ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 40 ಡಿಗ್ರಿ ಸೆಲ್ಸಿಯಸ್‌; ಜನ ತತ್ತರ!

Published 2 ಮೇ 2024, 5:11 IST
Last Updated 2 ಮೇ 2024, 5:11 IST
ಅಕ್ಷರ ಗಾತ್ರ

ಕೋಲಾರ: ಡಾಂಬಾರು ರಸ್ತೆಗಿಳಿದರೆ ಶಾಖದ ಅಲೆ ಮುಖಕ್ಕೆ ಹೊಡೆಯುತ್ತದೆ, ವಾಹನದಲ್ಲಿ ಕುಳಿತರೆ ಅತಿ ತಾಪಮಾನದಿಂದ ಬೆವರು ಕಿತ್ತುಕೊಂಡು ಬರುತ್ತದೆ. ಮನೆಯೊಳಗೂ ಇರಲಾಗದ, ಹೊರಗೂ ಹೋಗಲಾಗದ ಪರಿಸ್ಥಿತಿ.

ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿ, ತಾಪಮಾನಕ್ಕೆ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು.

ಜಿಲ್ಲೆಯಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ತಾಪಮಾನ ಇದಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3ರವರೆಗೆ ಸೂರ್ಯನ ಶಾಖದ ಪ್ರಖರತೆ ಹೆಚ್ಚಾಗಿ ಹೊರಗಡೆ ಓಡಾಡಲು ಕಷ್ಟವಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ ನಾಲ್ಕೈದು ದಿನಗಳಿಂದ ಇದೇ ವಾತಾವರಣವಿದೆ. ಮುನ್ಸೂಚನೆ ಪ್ರಕಾರ ಮೇ 5ರವರೆಗೆ ಶಾಖದ ಅಲೆ ಇರಲಿದೆ. ಈಗಾಗಲೇ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಹಗಲಿಡೀ ಬಿಸಿಲಿಗೆ ಕಾದ ಭೂಮಿ ರಾತ್ರಿ ಸೆಕೆ ಹೊರಹೊಮ್ಮಿಸುತ್ತಿದ್ದು, ಸೆಕೆಯ ಬಾಧೆ ತಡೆದುಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ ತಿಂಗಳು ಪೂರ್ತಿ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಜಿಲ್ಲೆಯ ಕೆರೆ, ಕಟ್ಟೆಗಳಲ್ಲಿ ನೀರು ಖಾಲಿಯಾಗುತ್ತಿದೆ.

ಕುಡಿಯುವ ನೀರಿಗೆ ಈವರೆಗೆ ಅಷ್ಟಾಗಿ ಸಂಕಷ್ಟ ಎದುರಾಗದಿದ್ದರೂ ಬಿಸಿಲಿನ ಬೇಗೆ ಮಾತ್ರ ಹೆಚ್ಚುತ್ತಿದೆ. 4 ತಾಲ್ಲೂಕುಗಳ 4 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆರು ಖಾಸಗಿ ಕೊಳವೆ ಬಾವಿಗಳಿಂದ ಆರು ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶದ ಒಟ್ಟು 11 ವಾರ್ಡ್‌ಗಳಿಗೆ 10 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ದಾಹ ತೀರಿಸಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಮೊದಲಾದ ಪಾನೀಯಗಳ ಮಾರಾಟ ಬರದಿಂದ ಸಾಗಿದೆ. ಜನರು ಫ್ಯಾನ್‌ ಹಾಗೂ ಹವಾನಿಯಂತ್ರಿತ (ಎ.ಸಿ) ವ್ಯವಸ್ಥೆ ಮೊರೆ ಹೋಗುವಂತಾಗಿದೆ, ಮಡಕೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಅಲ್ಲದೇ, ರಸ್ತೆ ಬದಿಯ ತಂಪು ಪಾನೀಯ ಅಂಗಡಿಯಲ್ಲಿ ಲಿಂಬೂ ಸೋಡಾ, ಲಸ್ಸಿ, ಸೇಬು, ಮೋಸಂಬಿ, ಕಿತ್ತಳೆ, ಮಜ್ಜಿಗೆ ಕುಡಿಯುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ನಗರದ ರಂಗಮಂದಿರ ಮುಂಭಾಗ, ಕಾಲೇಜು ವೃತ್ತ, ಬೆಂಗಳೂರು ರಸ್ತೆ, ಹಳೆ ಬಸ್ ನಿಲ್ದಾಣ, ಅಂತರಗಂಗೆ ರಸ್ತೆ ಹೀಗೆ ವಿವಿಧೆಡೆ ರಸ್ತೆ ಬದಿಯಲ್ಲಿ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ತಂದಿರುವ ಕಲ್ಲಂಗಡಿ ಹಣ್ಣುಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ ಸವಿದು ದಾಹ ತಣಿಸಿಕೊಳ್ಳುವ ಪ್ರಯತ್ನ ಪಾದಾಚಾರಿಗಳು ಮಾಡುತ್ತಿದ್ದು, ‌ಒಂದು ಕೆ.ಜಿ ದರ 30 ವರೆಗೆ ಇದೆ. ಹಿಂದೆಲ್ಲಾ ₹ 10ಕ್ಕೆ 4 ನಿಂಬೆ ಹಣ್ಣು ಸಿಗುತಿದ್ದವು. ಈಗ ಜ್ಯೂಸ್‌ಗೆ ಬೇಡಿಕೆ ಹೆಚ್ಚಿರುವ ಕಾರಣ ಒಂದು ನಿಂಬೆ ಹಣ್ಣಿಗೆ ₹ 7 ತಲುಪಿದೆ.

ಮಕ್ಕಳು, ವಯೋವೃದ್ಧರು, ಬೀದಿಬದಿ ವ್ಯಾಪಾರಿಗಳು, ಸಂತೆಗಳಲ್ಲಿ ಮಾರಾಟಮಾಡುವ ವ್ಯಾಪಾರಿಗಳು, ಬಿಸಲಿನಲ್ಲಿ ಕೆಲಸ ಮಾಡುವ ಕೂಲಿಕಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬಿಸಿಲಿನ ಬೇಗೆಗೆ ಜಿಲ್ಲೆಯಲ್ಲಿನ ಕೆರೆಗಳ ನೀರಿನ ಪ್ರಮಾಣವೂ ಕಡಿಮೆ ಆಗುತ್ತಿದೆ. ಈಗಲೇ ಈ ಪರಿಸ್ಥಿತಿ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಟ ಎದುರಾಗುವ ಸಾಧ್ಯತೆಗಳಿವೆ.

ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಕೋತಿಗಳಿಗೆ ನೀರುಣಿಸುತ್ತಿರುವ ಸಾರ್ವಜನಿಕರು
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಕೋತಿಗಳಿಗೆ ನೀರುಣಿಸುತ್ತಿರುವ ಸಾರ್ವಜನಿಕರು
ಕೋಲಾರದಲ್ಲಿ ಮಡಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆ
ಕೋಲಾರದಲ್ಲಿ ಮಡಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆ
ಜಿಲ್ಲೆಯಲ್ಲಿ ಏ.5ರವರೆಗೆ ಒಣಹವೆ ಶಾಖದ ಅಲೆ ವಿಪರೀತವಿದ್ದು ಸಾರ್ವಜನಿಕರು ಹವಾಮಾನಕ್ಕೆ ತಕ್ಕಂತೆ ಉಡುಪು ಊಟ ನೀರು ಮತ್ತು ಇನ್ನಿತರೆ ವ್ಯವಸ್ಥೆ ಮಾಡಿಕೊಳ್ಳಬೇಕು
- ಪದ್ಮಾ ಬಸವಂತಪ್ಪ ಜಿಲ್ಲಾ ಪಂಚಾಯಿತಿ ಸಿಇಒ

ಮಳೆ ಇಲ್ಲದ ಏಕೈಕ ಜಿಲ್ಲೆ!

ಏಪ್ರಿಲ್‌ ತಿಂಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಒಂದು ಹನಿಯೂ ಮಳೆಯಾಗಿಲ್ಲ. ಹವಾಮಾನ ಇಲಾಖೆ ಪ್ರಕಾರ ಏಪ್ರಿಲ್‌ನಲ್ಲಿ ಮಳೆಯಾಗದ ಏಕೈಕ ಜಿಲ್ಲೆಯಾಗಿದೆ. ಪಕ್ಕದ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸ್ವಲ್ಪವಾದರೂ ಮಳೆಯಾಗಿದೆ.

ಫ್ಯಾನ್, ಏ.ಸಿ ಮಾರಾಟ ಜೋರು

ಕೋಲಾರ ನಗರದ ಮಳಿಗೆಗಳಲ್ಲಿ ಫ್ಯಾನ್‌ ಹಾಗೂ ಹವಾ ನಿಯಂತ್ರಣ ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಮದು ಆಗುತ್ತಿವೆ. ಮಳಿಗೆ ಒಳಗೆ ಜಾಗ ಸಾಲದೆ ಪಾದಚಾರಿ ರಸ್ತೆಯಲ್ಲೂ ಹೊಸದಾಗಿ ಬಂದಿರುವ ಫ್ಯಾನ್‌ ಹಾಗೂ ಏ.ಸಿ ಇಟ್ಟಿದ್ದಾರೆ. ‘ನಿತ್ಯ 8ರಿಂದ 10 ಫ್ಯಾನ್‌ಗಳು ಮಾರಾಟವಾಗುತ್ತಿವೆ. ಈ ಹಿಂದೆ ದಿನಕ್ಕೆ ಒಂದೆರಡು ಫ್ಯಾನ್‌ ಮಾತ್ರ ಮಾರಾಟವಾಗುತ್ತಿದ್ದವು’ ಎಂದು ಎಂ.ಬಿ.ರಸ್ತೆಯ ಮಳಿಗೆಯೊಂದರ ಮಾರಾಟಗಾರ ತಿಳಿಸಿದರು.

ಪ್ರಾಣಿ ಪಕ್ಷಿಗಳಿಗೂ ಸಂಕಷ್ಟ

ಪ್ರಾಣಿ ಪಕ್ಷಿಗಳ ರೋದನೆ ಹೇಳತೀರದು. ಸಾಕು ಪ್ರಾಣಿಗಳಿಂದ ಹಿಡಿದು ಬೆಟ್ಟ ಗುಡ್ಡ ಕಾಡುಗಳಲ್ಲಿ ಕೋತಿಗಳು ಪಕ್ಷಿಗಳು ಇತರ ಪ್ರಾಣಿಗಳಿಗೆ ನೀರು ಹಾಗೂ ಆಹಾರಕ್ಕೆ ತೊಂದರೆ ಉಂಟಾಗಿದೆ‌. ಬಿಸಿಲಿನಿಂದ ಕಾಡಿನಲ್ಲಿ ಕೆರೆ ಕಟ್ಟೆ ಝರಿ‌ ಒಣಗಿವೆ‌. ಪ್ರಮುಖವಾಗಿ ಅಂತರಗಂಗೆ ಬೆಟ್ಟದಲ್ಲಿ ಕೋತಿಗಳು ನೀರಿಲ್ಲದೆ ಪರದಾಡುತ್ತಿವೆ. ಹೀಗಾಗಿ ನಗರ ಪ್ರದೇಶದೊಳಗೆ ಲಗ್ಗೆ ಇಡುತ್ತಿವೆ. ಪ್ರವಾಸಿಗರು ಸಮಾಜ ಸೇವಕರು ಪರಿಸರ ಪ್ರೇಮಿಗಳು ನೀರು ಹಾಗೂ ಹಣ್ಣಿನ ವ್ಯವಸ್ಥೆ ಮಾಡುತ್ತಿದ್ದಾರೆ ನುವಾರುಗಳಿಗೂ ಬಿಸಿಲಿನ ಝಳ ತಟ್ಟಿದೆ. ಕುರಿ ಮೇಕೆಗಳಿಗೂ ನೀರಿನ ಕೊರತೆ ಎದುರಾಗಿದೆ. ಕೆಲವಡೆ ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ.

ಶಾಖದ ಅಲೆಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ

  • ವಿಶೇಷವಾಗಿ ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಿ

  • ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಿರಿ

  • ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆ ಧರಿಸಿ

  • ಬಿಸಿಲಿನಲ್ಲಿ ಹೋಗಲೇಬೇಕಾದಾಗ ಕೂಲಿಂಗ್‌ ಗ್ಲಾಸ್‌ ಛತ್ರಿ ಬಳಸಿ

  • ದೇಹ ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್‌ ಚಹಾ ಕಾಫಿ ಕಾರ್ಬೊನೇಟೆಡ್‌ ತಂಪು ಪಾನೀಯ ತಪ್ಪಿಸಿ

  • ಹೆಚ್ಚಿನ ಪ್ರೋಟೀನ್‌ ಆಹಾರವನ್ನು ತಪ್ಪಿಸಿ

  • ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕು ಪ್ರಾಣಿ ಬಿಡಬೇಡಿ

  • ಓಆರ್‌ಎಸ್‌ ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ ನಿಂಬೆ ಜ್ಯೂಸ್‌ ಅಂಬಳಿ ಮಜ್ಜಿಗೆ ಹೆಚ್ಚು ಬಳಸಿ

  • ಪ್ರಾಣಿ ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ. ಕುಡಿಯಲು ಸಾಕಷ್ಟು ನೀರಿನ ವ್ಯವಸ್ಥೆ ಮಾಡಿ

  • ನವಜಾತು ಶಿಶು ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ

  • ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು ಬಿಡಬೇಡಿ

  • ಪ್ರಯಾಣದ ಅವಧಿಯಲ್ಲಿ ಹೆಚ್ಚು ನೀರು ಕೊಂಡೊಯ್ಯಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT