ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಅಪಘಾತದಲ್ಲಿ 7 ತಿಂಗಳಲ್ಲಿ 156 ಮಂದಿ ಸಾವು

2023ಕ್ಕೆ ಹೋಲಿಸಿದರೆ ತಗ್ಗಿದ ಸಾವಿನ ಪ್ರಮಾಣ; ವಾಹನ ಚಾಲಕರೇ ಇರಲಿ ಮತ್ತಷ್ಟು ಜಾಗೃತಿ
Published : 13 ಆಗಸ್ಟ್ 2024, 6:07 IST
Last Updated : 13 ಆಗಸ್ಟ್ 2024, 6:07 IST
ಫಾಲೋ ಮಾಡಿ
Comments

ಕೋಲಾರ: ಕೋಲಾರ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಕಳೆದ ಏಳು ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 156 ಮಂದಿ ಜೀವ ಕಳೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸರು ಅಪಘಾತ ಪ್ರಮಾಣ ತಪ್ಪಿಸಲು ಹಲವಾರು ಕ್ರಮ ವಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ (250) ಸಾವಿನ ಪ್ರಮಾಣ ಕಡಿಮೆಯಾಗಿದೆ.

ಈ ವರ್ಷ ರಾಜ್ಯದಾದ್ಯಂತ ರಸ್ತೆ ಅಪಘಾತದಲ್ಲಿನ ಸಾವಿನ ಪ್ರಕರಣಗಳು ತಗ್ಗಿರುವ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕಾಗಿ ಪ್ರಯತ್ನ ಹಾಕುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಸ್ತೆ ಅಪಘಾತದಲ್ಲಿನ ಸಾವಿನ ಪ್ರಮಾಣ ತಗ್ಗಿಸುವುದು ಸವಾಲಾಗಿದೆ ಎಂಬುದಾಗಿಯೂ ಬರೆದುಕೊಂಡಿದ್ದಾರೆ.

ಒಂದಲ್ಲಾ ಒಂದು ಕಡೆ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿದ್ದಾರೆ. ಅಪಘಾತದಲ್ಲಿ ಗಾಯಕ್ಕೆ ಒಳಗಾಗಿ ಸಂಕಟ ಅನುಭವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ.

ವಾರದ ಹಿಂದೆ ಕೋಲಾರ ನಗರ ಹೊರವಲಯದ ಕೋಲಾರ-ಬಂಗಾರಪೇಟೆ ಮುಖ್ಯರಸ್ತೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಔಡಿ ಕಾರು ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಅವರ ಗೆಳೆಯ ಸ್ಥಳದಲ್ಲೇ ಮೃತಪಟ್ಟಿದ್ದರು. ಮೀತಿ ಮೀರಿದ ವೇಗದಲ್ಲಿ ಬಂದಿದ್ದರಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಐಷಾರಾಮಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಎರಡು ತುಂಡಾಗಿತ್ತು. ಈ ಅಪಘಾತದ ತೀವ್ರತೆ ಹಾಗೂ ಪರಿಣಾಮವನ್ನಾದರೂ ಗಮನಿಸಿ ವಾಹನ ಚಾಲಕರು  ಜಾಗೃತಿ ವಹಿಸಬೇಕಿದೆ.

ಕೆಜಿಎಫ್‌ ಪೊಲೀಸ್‌ ವ್ಯಾಪ್ತಿಯಲ್ಲೂ ಈ ವರ್ಷ ರಸ್ತೆ ಅಪಘಾತದಲ್ಲಿನ ಸಾವಿನ ಪ್ರಮಾಣ ತಗ್ಗಿದೆ. ಕಳೆದ ಮೂರು ತಿಂಗಳಲ್ಲಿ (ಮೇ, ಜೂನ್‌, ಜುಲೈ) 16 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 19 ಮಂದಿ ಜೀವ ಕಳೆದುಕೊಂಡಿದ್ದರು. ಈ ವರ್ಷ ಈ ಅವಧಿಯಲ್ಲಿ ಕೋಲಾರ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 71 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 56 ಮಂದಿ ಅಸುನೀಗಿದ್ದು, ತುಸು ಹೆಚ್ಚಿದೆ.

2023ರಲ್ಲಿ ಡಿಸೆಂಬರ್‌ ಅಂತ್ಯವರೆಗೆ ಕೋಲಾರ ಪೊಲೀಸ್‌ ಜಿಲ್ಲೆಯಲ್ಲಿ ಒಟ್ಟು 250 ಘೋರ ಅಪಘಾತ ಹಾಗೂ 516 ಸಾಮಾನ್ಯ ಅಪಘಾತ ಸಂಭವಿಸಿದ್ದು, 257 ಮಂದಿ ಮೃತರಾಗಿದ್ದರೆ, 778 ಗಾಯಗೊಂಡಿದ್ದರು. ಹಾಗೆಯೇ ಕೆಜಿಎಫ್‌ ಪೊಲೀಸ್‌ ವಿಭಾಗದಲ್ಲಿ 67 ಘೋರ ಅಪಘಾತ, 136 ಸಾಮಾನ್ಯ ಅಪಘಾತ ಸಂಭವಿಸಿದ್ದು 71 ಮಂದಿಯ ಜೀವ ಹೋಗಿತ್ತು, 179 ಮಂದಿ ಗಾಯಗೊಂಡಿದ್ದರು. ಒಟ್ಟು 328 ಮಂದಿ ಮೃತಪಟ್ಟಿದ್ದು, 957 ಮಂದಿ ಗಾಯಗೊಂಡಿದ್ದರು.

ಅಪಘಾತ ತಗ್ಗಿಸಲು ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ.ಹಾಗೂ ಕೆಜಿಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶತ ಪ್ರಯತ್ನ ನಡೆಸುತ್ತಿದ್ದಾರೆ.

‘ಅಪಘಾತ ಪ್ರಮಾಣ ತಗ್ಗಿಸಲು ಈಗಾಗಲೇ ತಂತ್ರಜ್ಞಾನ ನೆರವಿನಿಂದ ಹಲವಾರು ಕ್ರಮ ವಹಿಸಿದ್ದೇವೆ. ಜನರು ಎಚ್ಚೆತ್ತುಕೊಂಡು ರಸ್ತೆ ನಿಯಮ ಪಾಲಿಸಿ ಜಾಗರೂಕರಾಗಿ ವಾಹನ ಚಲಾಯಿಸಿದರೆ ಅಪಘಾತ ಕಡಿಮೆ ಮತ್ತಷ್ಟು ಆಗುತ್ತವೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಬೇಕು’ ಎಂದು ನಿಖಿಲ್‌ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗಿದ್ದು, ವಾಹನಗಳು ವೇಗವಾಗಿ ಚಲಿಸುತ್ತಿರುವುದು ಅಪಘಾತ ಸಂಭವಿಸಲು ಪ್ರಮುಖ ಕಾರಣವಾಗಿದೆ.

ಕೋಲಾರ ಗ್ರಾಮಾಂತರ, ವೇಮಗಲ್‌, ಮಾಲೂರು, ಮುಳಬಾಗಿಲು ಗ್ರಾಮಾಂತರ ಹಾಗೂ ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿ, ಇತ್ತ ಕೆಜಿಎಫ್‌ನ ಬಂಗಾರಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ.

ಅಪಘಾತಗಳಿಗೆ ಅಜಾಗರೂಕತೆ ಹಾಗೂ ಅತಿ ವೇಗವೇ ಕಾರಣವಾಗುತ್ತಿದೆ. ವಾಹನ ಚಾಲನೆಯಲ್ಲಿ ನೈಪುಣ್ಯತೆ ಇಲ್ಲದಿದ್ದರೂ 120, 150 ಕಿ.ಮೀ ವೇಗದಲ್ಲಿ ವಾಹನ ಚಾಲನೆ ಮಾಡುವುದು ಕಂಡುಬರುತ್ತಿದೆ. ದ್ವಿಚಕ್ರ ವಾಹನದವರು 80-90 ಕಿ.ಮೀ ವೇಗದಲ್ಲಿ ಹೋಗಿ ಡಿಕ್ಕಿ ಹೊಡೆಯುತ್ತಾರೆ. ಜಿಲ್ಲೆಯಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಬೈಕ್ ಸವಾರರೇ ಆಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಿಂದ ಪಟ್ಟಣಕ್ಕೆ ಸೇರುವ ಒಳರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗಿರುವುದು ಕಂಡು ಬಂದಿದೆ.

ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಈಗ ಪೊಲೀಸರು ಹೆಲ್ಮೆಟ್‌ ಕಡ್ಡಾಯ ಮಾಡಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತ ನಡೆಯುವ ಸ್ಥಳ ಗಮನಿಸಿ ಮುನ್ನೆಚ್ಚರಿಕೆ ಫಲಕ ಹಾಕಲು ಕ್ರಮ ವಹಿಸಿದ್ದಾರೆ.

ನಿಯಂತ್ರಣಕ್ಕೆ ತಂತ್ರಜ್ಞಾನದ ಮೊರೆ

ಅತಿ ವೇಗದ ವಾಹನ ಚಾಲನೆ ತಡೆಗೆ ವಿವಿಧ ಕ್ರಮ ವಹಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ತಗ್ಗಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಈ ರಸ್ತೆಗಳಲ್ಲಿ ‘ಕ್ಯಾಟ್‌ ಐಸ್‌’ ಅಳವಡಿಕೆ ಮೂಲಕ ನಿಯಂತ್ರಣಕ್ಕೆ ತರಲಾಗುತ್ತಿದೆ. ಸ್ಪೀಡ್‌ ರಾಡಾರ್‌ ತಂತ್ರಜ್ಞಾನದ ಮೂಲಕವೂ ನಿಗಾ ಇಡಲಾಗಿದೆ ನಿಖಿಲ್‌ ಬಿ. ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT