ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಆಲಸ್ಯ: ಸಿಇಒ ಅಸಮಾಧಾನ

ಉದ್ಯೋಗಖಾತ್ರಿ ಯೋಜನೆ ದೂರುಗಳ ನಿರ್ವಹಣೆ
Last Updated 24 ಮೇ 2014, 10:51 IST
ಅಕ್ಷರ ಗಾತ್ರ

ಕೋಲಾರ: ಉದ್ಯೋಗಖಾತ್ರಿ ಯೋಜನೆ ಜಾರಿಯಲ್ಲಿ ಅವ್ಯವಹಾರ, ಅಕ್ರಮ­ವಾಗಿ ಯಂತ್ರಗಳ ಬಳಕೆ, ಕೆಲಸ ನೀಡದಿರು­ವುದು ಸೇರಿದಂತೆ ಹಲವು ದೂರುಗಳ ಪರಿಶೀಲನೆಯಲ್ಲಿ ಅಧಿಕಾರಿ­ಗಳು ಆಲಸ್ಯ, ವಿಳಂಬ ಧೋರಣೆ ತೋರುವುದು ಸರಿ­ಯಲ್ಲ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವ­ಹಣಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಹೇಳಿದರು.

ನಗರದ ಜಿಲ್ಲಾ ಪಂಚಾಯತಿಯ ಮಿನಿ ಸಭಾಂಗಣದಲ್ಲಿ ಶುಕ್ರವಾರ ಉದ್ಯೋಗ­­ಖಾತ್ರಿ ದೂರುಗಳ ಪರಿ­ಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳ ಭೇಟಿ ಮಾಡುವುದು, ಸರ್ಕಾರದಿಂದ ಕಡತಗಳನ್ನು ವಾಪಸು ತರುವುದು ಸೇರಿದಂತೆ ಹಲವು ಜವಾ­ಬ್ದಾರಿಗಳ ನಿರ್ವಹಣೆಯಲ್ಲಿ ಅಧಿಕಾರಿ­ಗಳು ಚುರುಕಾಗಿಲ್ಲ ಎಂದು ಅಸಮಾ­ಧಾನ ವ್ಯಕ್ತಪಡಿಸಿದರು.

ಬಂಗಾರಪೇಟೆ ತಾಲ್ಲೂಕಿನ ಐನೋರ­ಹೊಸಳ್ಳಿ ಗ್ರಾಮ ಪಂಚಾಯತಿಯಿಂದ ಖಾತ್ರಿ ಯೋಜನೆಯ ಕಡತಗಳನ್ನು ಪಡೆ­ದಿದ್ದ ಖಾತ್ರಿ ಯೋಜನೆ ನಿರ್ದೇಶಕರು, ಕಡತಗಳನ್ನು ವಾಪಸು ಪಡೆಯುವಂತೆ ಸೂಚಿಸಿ ಒಂದು ತಿಂಗಳಾದರೂ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಹದೇವಪ್ಪ ಅವರಾಗಲೀ ಪಂಚಾಯತಿ ಅಭಿವೃದ್ಧಿ ಅಧಿಕಾರಿ­ಯಾಗಲೀ ವಾಪಸು ಪಡೆಯದೇ ಇರು­ವುದು ಸಭೆಯಲ್ಲಿ ಬೆಳಕಿಗೆ ಬಂತು.

ಮೂರು ದಿನದೊಳಗೆ ಕಡತಗಳನ್ನು ತರುವುದಾಗಿ ಮಹದೇವಪ್ಪ ತಿಳಿಸಿದಾಗ, ನಾಳೆಯೇ ಹೋಗಿ ಕಡತಗಳನ್ನು ತನ್ನಿ ಎಂದು ವಿನೋತ್ ಪ್ರಿಯಾ ಸೂಚಿ­ಸಿದರು.

ಹಣ ಕೊಡಬೇಡಿ: ಮುಳಬಾಗಲು ತಾಲ್ಲೂಕಿನ ಗುಡಿಪಲ್ಲಿ ಸೇರಿದಂತೆ ಜಿಲ್ಲೆಯ ಐದು ಗ್ರಾಮ ಪಂಚಾಯತಿ­ಗಳಲ್ಲಿ ಅವ್ಯವಹಾರ ನಡೆದ ದೂರುಗಳ ಹಿನ್ನೆಲೆಯಲ್ಲಿ ಕಾಮಗಾರಿ­ಗಳ ಹಣ ಬಿಡು­ಗಡೆ ಮಾಡಬಾರದು ಎಂದು ಅವರು ಸೂಚಿಸಿ­ದರು.

ವಿಳಂಬ: ದೂರು ನೀಡಿ ಎರಡು–ಮೂರು ತಿಂಗಳಾದರೂ ಕ್ರಮ ಕೈಗೊಳ್ಳ­ದಿರುವುದು ಕೂಡ ಸಭೆಯಲ್ಲಿ ಬೆಳಕಿಗೆ ಬಂತು.
ಕೋಲಾರ ತಾಲ್ಲೂಕಿನ ಮದ್ದೇರಿ­ಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಕೋರಿ ಫೆಬ್ರುವರಿಯಲ್ಲಿಯೇ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಕೊಂಡರಾಜನಹಳ್ಳಿಯ ದಲಿತರ ಕಾಲೊನಿಯಲ್ಲಿ ನಿರ್ಮಿಸಿದ್ದ ಚರಂಡಿ­ಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ­ದ್ದಾರೆ ಎಂದು ಮಾರ್ಚ್‌ನಲ್ಲಿ ಸಲ್ಲಿಸಿದ ದೂರಿಗೂ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿ­ಕಾರಿ­ಗಳು ಕೋಲಾರ ತಾಲ್ಲೂಕು ಪಂಚಾ­­­ಯತಿ ಸಹಾಯಕ ನಿರ್ದೇಶಕ ರಾಜಣ್ಣ ಅವರ ಕಡೆಗೆ ಅಸಮಾಧಾನದ ನೋಟ ಬೀರಿದರು.

ನೋಟಿಸ್‌ ಕ್ರಮವಲ್ಲ: ಈ ಎರಡೂ ದೂರುಗಳ ಸಂಬಂಧ ಗ್ರಾಮ ಪಂಚಾ­ಯತಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ ರಾಜಣ್ಣ ಅವರ ಮಾತನ್ನು ಒಪ್ಪದ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿಗಳು, ನೋಟಿಸ್‌ ನೀಡುವುದು ಕ್ರಮವಲ್ಲ. ನೋಟಿಸ್‌ ನೀಡಿದ ಬಳಿಕ ಯಾವ ಕ್ರಮ ಕೈಗೊಳ್ಳ­ಲಾಗಿದೆ ಎಂಬುದು ಮುಖ್ಯ. ಆ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಿ ಎಂದು ಸೂಚಿಸಿದರು.
ತನಿಖೆ ಮಾಡಿ: ಫಾರಂ 6 ನೀಡಿದ್ದರೂ ಯೋಜನೆ ಅಡಿ ಕೆಲಸ ನೀಡಿಲ್ಲ ಎಂದು ತೊಟ್ಲಿ ಗ್ರಾಮದ ಟಿ.ಮುನಿರಾಜು ಎಂಬು­­­­­ವವರು ಸಲ್ಲಿಸಿದ ದೂರಿನ ಹಿನ್ನೆ­ಲೆ­ಯಲ್ಲಿ ತನಿಖೆಗೆ ಸೂಚಿ­ಸಿದರು.

‘ನರೇಗಾ’ ಅಂತರ್ಜಾಲ ತಾಣದಲ್ಲಿ ದೂರು­ದಾರರ ಜಾಬ್‌ ಕಾರ್ಡ್ ಪರಿಶೀಲಿಸಿ, ಅವರಿಗೆ ಕೆಲಸ ನೀಡಿರುವ ಕುರಿತು ದಾಖಲಾಗಿದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಿ ಎಂದರು.

ಚುನಾವಣೆ ಹೊಣೆ: ತೊಟ್ಲಿ, ಶಾಪೂರಿ­ನಿಂದ ಸಲ್ಲಿಸಲಾಗಿದ್ದ ದೂರುಗಳ ತನಿಖೆ ನಡೆದಿಲ್ಲ. ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಚೆಲುವರಾಜ್‌ ಅವರು ಲೋಕಸಭಾ ಚುನಾವಣೆಯ ಸಹಾಯಕ ಚುನಾವಣಾಧಿಕಾರಿ­ಯಾಗಿ­ದ್ದರಿಂದ, ಮುಂದಿನ ದಿನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತಿ ಸಹಾಯಕ  ಯೋಜನಾಧಿ­ಕಾರಿ ಮೋಹನ್ ಕುಮಾರ್‌ ತಿಳಿಸಿದರು.

ಉದ್ಯೋಗಖಾತ್ರಿ ಯೋಜನೆಯ ಒಂಬುಡ್ಸ್‌ಮನ್ ಗೋವಿಂದಪ್ಪ, ಮುಳ­ಬಾಗಲು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಟಿ.ವಿ.­ಅರುಣ್‌­ಕುಮಾರ್‌, ಮಾಲೂರು ತಾಲ್ಲೂಕು ಪಂಚಾಯತಿ ಕಾರ್ಯ­ನಿರ್ವ­ಹಣಾಧಿಕಾರಿ ಸಂಜೀವಪ್ಪ ಉಪ­ಸ್ಥಿತ­ರಿದ್ದರು.

ಗುಡಿಪಲ್ಲಿ ಅವ್ಯವಹಾರ ತನಿಖೆಗೆ ತಂಡ
ಮುಳಬಾಗಲು ತಾಲ್ಲೂಕಿನ ಗುಡಿಪಲ್ಲಿಯಲ್ಲಿ ಯೋಜನೆಯ ಕಾಮಗಾರಿ­ಗಳಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ತಂಡವನ್ನು ರಚಿಸಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಟಿ.ವಿಅರುಣ್‌ಕುಮಾರ್‌ ಮನವಿ ಮಾಡಿದರು.

ಈಗಾಗಲೇ ಒಮ್ಮೆ ಅಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ. ತನಿಖೆಗೆ ತೆರಳಿದ್ದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರನ್ನು ಗ್ರಾಮಸ್ಥರು ತಡೆದು, ವಾಪಸು ಕಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT