ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲೂರು | ಹಲವು ಮದುವೆಗೆ ಸಾಕ್ಷಿಯಾದ ಉದ್ಯಾನ

ಮಾಲೂರಿನಲ್ಲೊಂದು ವಿಶಿಷ್ಟ ಪಾರ್ಕ್‌
ವಿ ರಾಜಗೋಪಾಲ್
Published : 22 ಸೆಪ್ಟೆಂಬರ್ 2024, 6:42 IST
Last Updated : 22 ಸೆಪ್ಟೆಂಬರ್ 2024, 6:42 IST
ಫಾಲೋ ಮಾಡಿ
Comments

ಮಾಲೂರು: ಸಾಮಾನ್ಯವಾಗಿ ಪಾರ್ಕ್‌ ವಾಯು ವಿಹಾರ, ವ್ಯಾಯಾಮ ಮತ್ತು ಮಕ್ಕಳ ಆಟಕ್ಕೆ ಸೀಮಿತವಾಗಿರುತ್ತದೆ. ಆದರೆ ಇಲ್ಲೊಂದು ವಿಶಿಷ್ಟ ಉದ್ಯಾನವಿದೆ. ಅದು ನೂರಾರು ಮದುವೆಗಳಿಗೆ ಸಾಕ್ಷಿಯಾಗಿದೆ!.

ಪಟಟ್ಣದಲ್ಲಿ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿರುವ ಕೋಚಿಮುಲ್ ನಿರ್ವಹಿಸುತ್ತಿರುವ ಉದ್ಯಾನದಲ್ಲಿ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯ ಇದೆ. ಹೀಗಾಗಿ ಇಲ್ಲಿ ಸರಳ ಮದುವೆಗಳು ನಡೆಯುತ್ತಿರು‌ತ್ತವೆ.

1ನೇ ವಾರ್ಡ್‌ ವ್ಯಾಪ್ತಿಯ ಪುರಸಭೆಗೆ ಸೇರಿದ ಒಂದು ಎಕರೆಯಲ್ಲಿ ಕೋಚಿಮುಲ್‌ ಸುಂದರ ಉದ್ಯಾನ ನಿರ್ಮಿಸಿದೆ. ವಿವಿಧ ಪ್ರಬೇಧದ ಮರ–ಗಿಡಗಳನ್ನು ಇಲ್ಲಿ ಪೋಷಿಸಲಾಗುತ್ತಿದೆ. ಹಿರಿಯ ನಾಗರಿಕರು, ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ವಾಕಿಂಗ್‌ ಪಾಥ್‌, ಯುವಕರು ವ್ಯಾಯಾಮಕ್ಕೆ ಓಪನ್‌ ಜಿಮನ್‌ ಹಾಗೂ ಮಕ್ಕಳ ಆಟಕ್ಕೆ ಆಟದ ಪರಿಕರ, ಕುಳಿತುಕೊಳ್ಳಲು ಆಸನಗಳು ಹಾಗೂ ವಿಶ್ರಾಂತಿ ಪಡೆಯಲು ಕುಟೀರ ನಿರ್ಮಿಸಲಾಗಿದೆ.

82 ಸಾವಿರ ಜನಸಂಖ್ಯೆ ಹೊಂದಿರುವ ಮಾಲೂರಿನಲ್ಲಿ ಇರುವುದು ಎರಡೇ ಪಾರ್ಕ್‌. ಅದರಲ್ಲಿ ಇದು ಒಂದು. ಬಿಸಿಲಿನ ಬೇಗೆ ಮತ್ತು ದಣಿವು ತೀರಿಸಿಕೊಳ್ಳಲು ಈ ಜಾಗ ಹೇಳಿ ಮಾಡಿಸಿದಂತಿದೆ. ಕುಟುಂಬಗಳು, ಸ್ನೇಹಿತರು ಒಂದೆಡೆ ಕುಳಿತು ಹರಟೆ ಹೊಡೆಯಲು ಹಾಗೂ ಭೋಜನ ಸವಿಯಲು ಅನುಕೂಲ ಕಲ್ಪಿಸಲಾಗಿದೆ.

ಉದ್ಯಾನದಲ್ಲಿ ಸಾರ್ವಜನಿಕರು ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯ ನಿರ್ಮಿಸಿದ್ದಾರೆ. ಹೀಗಾಗಿ ವೆಂಕಟರಣ ಸಾನಿಧ್ಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂದಗಳು ವಿವಾಹ ಮತ್ತು ನಾಮಕರಣ ಹಮ್ಮಿಕೊಳ್ಳುತ್ತಾರೆ. ಉದ್ಯಾನ ವಿಶಾಲವಾಗಿರುವ ಕಾರಣ ಹಾಗೂ  ದೇಗುಲ ಇರುವುದರಿಂದ ಪಾರ್ಕ್‌ ಹಲವು ಮಂಗಳ ಕಾರ್ಯಗಳಿಗೆ ಸಾಕ್ಷಿಯಾಗಿದೆ.

ಉದ್ಯಾನದಲ್ಲಿ ಮಕ್ಕಳ ಆಟ
ಉದ್ಯಾನದಲ್ಲಿ ಮಕ್ಕಳ ಆಟ
ಕೋಚಿಮುಲ್ ವತಿಯಿಂದ ಉದ್ಯಾನ ನಿರ್ವಹಿಸಲಾಗುತ್ತಿದೆ. ಪಾರ್ಕ್‌ನಲ್ಲಿ ದೇಗುಲ ಇರುವುದರಿಂದ ಬಡವರು ಮತ್ತು ಮಧ್ಯಮ ವರ್ಗದ ನೂರಾರು ಕುಟುಂಬಗಳು ಮದುವೆ ಮತ್ತು ನಾಮಕರಣದಂತಹ ಮಂಗಳ ಕಾರ್ಯವನ್ನು ನಡೆಸುತ್ತಾರೆ.
ಲೋಹಿತ್ ಉಪ ವ್ಯವಸ್ಥಾಪಕ ಕೋಚಿಮುಲ್
ಈ ಉದ್ಯಾನ ಬಹುಉಪಯೋಗಿಯಾಗಿದೆ. ಮಕ್ಕಳು ಆಟ ಹಿರಿಯರ ವಿಶ್ರಾಂತಿ ಪಡೆಯಲು ಹಾಗೂ ಸ್ನೇಹಿತರು ಸಮಯ ಕಳೆಯಲು ಉತ್ತಮ ವಾತಾವರಣ ಇದೆ.
ಚಲುವಮ್ಮ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT