ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕೆ ಪ್ರಜ್ಞಾವಂತರ ಕೊಡಲಿ ಪೆಟ್ಟು

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಕೆಂಪರಾಜ್ ಕಳವಳ
Last Updated 25 ಜನವರಿ 2020, 15:14 IST
ಅಕ್ಷರ ಗಾತ್ರ

ಕೋಲಾರ: ‘ನಗರ ಪ್ರದೇಶದಲ್ಲಿನ ಪ್ರಜ್ಞಾವಂತ ಮತದಾರರೇ ಮತದಾನದಿಂದ ದೂರ ಉಳಿಯುತ್ತಿರುವುದು ವಿಷಾದಕರ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಬೀಳುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತವು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ‘ದೇಶದ ಪ್ರಗತಿಗೆ ಸಂಪನ್ಮೂಲ, ತಾಂತ್ರಿಕತೆ, ಆರ್ಥಿಕ ಸೌಲಭ್ಯದ ಜತೆಗೆ ಉತ್ತಮ ರಾಜಕೀಯ ವ್ಯವಸ್ಥೆ ಅಗತ್ಯ. ಉತ್ತಮ ಸರ್ಕಾರ ಆಡಳಿತಕ್ಕೆ ಬಂದರೆ ದೇಶದ ಪ್ರಗತಿ ಹಾಗೂ ಬದಲಾವಣೆ ಸಾಧ್ಯ’ ಎಂದರು.

‘ದೇಶವು ಸವಾಲು ಮೆಟ್ಟಿ ನಿಂತು ಸದೃಢವಾಗಲು ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ. ಸಂವಿಧಾನದಲ್ಲಿ ಹಕ್ಕುಗಳ ಜತೆಗೆ ನೀಡಿರುವ ಜವಾಬ್ದಾರಿ ನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿ ಮತವೂ ಬೆಲೆ ಕಟ್ಟಲಾಗದ ಮೌಲ್ಯ ಹೊಂದಿದೆ’ ಎಂದು ಅಭಿಪ್ರಾಯಪಟ್ಟರು.

‘ನಗರವಾಸಿಗಳು ಶೈಕ್ಷಣಿಕವಾಗಿ ಮುಂದುವರಿದಿದ್ದರೂ ಅವರಿಗೆ ರಾಜಕೀಯ ಪ್ರಜ್ಞೆಯಿಲ್ಲ. ನಗರ ಪ್ರದೇಶದಲ್ಲಿ ಶೇ 25ರಿಂದ 30ರಷ್ಟು ಮತದಾನವಾಗುತ್ತಿರುವುದು ಬೇಸರದ ಸಂಗತಿ. ಭಾರತೀಯ ಚುನಾವಣಾ ಆಯೋಗ ಮತದಾನ ಪ್ರಕ್ರಿಯೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡಿದ್ದು, ಮುಂದೆ ಹೆಚ್ಚಿನ ತಾಂತ್ರಿಕತೆ ಬರಬಹುದು’ ಎಂದು ಹೇಳಿದರು.

ಹೆಸರು ನೋಂದಾಯಿಸಿ: ‘ಯುವ ಮತದಾರರು ಆಲೋಚಿಸಿ ಮತದಾನ ಮಾಡದಿರುವುದರಿಂದ ಉತ್ತಮ ಜನನಾಯಕರ ಆಯ್ಕೆ ಸಾಧ್ಯವಾಗುತ್ತಿಲ್ಲ. ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಚುನಾವಣೆಯಲ್ಲಿ ಒಳ್ಳೆಯ ಜನನಾಯಕರನ್ನು ಆಯ್ಕೆ ಮಾಡಿದರೆ ಸಮಸ್ಯೆ ಪರಿಹಾರ ಸಾಧ್ಯ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಕಿವಿಮಾತು ಹೇಳಿದರು.

‘2011ರಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ. ಬ್ರಿಟಿಷರ ಕಾಲದಲ್ಲಿ ಶೇ 15ರಷ್ಟು ಭಾರತೀಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಸಂವಿಧಾನ ಬಂದ ನಂತರ 18 ವರ್ಷ ತುಂಬಿದ ಎಲ್ಲಾ ಭಾರತೀಯರಿಗೂ ಜಾತಿ, ಧರ್ಮ, ಬಡವ, ಶ್ರೀಮಂತರೆಂಬ ಬೇಧವಿಲ್ಲದೆ ಮತದಾನದ ಹಕ್ಕು ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಜಿಲ್ಲೆಯ ಜನಸಂಖ್ಯೆ 17 ಲಕ್ಷವಿದ್ದು, ಈ ಪೈಕಿ 12,14,746 ಮತದಾರರಿದ್ದಾರೆ. ಅಂದರೆ ಜನಸಂಖ್ಯೆಯಲ್ಲಿ ಶೇ 71.26ರಷ್ಟು ಮಂದಿ ಮತದಾರರಾಗಿದ್ದಾರೆ. 18 ವರ್ಷ ತುಂಬಿದ ಮೊದಲ ಮತದಾರರ ಸಂಖ್ಯೆ 15,169 ಇದೆ. ಮತದಾರರಲ್ಲಿ ಪುರುಷರು ಮತ್ತು ಮಹಿಳೆಯರ ಅನುಪಾತ 995ರಷ್ಟಿದೆ’ ಎಂದು ಮಾಹಿತಿ ನೀಡಿದರು.

ಉದ್ಯೋಗ ಮೇಳ: ‘ಜಿಲ್ಲೆಯಲ್ಲಿ ಫೆ.11 ಮತ್ತು 12ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಭಾನುವಾರ (ಜ.26) ಬೆಳಿಗ್ಗೆ 11.30ಕ್ಕೆ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೋಂದಣಿ ವೆಬ್‌ಸೈಟ್‌ಗೆ ಚಾಲನೆ ನೀಡುತ್ತಾರೆ. ಉದ್ಯೋಗಾಂಕ್ಷಿಗಳು ಹೆಸರು ನೋಂದಾಯಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು’ ಎಂದು ತಿಳಿಸಿದರು.

ಯುವ ಮತದಾರರಿಗೆ ಎಪಿಕ್ ಕಾರ್ಡ್‌ ವಿತರಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬೂತ್‌ ಮಟ್ಟದ ಚುನಾವಣಾ ಸಿಬ್ಬಂದಿ ಭಾಗ್ಯಮ್ಮ, ಸರಸ್ವತಮ್ಮ, ವಿ.ವೆಂಕಟರಾಮ್ ಅವರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು. ಲೋಕಸಭೆ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ನಾಗರಾಜ್, ಎ.ನವೀನ್‌ಕುಮಾರ್, ಚಂಗಲರಾಯಗೌಡ, ವೆಂಕಟರಾಮಯ್ಯ, ನಂಜುಂಡೇಗೌಡ, ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಾಹ್ನವಿ, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಎಂ.ಸೌಮ್ಯ, ತಹಶೀಲ್ದಾರ್ ಶೋಭಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT