ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ನೌಕರರ ಜಿಲ್ಲಾ ಪಂಚಾಯತ್ ಚಲೋ

Last Updated 16 ಫೆಬ್ರುವರಿ 2011, 8:40 IST
ಅಕ್ಷರ ಗಾತ್ರ

ಮಡಿಕೇರಿ: ಮೂರನೇ ಹಣಕಾಸು ಆಯೋಗದ ಶಿಫಾರಸಿನಂತೆ ಗ್ರಾಮ ಪಂಚಾಯ್ತಿಗಳ ಅನುದಾನವನ್ನು ಕನಿಷ್ಠ 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು. ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ಒದಗಿಸಬೇಕು ಎಂಬುವೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯ್ತಿ ನೌಕರರು, ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ತಲೆಹೊರೆ ಕಾರ್ಮಿಕರ ಸಂಘ ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ‘ಜಿಲ್ಲಾ ಪಂಚಾಯತ್ ಚಲೋ’ ನಡೆಸಿದವು.

ಕೊಡಗು ಜಿಲ್ಲಾ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಗ್ರಾಮ ಪಂಚಾಯತ್ ನೌಕರರು ‘2008ರಲ್ಲಿ ಮೂರನೇ ಹಣಕಾಸು ಆಯೋಗ ಸಲ್ಲಿಸಿರುವ ಶಿಫಾರಸಿನಲ್ಲಿ 4 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯ್ತಿಗಳಿಗೆ ರೂ. 9 ಲಕ್ಷ, 4001ರಿಂದ 8000 ಜನಸಂಖ್ಯೆವರೆಗಿನ ಗ್ರಾಮ ಪಂಚಾಯ್ತಿಗಳಿಗೆ ರೂ. 12 ಲಕ್ಷ ಹಾಗೂ 8000ಕ್ಕೂ ಮೀರಿದ ಜನಸಂಖ್ಯೆಯಿರುವ ಗ್ರಾಮ ಪಂಚಾಯ್ತಿಗಳಿಗೆ ರೂ. 15 ಲಕ್ಷ ರೂಪಾಯಿ ಅನುದಾನ ನೀಡಲು ಕೋರಲಾಗಿದೆ.

2010-11ರ ಬಜೆಟ್ ಮಂಡಿಸುವಾಗ ಇದನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರೂ ಅದು ಇದುವರೆಗೆ ಜಾರಿಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಹಣಕಾಸು ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಸಂಪೂರ್ಣ ಜಾರಿಗೊಳಿಸಿದಂತೆಯೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೆ, ಅನುದಾನದಲ್ಲಿ ನೌಕರರ ಸಂಬಳಕ್ಕೆ ಪ್ರತ್ಯೇಕ ಹೆಡ್ ಮೂಲಕ ವ್ಯವಸ್ಥೆ ಮಾಡುವ ಭರವಸೆಯೂ ಕಾರ್ಯಗತವಾಗಿಲ್ಲ. ಅನುದಾನದಲ್ಲಿ ಶೇ 40ರಷ್ಟು ಹಣವನ್ನು ಪ್ರತ್ಯೇಕ ಹೆಡ್ ಮೂಲಕ ನೀಡುವಂತೆ ಪದೇ ಪದೇ ಒತ್ತಾಯಿಸಲಾಗುತ್ತಿದೆ. ಆದರೆ, ಆಯೋಗದ ಶಿಫಾರಸು ಜಾರಿಗೆ ಬಾರದಿರುವುದರಿಂದ ಪಂಚಾಯ್ತಿಗಳಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲ. ಜೊತೆಗೆ, ನೌಕರರಿಗೆ ಸಂಬಳ ದೊರಕುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರು ಅನುದಾನ ಹೆಚ್ಚಿಸುವ ಭರವಸೆ ನೀಡಿದ್ದರೂ ಇದುವರೆಗೆ ಈಡೇರಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಭವಿಷ್ಯ ನಿಧಿ ಜಾರಿಗೆ ಸರ್ಕಾರ ನಿರ್ದೇಶನ ನೀಡಿದ್ದರೂ ಕೆಳಹಂತದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಇದುವರೆಗೆ ಜಾರಿಗೊಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಭವಿಷ್ಯ ನಿಧಿ ಸೌಲಭ್ಯ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ಸೇರಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಖಾಲಿಯಿರುವ ಕಾರ್ಯದರ್ಶಿ-2 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಇತರ ಇಲಾಖೆಗಳಲ್ಲಿ ಕಾರ್ಯದರ್ಶಿ-2 ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಕಳಿಸಬೇಕು.

ಎಸ್ಸೆಸ್ಸೆಲ್ಸಿ ಪಾಸಾದ ನೀರಗಂಟೆ ಆಪರೇಟರ್ ಸಿಪಾಯಿಗಳಿಗೆ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು. ಗಣಕಯಂತ್ರ ಸಹಾಯಕರನ್ನು ಗ್ರಾಮ ಪಂಚಾಯ್ತಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು. ಈ ಮಧ್ಯೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿ ಹಮಾಲಿ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹಮಾಲಿ ಕಾರ್ಮಿಕರ ಫೆಡರೇಷನ್ ಆಗ್ರಹಿಸಿತು. ಆನಂತರ ಜಿ.ಪಂ. ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈದ್ ಮಿಲಾದ್ ಸೌಹಾರ್ದ ಜಾಥಾ
ಕುಶಾಲನಗರ: ಇಲ್ಲಿಗೆ ಸಮೀಪದ ಸುಂಟಿಕೊಪ್ಪ, ಏಳನೇ ಹೊಸಕೋಟೆಯಲ್ಲಿ ಮಂಗಳವಾರ ಮುಸ್ಲಿಂ ಸಮಾಜದ ಸದಸ್ಯರು ಸಂಭ್ರಮ, ಸಡಗರದಿಂದ ಈದ್ ಮಿಲಾದ್ ಆಚರಿಸಿದರು. ಹೊಸ ಉಡುಗೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಮುಖಂಡರಾದ ಖತೀಬ್ ಉಸ್ಮಾನ್, ಮೊಯಿದ್ದೀನ್ ಕುಟ್ಟಿ ಹಾಜಿ, ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಜಿ.ಪಂ.ಮಾಜಿ ಸದಸ್ಯರಾದ ವಿ.ಪಿ.ಶಶಿಧರ್, ಎ.ಲೋಕೇಶ್‌ಕುಮಾರ್ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಗ್ರಾ.ಪಂ.ಸದಸ್ಯ ಸುಕುಮಾರ್, ಮುಖಂಡರಾದ ಎಸ್.ಎಂ.ನಾಸೀರ್, ವೈ.ಎಂ.ಕರುಂಬಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT