ್ದ ಆರೋಪಿಯನ್ನೂ ಬಂಧಿಸಿರುವುದು ವಿಶೇಷ.

ಪ್ರಕರಣದ ವಿವರ:

ಅಪ್ಪಚ್ಚುಕವಿ ರಸ್ತೆಯ ನಿವಾಸಿ ಇಂದೂಮತಿ ರಾವ್‌ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅ. 11ರಂದು ಮಧ್ಯಾಹ್ನ ಮನೆಗೆ ನುಗ್ಗಿದ ಪ್ರಮುಖ ಆರೋಪಿ ಲೋಕೇಶ್ ಮಹಿಳೆಯ ಬಾಯಿ ಮುಚ್ಚಿ ಚಿನ್ನದಸರ ಹಾಗೂ ಓಲೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ವೇಳೆ ಮಹಿಳೆಗೆ ಗಾಯಗಳಾಗಿತ್ತು.

ಇತ್ತೀಚಿನ ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಕಳವು ನಡೆದಿರುವ ಕುರಿತು ಜನರಲ್ಲಿ ಸಾಕಷ್ಟು ಆತಂಕ ಮೂಡಿತ್ತು. ಇದು ಪೊಲೀಸರಿಗೆ ಸವಾಲಾಗಿಯೂ ಪರಿಣಮಿಸಿತ್ತು.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಜತೆಗೆ, ಕದ್ದ ಆಭರಣವನ್ನು ತೆಗೆದುಕೊಂಡು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಟ್ಟಿದ್ದ ವಸಂತ ಎಂಬಾತನನ್ನು ಪೊಲೀಸರು ಬಂಧಿಸಿದರು.

ಘಟನೆ ನಡೆದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದರು. ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ತಂಡವೊಂದನ್ನು ರಚಿಸಿದ್ದರು.

ಸಿಪಿಐ ಎಚ್.ಜೆ.ಶಿವಶಂಕರ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಎಂ.ಶ್ರೀನಿವಾಸ್, ರಾಧಾ, ಲಕ್ಷ್ಮಣ್‌ ಕಾಮಣ್ಣನವರ್, ಸಿಬ್ಬಂದಿಯಾದ ಕೆ.ಕೆ.ದಿನೇಶ್, ನಾಗರಾಜ್ ಎಸ್ ಕಡೆಗನ್ನವರ್, ಬಿ.ಒ.ಸುನಿಲ್, ಪ್ರದೀಪ್‌ಕುಮಾರ್, ರುದ್ರಪ್ಪ, ಕಿರಣ್, ಸುಧೀರ್‌ಕುಮಾರ್, ಸುಮಿತಾ, ದೇವರಾಜ್, ರೇವಪ್ಪ, ರಾಜೇಶ್, ಗಿರೀಶ್ ಕಾರ್ಯಾಚರಣೆ ತಂಡದಲ್ಲಿದ್ದರು.

ಎಲ್ಲರೂ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು, ಅಪರಿಚಿತರ ಬಗ್ಗೆ ನಿಗಾ ವಹಿಸಬೇಕು, ಒಂಟಿಯಾಗಿದ್ದಾಗ ಮನೆಯ ಬಾಗಿಲಿಗೆ ಚಿಲಕ ಹಾಕಿಕೊಳ್ಳಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT