ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ

ಕುಶಾಲನಗರ: ಮಾದರಿಯಾದ ಸಹಕಾರ ಸಂಘ
Last Updated 6 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗಿನ ವಾಣಿಜ್ಯ ಕೇಂದ್ರ ಕುಶಾಲನಗರದ ಸಹಕಾರ ಸಂಸ್ಥೆಯೊಂದು ವಿದ್ಯುತ್ ಸಮಸ್ಯೆಗೆ ಪರ್ಯಾಯವಾಗಿ ಸೋಲಾರ್ ವಿದ್ಯುತ್ ಉತ್ಪಾದನೆಯಂತಹ ಮಹತ್ವಪೂರ್ಣ ಯೋಜನೆಯನ್ನು ಜಾರಿಗೆ ತರುವ ಮೂಲಕ ತಮ್ಮ ಆದಾಯದ ಮೂಲವನ್ನು ವೃದ್ಧಿಸಿಕೊಳ್ಳಲು ಮುಂದಾಗಿದೆ. ಇತರೆ ಸಹಕಾರ ಸಂಸ್ಥೆಗಳಿಗೆ ಇದು ಮಾದರಿಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಏಕೈಕ ವ್ಯವಸಾಯೋತ್ಪಾನ ಸಹಕಾರ ಸಂಘವು ಉತ್ತಮ ವಹಿವಾಟು ಮೂಲಕ ಪ್ರತಿವರ್ಷ ಲಕ್ಷಾಂತರ ರೂಪಾಯಿ ಆದಾಯಗಳಿಸುತ್ತ ಅಭಿವೃದ್ಧಿಯತ್ತ ಮುಂದಕ್ಕೆ ಸಾಗುತ್ತಿದೆ.

ಇದೀಗ ಈ ಸಂಸ್ಥೆಯು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಿದೆ. ಜುಲೈನಿಂದಲೇ ಪ್ರಾಯೋಗಿಕ ವಿದ್ಯುತ್ ಉತ್ಪಾದನೆ ಶುರುವಾಗಿದ್ದು, ಮಾಸಿಕ ಸರಾಸರಿ ₹ 25 ಸಾವಿರ ಆದಾಯ ಸಿಗುವ ನಿರೀಕ್ಷೆ ಹೊಂದಿದೆ.

ಸಂಸ್ಥೆಗೆ ಸೇರಿದ ರೈತ ಸಹಕಾರ ಭವನದ ಮೇಲ್ಚಾವಣಿ ಮೇಲೆ ಸ್ವಂತ ಸೋಲಾರ್ ವಿದ್ಯುತ್ ತಯಾರಿಕೆಗೆ ಮುಂದಾಗಿದೆ. ಮೈಸೂರು ಹಾಗೂ ಕೊಡಗಿನ ಗಡಿ ಭಾಗದ ಕುಶಾಲನಗರ ಪಟ್ಟಣ ವಿಭಿನ್ನವಾದ ವಾತಾವರಣದಿಂದ ಗುರುತಿಸಿಕೊಂಡಿದೆ. ಜಿಲ್ಲೆಯ ಇತರೆ ಭಾಗಗಳಿಗೆ ಹೋಲಿಸಿದರೆ ಕುಶಾಲನಗರ ಪಟ್ಟಣ ಮಾತ್ರ ಮೈಸೂರು ಜಿಲ್ಲೆಯ ಮಾದರಿಯಲ್ಲಿಯೇ ಬಯಲು ಸೀಮೆಯ ವಾತಾವರಣವನ್ನು ಹೊಂದಿದ್ದು, ಕುಶಾಲನಗರ ಹೋಬಳಿ ಹೊರತುಪಡಿಸಿದರೆ ಜಿಲ್ಲೆಯ ಉಳಿದ ಭಾಗದ ಬೆಟ್ಟಗುಡ್ಡ ಹಾಗೂ ತೋಟಗಳಿಂದ ಆವೃತ್ತವಾಗಿದೆ.

ಈ ಭಾಗಗಳಲ್ಲಿ ಪ್ರತಿವರ್ಷ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ, ಕುಶಾಲನಗರ ವ್ಯಾಪ್ತಿಯಲ್ಲಿ ಮಾತ್ರ ಭಿನ್ನವಾದ ಹವಾಗುಣ ಇರುತ್ತದೆ. ಸಾಮಾನ್ಯವಾಗಿ ನೆರೆಯ ಮೈಸೂರು ಮತ್ತು ಹಾಸನ ಜಿಲ್ಲೆಗಳ ವಾತಾವರಣ ಇಲ್ಲಿದೆ. ಈ ಕಾರಣಕ್ಕೆ ಇಲ್ಲಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ರೈತ ಸಹಕಾರ ಭವನದ ಚಾವಣಿಯನ್ನು ಸದುಪಯೋಗಪಡಿಸಿಕೊಂಡಿದೆ. 100X30 ಅಡಿ ವಿಸ್ತೀರ್ಣದಲ್ಲಿ 42 ಕಿಲೋ ವಾಟ್‌ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಸಾಧ್ಯವಾಗಬಲ್ಲ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿದ್ದು, ವಿದ್ಯುತ್ ಉತ್ಪಾದನೆ ಆರಂಭವಾಗಿದೆ.

ಈ ಮೂಲಕ ಜಿಲ್ಲೆಯ ಅತೀ ದೊಡ್ಡ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ತಲಾ 320 ಡಬ್ಲ್ಯೂಪಿ ಸಾಮರ್ಥ್ಯದ 133 ಸೋಲಾರ್ ಪ್ಯಾನಲ್‌ಗಳನ್ನು ಈ ಘಟಕದಲ್ಲಿ ಅಳವಡಿಸಲಾಗಿದೆ. ಡಿಸಿ ರೂಪದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ಅನ್ನು ಎಸಿ ರೂಪಕ್ಕೆ ಪರಿವರ್ತಿಸಲು 50 ಕಿಲೋ ವ್ಯಾಟ್‌ ಸಾಮರ್ಥ್ಯದ ಪರಿವರ್ತಕ, 4 ರಾಸಾಯನಿಕ ಅರ್ಥಿಂಗ್ ವ್ಯವಸ್ಥೆ, ಸಿಡಿಲಾಘಾತ ತಡೆದುಕೊಳ್ಳುವ ತಾಂತ್ರಿಕ ವ್ಯವಸ್ಥೆಯನ್ನು ಮಾಡಲಾಗಿದೆ.

ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಆರಂಭಿಸಲು ಒಟ್ಟು ₹ 24.90 ಲಕ್ಷ ವೆಚ್ಚ ತಗುಲಿದೆ. ಈಗ ರೈತ ಸಹಕಾರ ಭವನವಿರುವ ಕಟ್ಟಡದ ಹಿಂದೆ ಜ್ಯೂಸ್ ಫ್ಯಾಕ್ಟರಿ ಆಗಿತ್ತು. ಆಗ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಕಿತ್ತಳೆ, ಅನಾನಾಸು ಸೇರಿದಂತೆ ವಿವಿಧ ಹಣ್ಣುಗಳ ಜ್ಯೂಸ್ ಇಲ್ಲಿ ತಯಾರಾಗುತ್ತಿತ್ತು. ಜ್ಯಾಮ್, ಜೆಲ್ಲಿಯೂ ಉತ್ಪಾದನೆ ಆಗುತ್ತಿತ್ತು. ಕಾರಣಾಂತರದಿಂದ ಜ್ಯೂಸ್ ಫ್ಯಾಕ್ಟರಿ ನಷ್ಟದಲ್ಲಿದ್ದರಿಂದ ಮುಚ್ಚಲಾಗಿತ್ತು. ಸುಮಾರು 2 ದಶಕ ಕಾಲ ನಿರುಪಯುಕ್ತವಾಗಿದ್ದ ಕಟ್ಟಡವನ್ನು 10 ವರ್ಷಗಳ ಹಿಂದೆ ಎಪಿಸಿಎಂಎಸ್ ನವೀಕರಣಗೊಳಿಸಿ ಬೃಹತ್ ಸಭಾಂಗಣವನ್ನಾಗಿ ಮಾರ್ಪಡಿಸಿದೆ.

ಮದುವೆ ಕಾರ್ಯಗಳು ಈಗ ಇಲ್ಲಿ ನಡೆಯುತ್ತಿದ್ದು, ಎಪಿಸಿಎಂಎಸ್‌ಗೆ ಉತ್ತಮ ವರಮಾನ ತಂದುಕೊಡುತ್ತಿದೆ. ಇದೀಗ ಸೋಲಾರ್ ವಿದ್ಯುತ್ ಘಟಕದ ಮೂಲಕ ಮತ್ತೊಂದು ಆದಾಯದ ಮೂಲ ಸೇರಿದಂತಾಗಿದೆ. ಕಳೆದರಡು ತಿಂಗಳು ಮೋಡ ಮತ್ತು ಮಳೆಯ ವಾತಾವರಣ ಇದ್ದ ಕಾರಣ ದಿನಕ್ಕೆ 100 ಯುನಿಟ್‌ಗಳಷ್ಟೇ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಸೆಪ್ಟೆಂಬರ್‌ನಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಈಗ ದಿನಕ್ಕೆ ಗರಿಷ್ಠ 260 ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇಲ್ಲಿ ಉತ್ಪಾದನೆ ಆಗುವ ವಿದ್ಯುತ್‌ಅನ್ನು ಕುಶಾಲನಗರ ವಿದ್ಯುತ್ ಕೇಂದ್ರದ ಮೂಲಕ ಕೆಪಿಟಿಸಿಎಲ್‌ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಯೂನಿಟ್‌ಗೆ ₹ 6.61ಕ್ಕೆ ಮಾರಾಟದ ಒಪ್ಪಂದ ಆಗಿದ್ದರೂ ಈಗ ವಿದ್ಯುತ್ ಬೇಡಿಕೆ ಕುಸಿದಿರುವ ಕಾರಣ ಯುನಿಟ್‌ಗೆ ₹ 3.60 ಮಾತ್ರ ಸಿಗುತ್ತಿದೆ.

ರೈತ ಸಹಕಾರ ಭವನದಲ್ಲಿ ಮದುವೆ ಸೇರಿದಂತೆ ವರ್ಷವಿಡೀ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಹಾಗಾಗಿ, ತಿಂಗಳಿಗೆ ₹ 15ರಿಂದ 20 ಸಾವಿರ ವಿದ್ಯುತ್ ಬಿಲ್ ಬರುತ್ತಿತ್ತು. ಈಗ ಇಲ್ಲಿಯೇ ವಿದ್ಯುತ್ ಉತ್ಪಾದನೆ ಆಗುತ್ತಿರುವ ಕಾರಣ ಅಗತ್ಯ ವಿದ್ಯುತ್ ಬಳಸಿಕೊಂಡು ಹೆಚ್ಚಾಗಿದ್ದನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡಲಾಗುತ್ತಿದೆ. ಸೋಲಾರ್ ವಿದ್ಯುತ್ ಉತ್ಪಾದನೆ ಆರಂಭಿಸಿದ್ದರಿಂದ ವಿದ್ಯುತ್ ಬಿಲ್‌ನಲ್ಲಿ ಕಡಿತ ಆಗುವುದರ ಜತೆಗೆ ಮಾಸಿಕ ಸರಾಸರಿ 25 ಸಾವಿರ ರೂಪಾಯಿ ಆದಾಯ ಎಪಿಸಿಎಂಎಸ್ ಸಂಸ್ಥೆಯ ಪಾಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT