ಭಾನುವಾರ, ಏಪ್ರಿಲ್ 11, 2021
33 °C
ಮಡಿಕೇರಿ ದಸರಾ ಅನುದಾನಕ್ಕೆ ನಿಯೋಗ: ಕಾಂಗ್ರೆಸ್‌ ಸದಸ್ಯೆ ಕೆ.ಪಿ. ಚಂದ್ರಕಲಾ ಆಕ್ಷೇಪ

ಕೊಡಗು ಪರಿಹಾರ ಸಾಮಗ್ರಿ ವಿಷಯವಾಗಿ ಜಿ.ಪಂ. ಸಭೆಯಲ್ಲಿ ‘ರಾಜಕೀಯ ಪ್ರತಿಷ್ಠೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ಭೂಕುಸಿತದಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಪರಿಹಾರ ಸಾಮಗ್ರಿ ವಿಷಯ ಮಂಗಳವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯು ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದು, ವಾಗ್ದಾಳಿ, ಬಿರುಸಿನ ಮಾತುಕತೆಯಿಂದಾಗಿ ಕೆಲ ನಿಮಿಷಗಳ ಸಭೆ ಮುಂದೂಡಲಾಯಿತು.

ಇಲ್ಲಿನ ಹಳೇ ಕೋಟೆ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ರಾಜ್ಯದ ವಿವಿಧ ಮೂಲೆಗಳಿಂದ ಹರಿದು ಬಂದಿದ್ದ ಆಹಾರ ಸಾಮಗ್ರಿ ವಿತರಣೆ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್‌ ಸದಸ್ಯರ ನಡುವೆ ಗಲಾಟೆ ನಡೆಯಿತು. ಎರಡು ಕಡೆಯ ಸದಸ್ಯರು ಏರುದನಿಯಲ್ಲಿ ಕಿರುಚಾಡಿದರು. ಸಭೆ, ದಿಕ್ಕು ತಪ್ಪುತ್ತಿರುವುದನ್ನು ಕಂಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌ ಅವರು ಸಭೆಯನ್ನು ಮುಂದೂಡಿದರು.

ಆರಂಭದಲ್ಲಿ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಹಿರಿಯ ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ‘ಮಡಿಕೇರಿ ದಸರಾಕ್ಕೆ ಅನುದಾನ ಕೋರಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿಗೆ ನಿಯೋಗ ತೆರಳಲು ನಿರ್ಧರಿಸಿರುವುದು ನಾಚಿಕೆಗೇಡಿನ ವಿಷಯ. ಜಿಲ್ಲೆಯ ಕಣ್ಣೀರಿನಲ್ಲಿ ಮುಳುಗಿದೆ. ಸರಳವಾಗಿ ದಸರಾ ಆಚರಿಸಲಿ; ಅದೇ ಹಣವನ್ನು ಸಂತ್ರಸ್ತರ ಪುನರ್ವಸತಿಗೆ ವಿನಿಯೋಗಿಸಲಿ’ ಎಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿದ ಅಧ್ಯಕ್ಷ ಬಿ.ಎ. ಹರೀಶ್‌, ಮಡಿಕೇರಿ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರೆ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರು ಗೋಣಿಕೊಪ್ಪಲು ದಸರಾವನ್ನೂ ಸರಳವಾಗಿ ನಡೆಸುತ್ತೇವೆ ಎಂದು ಸಭೆ ಗಮನಕ್ಕೆ ತಂದರು. ಅದಕ್ಕೂ ಆಕ್ಷೇಪಿಸಿದ ಚಂದ್ರಕಲಾ ‘ಸರಳ ದಸರಾಕ್ಕೆ ₹ 2 ಕೋಟಿ ಅನುದಾನ ಬೇಕೇ’ ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯೆ ಯಲದಾಳ್‌ ಪದ್ಮಾವತಿ, ’ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಭೂಕುಸಿತದಿಂದ ಹೆಚ್ಚಿನ ಅನಾಹುತವಾಗಿದೆ. ಸಂತ್ರಸ್ತರಿಗೆ ವಿತರಿಸಿದ ₹ 3,800 ಕೆಲವರಿಗೆ ತಲುಪಿಲ್ಲ. ಮನೆ, ಆಸ್ತಿ ಕಳೆದುಕೊಂಡು ನೂರಾರು ಮಂದಿ ಪರಿಹಾರ ಕೇಂದ್ರವನ್ನು ಸೇರಿದ್ದಾರೆ. ಅವರಿಗೆ ಆದಷ್ಟು ಶೀಘ್ರವೇ ಪುನರ್ವಸತಿ ಕಲ್ಪಿಸಬೇಕು. ಜತೆಗೆ, ವಾಸಕ್ಕೆ ಮನೆ ಯೋಗ್ಯವೆಂದು ಸಮೀಕ್ಷೆ ನಡೆಸಿದ ಅಧಿಕಾರಿಗಳು ವರದಿ ನೀಡಿರುವುದೂ ಸಮಸ್ಯೆಯಾಗಿದೆ. ಪರ್ಯಾಯ ಜಾಗದ ವ್ಯವಸ್ಥೆಯ ಮಾಹಿತಿಯೂ ಇಲ್ಲ’ ಎಂದು ಸಭೆಯ ಗಮನಕ್ಕೆ ತಂದರು.

ಕಾಂಗ್ರೆಸ್‌ ಸದಸ್ಯ ಅಬ್ದುಲ್‌ ಲತೀಫ್‌ ಅವರು, ‘ಆಹಾರ ಸಾಮಗ್ರಿ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಕೆಲವು ಪಂಚಾಯಿತಿಗಳಿಗೆ ಇನ್ನೂ ಆಹಾರ ಕಿಟ್‌ ಲಭಿಸಿಲ್ಲ. ಬಿಜೆಪಿ ಮುಖಂಡರು, ಅವರ ಪಕ್ಷದ ಕಾರ್ಯಕರ್ತರಿಗೆ ಹಂಚಿಕೆ ಮಾಡುವ ಮೂಲಕ ತಾರತಮ್ಯ ಎಸಗಿದ್ದಾರೆ’ ಎಂದು ಆಪಾದಿಸಿದರು.

ಅದಕ್ಕೆ ಬಿಜೆಪಿ ಸದಸ್ಯ ಲತೀಫ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಸಂತ್ರಸ್ತರ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ’ ಎಂದು ಎಚ್ಚರಿಸಿದರು.

‘ಸಂತ್ರಸ್ತರ ಪರವಾಗಿ ಇಡೀ ಕೊಡಗು ಜಿಲ್ಲೆಯೇ ಮಿಡಿದಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲೂ ಯಾರೂ ರಾಜಕೀಯ ಮಾಡಬಾರದು’ ಎಂದು ಬಿಜೆಪಿಯ ಕೆ.ಆರ್‌. ಮಂಜುಳಾ ಅವರು ಕೋರಿದರು. ಆಗ ಸರಿತಾ ಪೂಣಚ್ಚ ಅವರು ‘ನೀವೆಷ್ಟು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದೀರಾ’ ಎಂದು ಪ್ರಶ್ನಿಸಿದರು. ‘ನನ್ನನ್ನು ಕೇಳಲು ನೀವ್ಯಾರು? ನನ್ನ ಕೌಟುಂಬಿಕ ಸಮಸ್ಯೆಯ ನಡುವೆಯೂ ಸಂತ್ರಸ್ತರಿಗೆ ನೆರವು ನೀಡಿದ್ದೇನೆ’ ಎಂದು ಏರುದನಿಯಲ್ಲಿ ಹೇಳಿದರು. ಆಗ ಕಾಂಗ್ರೆಸ್‌– ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು