ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ಆಶಾಕಿರಣ ಮೊರಾರ್ಜಿ ಶಾಲೆ

Last Updated 23 ಮೇ 2011, 9:15 IST
ಅಕ್ಷರ ಗಾತ್ರ

ಕುಶಾಲನಗರ: ಗ್ರಾಮೀಣ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಆಸರೆಯಾಗುವ ಉದ್ದೇಶದಿಂದ ಆರಂಭವಾದ ಮೊರಾರ್ಜಿ ದೇಸಾಯಿ ಸರ್ಕಾರಿ ಮಾದರಿ ವಸತಿ ಶಾಲೆ ಬಡ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ನೆಲೆಯಾಗಿದೆ.

ಬುಡಕಟ್ಟು ಜನರೇ ಹೆಚ್ಚಾಗಿ ನೆಲೆಸಿರುವ ಬಸವನಹಳ್ಳಿ ಗ್ರಾಮದ ಸುಂದರ ಪರಿಸರದಲ್ಲಿ ಮೈತೆಳೆದು ನಿಂತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ತನ್ನ ವೈವಿಧ್ಯಮಯ ಚಟುವಟಿಕೆ ಮೂಲಕ ಗ್ರಾಮೀಣ ಬಡ ಮಕ್ಕಳ ಆಶಾಕಿರಣವಾಗಿ ರೂಪುಗೊಂಡಿದೆ. ಗುರುಕುಲ ಮಾದರಿಯ ಪರಿಸರವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತಾಸೆಯಾಗಿ ನಿಂತಿದೆ.

ಶಾಲೆಯಲ್ಲಿನ ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳ ಸಮಾನ ಪ್ರಾತಿನಿಧ್ಯ, ಸಮನ್ವಯತೆ ಹಾಗೂ ವೈವಿಧ್ಯಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಬೆಳೆಸಲು ಕಾರಣವಾಗಿವೆ.

6 ರಿಂದ 10 ನೇ ತರಗತಿವರೆಗಿನ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತ ಶಿಕ್ಷಣ ನೀಡಲು ಆರಂಭವಾದ ಈ ಶಾಲೆಯು ಆರಂಭದಿಂದಲೂ ಶೈಕ್ಷಣಿಕ, ಕ್ರೀಡೆ , ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗಳಿಸುವ ಮೂಲಕ ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳ ಪೈಕಿ ಜಿಲ್ಲೆಗೆ ಮಾದರಿಯಾಗಿ ರೂಪುಗೊಂಡಿದೆ.

ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸತತವಾಗಿ 6 ವರ್ಷಗಳಿಂದ ಶೇ.100 ರಷ್ಟು ಫಲಿತಾಂಶ ಗಳಿಸುವ ಮೂಲಕ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಪ್ರಶಂಸೆಗೆ ಪಾತ್ರವಾಗಿರುವ ಈ ಶಾಲೆಯು ರಾಜ್ಯಮಟ್ಟದ ಗಮನ ಸೆಳೆದಿದೆ.

ಸತತ 9 ವರ್ಷಗಳಿಂದ ಮಕ್ಕಳಿಂದಲೇ ರೂಪುಗೊಂಡ `ಪ್ರಕೃತಿ~ ಎಂಬ ಶಾಲಾ ವಾರ್ಷಿಕ ಸಂಚಿಕೆಯು ವಾರ್ಷಿಕ ಚಟುವಟಿಕೆಗಳ ಕೈಗನ್ನಡಿಯಾಗಿದ್ದು ಶಿಕ್ಷಣಾಸಕ್ತರ ಗಮನ ಸೆಳೆದಿದೆ. ಶಾಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ  ಸಂಪನ್ಮೂಲ ವ್ಯಕ್ತಿಗಳಿಂದ `ಅರಿವು~ ಉಪನ್ಯಾಸ, `ಭಾವ ಸಂಚಾರಿ~ ಎಂಬ ಸಾಹಿತ್ಯಿಕ ಗೋಡೆ ವಾರ ಪತ್ರಿಕೆ ಪ್ರಕಟನೆಯು ಮಕ್ಕಳ ಕ್ರಿಯಾಶೀಲತೆಗೆ ಉತ್ತಮ ವೇದಿಕೆ ಒದಗಿಸುತ್ತಿದೆ.

`ಶಿಕ್ಷಕರ ಸಮರ್ಪಣಾ ಭಾವ ಮತ್ತು ಪೋಷಕರ ಸಹಭಾಗಿತ್ವ, ಜನಪ್ರತಿನಿಧಿಗಳು, ಅಧಿಕಾರಿಗಳ ಸಮಯೋಚಿತ ಸಹಕಾರ ಶಾಲೆಯ ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ~ ಎಂದು ಶಾಲೆಯ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಪ್ರಾಂಶುಪಾಲ ಕೆ.ವಿ.ಸುರೇಶ್ ವಿವರಿಸಿದರು.

ಶಾಲೆಯಲ್ಲಿ ಮಕ್ಕಳಿಗೆ ಪಠ್ಯಕ್ಕೆ ನೀಡುವ ಆದ್ಯತೆ ಮತ್ತು ಪ್ರೋತ್ಸಾಹವನ್ನು ಕ್ರೀಡೆ, ಸಂಗೀತ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದು, ಪ್ರತಿವರ್ಷ 50 ಕ್ಕಿಂತ ಹೆಚ್ಚು ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಗಳಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಜಿ.ರಾಜೇಶ್‌ಗೌಡ.

ರಾಜ್ಯ ವಿಜ್ಞಾನ ಪರಿಷತ್ತಿನ ಆಶ್ರಯದಲ್ಲಿ ಸಂಘಟನೆಗೊಳ್ಳುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಅಧಿವೇಶನದಲ್ಲಿ ಪ್ರತಿ ವರ್ಷ ಸ್ಪರ್ಧಿಸುವ ಈ ಶಾಲೆಯ ಮಕ್ಕಳ ತಂಡವು ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಎರಡು ಬಾರಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಅಧಿವೇಶನದಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಕಟ್ಟಡದ ಕೊರತೆಯನ್ನು ಎದುರಿಸುತ್ತಿದ್ದ ಶಾಲೆಗೆ ಇದೀಗ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಶೈಕ್ಷಣಿಕ ವಿಭಾಗ, ಶಿಕ್ಷಕರ ವಸತಿ ಗೃಹ ಸೇರಿದಂತೆ ಬಾಲಕ -ಬಾಲಕಿಯರ ವಿದ್ಯಾರ್ಥಿ ನಿಲಯದ ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಕಲ್ಪಿಸಲಾಗಿದೆ. ಈ ಶಾಲೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎನ್ನುತ್ತಾರೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT