ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಬ್ಬಕ್ಕೆ ದುಬಾರೆ ಸಜ್ಜು

Last Updated 28 ಅಕ್ಟೋಬರ್ 2012, 10:00 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರವಾದ ನಂಜರಾಯಪಟ್ಟಣ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಅರಣ್ಯ ಇಲಾಖೆ ವತಿಯಿಂದ ಅ.30 ರಂದು `ಆನೆ ಹಬ್ಬ~ ನಡೆಸಲು ಸಿದ್ಧತೆ ನಡೆಸಲಾಗಿದೆ.

ಆನೆ ಹಬ್ಬವು ಸಾಕಾನೆಗಳನ್ನು ವೈವಿಧ್ಯಮಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುವ ದಿಸೆಯಲ್ಲಿ ಸಹಕಾರಿ. ಜೊತೆಗೆ ಆನೆ ಮತ್ತು ಮಾನವ ಸಂಘರ್ಷದ ಅಂತರ ಕಡಿಮೆ ಮಾಡುವ ದಿಸೆಯಲ್ಲಿ ಈ ಹಬ್ಬ ಉತ್ತಮ ಬೆಳವಣಿಗೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಸಂಘಟಿಸಿದ್ದ ಆನೆಹಬ್ಬವನ್ನು ಈ ವರ್ಷ ಮತ್ತೆ ಸಂಘಟಿಸಲಾಗಿದೆ. ಆನೆಹಬ್ಬದಲ್ಲಿ ಜನರನ್ನು ರಂಜಿಸಲು ದುಬಾರೆ ಸಾಕಾನೆ ಶಿಬಿರದ 20 ಆನೆಗಳು ಸಿದ್ಧಗೊಂಡಿವೆ. ಅ.30 ರಂದು ಬೆಳಿಗ್ಗೆ 9.30 ಕ್ಕೆ ಸಾಕಾನೆಗಳಿಂದ ವೈವಿಧ್ಯಮಯ ಆಟೋಟಗಳು ನಡೆಯಲಿದೆ.

ಈಗಾಗಲೇ ಸಾಕಾನೆಗಳು ಫುಟ್‌ಬಾಲ್ ಸೇರಿದಂತೆ ವೈವಿಧ್ಯಮಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಅರಣ್ಯ ಇಲಾಖೆ ವತಿಯಿಂದ ಆನೆಗಳಿಗೆ ತಾಲೀಮು ನೀಡಲಾಗುತ್ತಿದೆ. ಮಾವುತರು, ಕಾವಾಡಿಗರು ಸಂಜ್ಞೆಗಳ ಮೂಲಕ ಸಾಕಾನೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಆನೆಗಳು ಫುಟ್‌ಬಾಲ್‌ನ್ನು ಒದೆಯುವುದು, ಒಂಟಿ ಕಾಲಿನಲ್ಲಿ ನಡೆಯುವುದು, ಒಂದು ಆನೆಯ ಬಾಲವನ್ನು ಮತ್ತೊಂದು ಆನೆ ಹಿಡಿದು ವೃತ್ತದಲ್ಲಿ ಸುತ್ತುವುದು, ಪರಸ್ಪರ ಕಿವಿ ಮತ್ತು ಬಾಲ ಹಿಡಿದು ನಡೆದಾಡುವುದು ಪ್ರವಾಸಿಗರಲ್ಲಿ ರೋಮಾಂಚನ ಮೂಡಿಸಲಿದೆ.

ಕ್ರೀಡಾ ಸಚಿವ ರಂಜನ್ ಹೆಸರಿನ `ರಂಜನ್~ ಎಂಬ ಮರಿಯಾನೆ ಮಾವುತರ ನಿರ್ದೇಶನದಂತೆ ಇತರೆ ಆನೆಗಳು ಮತ್ತು ಪ್ರವಾಸಿಗರಿಗೆ ನಮಸ್ಕರಿಸುವುದು ಎಲ್ಲರಿಗೂ ಖುಷಿ ಕೊಡುತ್ತಿದೆ. ಆನೆಗಳ ಕ್ರೀಡಾಲೋಕಕ್ಕೆ ಹಿರಿಯ ಆನೆಗಳಾದ ವಿಕ್ರಮ್, ಗೋಪಿ ಸಾರಥ್ಯ ವಹಿಸಿವೆ.

ಪ್ರತಿ ವರ್ಷ ಮೈಸೂರು ದಸರಾಕ್ಕೆ ತೆರಳುವ ಶಿಬಿರದ ಹಿರಿಯ ಆನೆಗಳಾದ ಹರ್ಷ, ಪ್ರಶಾಂತ್, ವಿಕ್ರಂ, ವಿಜಯ, ಗೋಪಿ, ಕಾವೇರಿ ಮಾವುತರ ಮಾರ್ಗದರ್ಶನದಲ್ಲಿ ಕಿರಿಯ ಆನೆಗಳಿಗೆ ತರಬೇತಿ ನೀಡುತ್ತಿವೆ.

ಉಳಿದಂತೆ ಸಾಕಾನೆಗಳಾದ ರಂಜನ್, ಶಿವಗಂಗೆ, ತೀರ್ಥರಾಮ, ಚಂದ್ರ, ರಾಮ, ಅಜ್ಜಯ್ಯ ಮತ್ತಿತರ ಆನೆಗಳು ತಾಲೀಮಿನಲ್ಲಿ ತೊಡಗಿವೆ. ಕಾಡಂಚಿನ ಗ್ರಾಮಗಳಿಗೆ ದಾಳಿಯಿಟ್ಟು ಕೃಷಿಕರ ಬೆಳೆ ಹಾನಿ ಮಾಡುತ್ತಿದ್ದ ಪುಂಡಾನೆಗಳನ್ನು ಕಳೆದ ಮೂರುವರೆ ವರ್ಷದ ಹಿಂದೆ ಸೆರೆಹಿಡಿದು ಶಿಬಿರದಲ್ಲಿ ತರಬೇತಿ ನೀಡಲಾಗಿದೆ. ಶಿಬಿರಕ್ಕೆ ಬರುವ ಪ್ರವಾಸಿಗರಿಗೆ ಮನೋರಂಜನೆ ನೀಡುವ ಉದ್ದೇಶದೊಂದಿಗೆ ಆನೆಗಳು ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಆನೆಗಳಿಗೆ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಎಂದು ಮಡಿಕೇರಿ ವಿಭಾಗದ ಡಿಸಿಎಫ್ ಧನಂಜಯ್ ತಿಳಿಸಿದ್ದಾರೆ.

ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಆನೆಗಳಿಗೆ ತರಬೇತಿ ನೀಡುವ ಮೂಲಕ ಅವುಗಳ ಆಹಾರಾಭ್ಯಾಸ, ಸ್ನಾನ ಮಾಡಿಸುವುದು, ಅವುಗಳ ಜೀವನ ಕ್ರಮದ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಲಾಗುವುದು ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಯಾವುದೇ ವನ್ಯಪ್ರಾಣಿಗಳನ್ನು ಮರ ಸಾಗಾಣಿಕೆ, ದೇವರ ಪೂಜಾ ಉತ್ಸವ, ಸರ್ಕಸ್‌ಗಳಿಗೆ ಬಾಡಿಗೆ ನೀಡುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಾಕಾನೆಗಳಿಗೆ ವ್ಯಾಯಾಮದ ದೃಷ್ಟಿಯಿಂದ ಕ್ರೀಡಾ ತಾಲೀಮು ನೀಡಲಾಗುತ್ತಿದೆ.

ಶಿಬಿರದಲ್ಲಿ ಈ ಆನೆಗಳು ಕೂಡ ಇತರೇ ಸಾಕಾನೆಗಳೊಂದಿಗೆ ಹೊಂದಿಕೊಂಡು ಜೀವನ ನಡೆಸುವುದು ಮತ್ತು ಅವುಗಳನ್ನು ಕೂಡ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಧೈರ್ಯ ತುಂಬಿಸಿ ದಸರಾ ಮತ್ತಿತರ ಚಟುವಟಿಕೆಗಳಿಗೆ ನಿರ್ಭಯವಾಗಿ ಕಳುಹಿಸಲು ಈ ಕ್ರೀಡಾ ತಾಲೀಮು ಸಹಕಾರಿ ಎಂದು ಅರಣ್ಯ ವಲಯಾಧಿಕಾರಿ ಎಂ.ಎಂ. ಅಚ್ಚಪ್ಪ ತಿಳಿಸಿದರು.

ಆನೆಗಳಿಗೆ ಹುಷಾರಿಲ್ಲದಿರುವಾಗ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಮಾವುತರು ಹೇಳಿದಾಗ ಆನೆಗಳು ನೆಲದಲ್ಲಿ ಕೂರುವುದು, ಏಳುವುದು, ಮಲಗಲು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ಶಿಬಿರದಲ್ಲಿ ಆನೆಗಳಿಗೆ ತರಬೇತಿ ನೀಡುತ್ತಿರುವ ಮಾವುತ ಜೆ.ಕೆ.ಡೋಬಿ ಸಾಕಾನೆಗಳ ಪಾಲಿಗೆ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT