ಬುಧವಾರ, ಜನವರಿ 27, 2021
18 °C
ಜಿಲ್ಲೆಯ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ತರಗತಿ–ವಿದ್ಯಾಗಮ

ಕೋಲಾರದಲ್ಲಿ ಎಸ್ಸೆಸ್ಸೆಲ್ಸಿ ತರಗತಿ–ವಿದ್ಯಾಗಮ: ಶೇ 29ರಷ್ಟು ಮಕ್ಕಳ ಹಾಜರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಾದ್ಯಂತ ಆರಂಭಗೊಂಡಿರುವ ಎಸ್ಸೆಸ್ಸೆಲ್ಸಿ ತರಗತಿ ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗಿನ ವಿದ್ಯಾಗಮಕ್ಕೆ ಸೋಮವಾರ ಶೇ 29ರಷ್ಟು ವಿದ್ಯಾರ್ಥಿಗಳು ಹಾಜರಾದರು.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲೇ ತರಗತಿ ಹಾಗೂ 6ನೇ ತರಗತಿಯಿಂದ 9ನೇ ತರಗತಿಗೆ ಶಾಲೆಗಳಲ್ಲಿ ವಿದ್ಯಾಗಮ ಆರಂಭಿಸಲಾಗಿದೆ. ಮಕ್ಕಳು ಶಾಲೆಯತ್ತ ಬರುತ್ತಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ತರಗತಿ ಹಾಗೂ 6ನೇ ತರಗತಿಯಿಂದ 9ನೇ ತರಗತಿವರೆಗಿನ ವಿದ್ಯಾಗಮ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 1,12,013 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಈ ಪೈಕಿ ಸೋಮವಾರ 32,398 ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ತರಗತಿಗೆ ಸೋಮವಾರ ಶೇ 36.84ರಷ್ಟು ಮಕ್ಕಳು ಹಾಜರಾಗಿದ್ದಾರೆ. ಶೇ 44.63ರಷ್ಟು ಮಕ್ಕಳ ಹಾಜರಿಯೊಂದಿಗೆ ಮಾಲೂರು ತಾಲ್ಲೂಕು ಪ್ರಥಮ ಸ್ಥಾನದಲ್ಲಿದೆ. ತರಗತಿವಾರು ಗಮನಿಸಿದಾಗ 6ನೇ ತರಗತಿಯ ಮಕ್ಕಳು ಶೇ 29.34, 7ನೇ ತರಗತಿ ಮಕ್ಕಳು ಶೇ 28.70, 8ನೇ ತರಗತಿಗೆ ಶೇ 23.30, 9ನೇ ತರಗತಿಗೆ ಶೇ 28 ಹಾಗೂ ಎಸ್ಸೆಸ್ಸೆಲ್ಸಿ ತರಗತಿಗೆ ಶೇ 36.84ರಷ್ಟು ಮಕ್ಕಳು ಹಾಜರಾಗಿದ್ದಾರೆ’ ಎಂದರು.

ಮಾರ್ಗಸೂಚಿ ಪಾಲನೆ: ‘ವಿದ್ಯಾಗಮ ಯೋಜನೆಯಡಿ 32,398 ಮಕ್ಕಳು ತರಗತಿಗೆ ಹಾಜರಾದರು. ಬಂಗಾರಪೇಟೆ ತಾಲ್ಲೂಕಿನಲ್ಲಿ ದಾಖಲಾಗಿರುವ 23,055 ಮಕ್ಕಳಲ್ಲಿ 6,766 ಮಂದಿ ತರಗತಿಗೆ ಹಾಜರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನಲ್ಲಿ ದಾಖಲಾಗಿರುವ 14,887 ವಿದ್ಯಾರ್ಥಿಗಳಲ್ಲಿ 4,492 ಮಕ್ಕಳು ತರಗತಿಗೆ ಬಂದಿದ್ದಾರೆ’ ಎಂದು ವಿವರಿಸಿದರು.

‘ಕೋಲಾರ ತಾಲ್ಲೂಕಿನಲ್ಲಿ ದಾಖಲಾಗಿರುವ 29,133 ಮಕ್ಕಳ ಪೈಕಿ 5,964 ಮಕ್ಕಳು ತರಗತಿಗೆ ಹಾಜರಾಗಿದ್ದಾರೆ. ಮಾಲೂರು ತಾಲ್ಲೂಕಿನಲ್ಲಿ ದಾಖಲಾದ 17,740 ಮಕ್ಕಳಲ್ಲಿ 7,785 ಮಕ್ಕಳು ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ ದಾಖಲಾಗಿರುವ 17,346 ಮಕ್ಕಳ ಪೈಕಿ 5,514 ಮಂದಿ ತರಗತಿಗೆ ಹಾಜರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಶಾಲೆಗಳಲ್ಲಿ ಪ್ರತಿನಿತ್ಯ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ತರಗತಿಗಳಲ್ಲಿ ಮಕ್ಕಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್‌ ಧರಿಸುವುದು, ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಸ್ಯಾನಿಟೈಸರ್‌ ಬಳಕೆಯನ್ನು ಕಡ್ಡಾಯಗೊಳಿಸಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.