ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ₹ 2 ಹೆಚ್ಚಳ: ಕೋಚಿಮುಲ್‌ ಅಧ್ಯಕ್ಷ ನಂಜೇಗೌಡ ಹೇಳಿಕೆ

ಹಾಲು ಉತ್ಪಾದನೆ ಉತ್ತೇಜಿಸಲು ಕ್ರಮ
Last Updated 14 ಫೆಬ್ರುವರಿ 2020, 9:25 IST
ಅಕ್ಷರ ಗಾತ್ರ

ಕೋಲಾರ: ‘ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಹಾಲು ಖರೀದಿ ದರದಲ್ಲಿ ₹ 2 ಹೆಚ್ಚಿಸಲಾಗಿದೆ’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಸ್ತುತ ಹಾಲು ಖರೀದಿ ದರ ಪ್ರತಿ ಲೀಟರ್‌ಗೆ ₹ 26 ಇದೆ. ದರ ಹೆಚ್ಚಳದ ನಂತರ ಪರಿಷ್ಕೃತ ದರ ಲೀಟರ್‌ಗೆ ₹ 28ಕ್ಕೆ ಏರಿಕೆಯಾಗಲಿದೆ. ಇದರ ಜತೆಗೆ ಪ್ರೋತ್ಸಾಹಧನವಾಗಿ ಸರ್ಕಾರ ಲೀಟರ್‌ಗೆ ₹ 5 ಕೊಡುತ್ತದೆ. ಫೆ.16ರಿಂದ ಹೊಸ ಖರೀದಿ ದರ ಜಾರಿಯಾಗುತ್ತದೆ’ ಎಂದು ಹೇಳಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಒಕ್ಕೂಟದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಾಲು ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಹೀಗಾಗಿ ರೈತರನ್ನು ಉತ್ತೇಜಿಸಿ ಹಾಲು ಉತ್ಪಾದನೆ ಹೆಚ್ಚಿಸಲು ಖರೀದಿ ದರ ಪರಿಷ್ಕರಿಸಲಾಗಿದೆ. ಏಪ್ರಿಲ್‌ ಅಂತ್ಯದೊಳಗೆ ಮತ್ತೊಮ್ಮೆ ಹಾಲು ಖರೀದಿ ದರ ಪರಿಷ್ಕರಿಸಿ, ₹ 30ಕ್ಕೆ ಹೆಚ್ಚಿಸುವ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ವಿವರಿಸಿದರು.

‘ಒಕ್ಕೂಟದ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿದಿರುವುದು ದುರದೃಷ್ಟಕರ. ರಾಜ್ಯದ 14 ಹಾಲು ಒಕ್ಕೂಟಗಳಲ್ಲೂ ನಾನಾ ಕಾರಣದಿಂದ ಇದೇ ರೀತಿ ಹಾಲು ಉತ್ಪಾದನೆ ಕುಸಿದಿದೆ. ರಾಸುಗಳ ಸಂಖ್ಯೆ ಕಡಿಮೆಯಾಗದಿದ್ದರೂ ಹಾಲು ಸಂಗ್ರಹಣೆ ಪ್ರಮಾಣ ಕಡಿಮೆಯಾಗಿದೆ’ ಎಂದರು.

ಮೇವು ಬೀಜ: ‘ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ನೀಗಿಸಲು ರೈತರಿಗೆ ಉಚಿತವಾಗಿ ಮೇವು ಬಿತ್ತನೆ ಬೀಜ ವಿತರಣೆ ಮಾಡುತ್ತೇವೆ. ಜತೆಗೆ ಒಂದು ಎಕರೆ ಮೇವು ಬೆಳೆಯಲು ₹ 3 ಸಾವಿರ ಸಹಾಯಧನ ನೀಡಲಾಗುವುದು. ಮೇವು ಬೀಜ ಪಡೆಯಲು ಕಡ್ಡಾಯವಾಗಿ ಸಂಘದ ಶೇರುದಾರರಾಗಿರಬೇಕು’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ನಡೆದ 2016–17ನೇ ಸಾಲಿನಲ್ಲಿ ನಡೆದ ಹಸಿರು ಮೇವು ಆಂದೋಲನ ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಅದೇ ರೀತಿ ಈಗಲೂ ಮೇವು ಆಂದೋಲನ ರೂಪಿಸುತ್ತೇವೆ. ಒಕ್ಕೂಟದ ವ್ಯಾಪ್ತಿಯ ಗ್ರಾಮಗಳಲ್ಲಿ ಹೈನುಗಾರಿಕೆ ನಡೆಸಲು ಆಸಕ್ತಿಯುಳ್ಳ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಡಿಸಿಸಿ ಬ್ಯಾಂಕ್ ಮೂಲಕ ಕಾಯಕ ಯೋಜನೆಯಡಿ ಹಸು ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ₹ ೧ ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

ಸಿಬ್ಬಂದಿ ವೆಚ್ಚ ಕಡಿಮೆ: ‘ಹಾಲು ಶೇಖರಣೆ ಪ್ರಮಾಣ ಕಡಿಮೆಯಾಗಿರುವ ಕಾರಣಕ್ಕೆ ಸಿಬ್ಬಂದಿ ವೆಚ್ಚ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯ ಎಲ್ಲಾ ಘಟಕಗಳಲ್ಲಿ ಮಾನವ ದಿನಗಳನ್ನು ಕಡಿಮೆ ಮಾಡುತ್ತೇವೆ. ಗುತ್ತಿಗೆ ಕೆಲಸಗಾರರ ಸಂಖ್ಯೆ ಕಡಿತಗೊಳಿಸುತ್ತೇವೆ. ಜತೆಗೆ ಗುತ್ತಿಗೆ ಕಾರ್ಮಿಕರ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ’ ಎಂದರು.

ಕೋಚಿಮುಲ್‌ ನಿರ್ದೇಶಕರಾದ ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜ್, ಕೆ.ಅಶ್ವತ್ಥ್‌ರೆಡ್ಡಿ, ಡಿ.ವಿ.ಹರೀಶ್, ಎನ್‌.ಹನುಮೇಶ್, ವೈ.ಬಿ.ಅಶ್ವತ್ಥನಾರಾಯಣ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ ಹಾಜರಿದ್ದರು.

ಅಂಕಿ ಅಂಶ.....
* ₹ 26 ಹಾಲಿ ಖರೀದಿ ದರ
* ₹ 28 ಪರಿಷ್ಕೃತ ಖರೀದಿ ದರ
* ₹ 5 ಲೀಟರ್‌ಗೆ ಪ್ರೋತ್ಸಾಹಧನ
* ನಿತ್ಯ 8.40 ಲಕ್ಷ ಲೀಟರ್‌ ಹಾಲು ಶೇಖರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT