ಮಂಗಳವಾರ, ಫೆಬ್ರವರಿ 25, 2020
19 °C
ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳಿಂದ ಅಧಿಕಾರಿಗಳಿಗೆ ಮನವಿ

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಗ್ರಾಮ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಮಕ್ಕಳ ಶಿಶು ಅಭಿವೃದ್ಧಿ ಅಧಿಕಾರಿ ರಮೇಶ್‌ಗೌಡ ಸಲಹೆ ನೀಡಿದರು.

ತಾಲ್ಲೂಕಿನ ದೊಡ್ಡಹಾಸಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕಾದ ಜವಾಬ್ದಾ ಸ್ಥಳೀಯ ಸಂಸ್ಥೆಗಳ ಮೇಲಿದೆ’ ಎಂದರು.

‘ಕೊಠಡಿಗಳ ಸಮಸ್ಯೆ, ಕಾಂಪೌಂಡ್, ಗ್ರಂಥಾಲಯ, ಶೌಚಾಲಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಶಾಲೆಗಳು ಎದುರಿಸುತ್ತಿವೆ. ಅಂತೆಯೇ ಅಂಗನವಾಡಿ ಕೇಂದ್ರಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಭಿವೃದ್ಧಿ ಅಧಿಕಾರಿಗಳು ಅವುಗಳ ಕಡೆ ಗಮನ ನೀಡಬೇಕು’ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಸಂಯೋಜನಾಧಿಕಾರಿ ಮುನಿರತ್ನಯ್ಯಶೆಟ್ಟಿ ಮಾತನಾಡಿ, ‘ವಿವಿಧ ಕ್ಷೇತ್ರಗಳಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಸರ್ಕಾರಿಗಳಲ್ಲಿ ಓದಿದ್ದಾರೆ. ಇಲ್ಲಿ ಓದಿದರೆ, ಸೌಜನ್ಯ, ಸೃಜನಶೀಲತೆ ಬೆಳೆಯುತ್ತದೆ, ಆದರೆ ಖಾಸಗಿ ಶಾಲೆಗಳಲ್ಲಿ ದುಡ್ಡು ಕೊಟ್ಟರೂ ಅವೆಲ್ಲವೂ ಸಿಗುವುದಿಲ್ಲ’ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

‘ಇಂಗ್ಲಿಷ್ ಮಾಧ್ಯಮ ಒಂದು ಭಾಷೆಯಾಗಿ ಇರಬೇಕೇ ಹೊರತು ನಮ್ಮ ಮೇಲೆ ಸವಾರಿ ಮಾಡುವಂತಾಗಬಾರದು. ಇಂಗ್ಲಿಷ್ ಅವಶ್ಯಕವಿರುವ ಕಾರಣ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕಾಂಪೌಂಡ್‌ನಡಿ ಸಿಗಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತಾಲೂಕಿನಲ್ಲಿ ೪ ಆರಂಭಿಸಲಾಗಿದ್ದು, ಮುಂದಿನ ಹರಟಿ, ಹೋಳೂರಿನಲ್ಲಿ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಎಂದು ತಿಳಿಸಿದರು.

ಗ್ರಾಮ ಸಭೆಯಲ್ಲಿ ದೊಡ್ಡಹಸಾಳ ಗ್ರಾಪಂ ವ್ಯಾಪ್ತಿಯ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ತಮ್ಮ ಶಾಲೆಗಳ ಸಮಸ್ಯೆಗಳ ಬಗ್ಗೆ ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

ದೊಡ್ಡಹಸಾಳ ಶಾಲೆಯ ಮಕ್ಕಳು ಮಾತನಾಡಿ, ತಮ್ಮ ಶಾಲೆಯಲ್ಲಿ ಚಿಕ್ಕ ಗ್ರಂಥಾಲಯವಿದ್ದು, ಸೌಲಭ್ಯವಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯವನ್ನು ಶಾಲೆಯ ಆವರಣಕ್ಕೆ ಸ್ಥಳಾಂತರಿಸಬೇಕು. ಶಾಲೆಯ ಸುತ್ತ ಕಸದ ತಿಪ್ಪೆಗಳು ಇರುವುದರಿಂದ ಹಾವುಗಳ ಸಮಸ್ಯೆ ಹೆಚ್ಚಾಗಿದೆ, ತಿಪ್ಪೆಗಳನ್ನು ಖಾಲಿ ಮಾಡಿಸಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಗಾಜಲದಿನ್ನೆ ಶಾಲೆಯ ಮಕ್ಕಳು ಮಾತನಾಡಿ, ಶಾಲಾ ಕಾಂಪೌಂಡ್ ನಿರ್ಮಿಸಿಕೊಡಬೇಕು. ಛತ್ರಕೋಡಿಹಳ್ಳಿ ಶಾಲೆಯ ಮಕ್ಕಳು, ಆಟದ ಮೈದಾನಗಳನ್ನು ನಿರ್ಮಿಸಿಕೊಡಬೇಕು, ಆಂಗ್ಲಮಾಧ್ಯಮ ಆರಂಭಿಸಬೇಕು ಎಂದು ಕೋರಿದರು.

ದೊಡ್ಡಹಸಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂಗಲರಾಯಗೌಡ ಮಾತನಾಡಿ, ‘ನರೇಗಾ ಯೋಜನೆಯಡಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ ತಲಾ ಏ ೫ ಲಕ್ಷ ಮೀಸಲಿಡಲಾಗಿದ್ದು, ಇಲಾಖೆಯಿಂದ ₨ ೩ ಲಕ್ಷ ನೀಡಿದರೆ ಕಟ್ಟಡಗಳನ್ನು ನಿರ್ಮಿಸಲಾಗುವುದು. ಆಶಾ ಕಾರ್ಯಕರ್ತೆಯರು ಮಕ್ಕಳ ಜನ್ಮ ಪ್ರಮಾಣ ಪತ್ರಗಳು, ಲಸಿಕೆ, ಶಾಲೆಗೆ ಹಾಜರಾಗುವುದು ಇನ್ನಿತರೆ ವಿಚಾರಗಳ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಂಬಿಕಾ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ವೆಂಕಟಾಚಲಪತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಮುನಿಬೈರಪ್ಪ, ದೊಡ್ಡಹಸಾಳ ವೈದ್ಯಾಧಿಕಾರಿ ಡಾ.ರಕ್ಷಿತ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು