ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶುವಿನ ಅಪಹರಣ ಆರೋಪ: ಮರ್ಯಾದೆಗೆ ಅಂಜಿ ಸಾಮೂಹಿಕ ಆತ್ಮಹತ್ಯೆ

ಮಗು ಮಾರಾಟದ ಶಂಕೆ
Last Updated 9 ನವೆಂಬರ್ 2021, 13:19 IST
ಅಕ್ಷರ ಗಾತ್ರ

ಕೋಲಾರ: ನವಜಾತ ಶಿಶುವಿನ ಅಪಹರಣ ಆರೋಪದಿಂದ ಮನನೊಂದು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ 5 ಮಂದಿ ನಗರದಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಕಾರಂಜಿಕಟ್ಟೆ ನಿವಾಸಿಗಳಾದ ಮುನಿಯಪ್ಪ (70), ಅವರ ಪತ್ನಿ ನಾರಾಯಣಮ್ಮ (65), ಮಗಳು ಪುಷ್ಪಾ (33), ಅಳಿಯ ಬಾಬು (45) ಹಾಗೂ ಮೊಮ್ಮಗಳು ಗಂಗೋತ್ರಿ (17) ಮೃತಪಟ್ಟವರು.

ತಮಿಳುನಾಡು ಮೂಲದ ಸುಮಿತ್ರಾ ಮತ್ತು ಸತ್ಯ ದಂಪತಿಯು ತಮ್ಮ ನವಜಾತ ಶಿಶುವನ್ನು ಪುಷ್ಪಾ ಹಾಗೂ ಅವರ ಸ್ನೇಹಿತೆ ಗೀತಾ ಎಂಬುವರು ಅಪಹರಿಸಿದ್ದಾರೆ ಎಂದು ಆರೋಪಿಸಿ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ನ.2ರಂದು ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪುಷ್ಪಾ ಮತ್ತು ಗೀತಾರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಒಂದು ವಾರದೊಳಗೆ ಮಗುವನ್ನು ತಂದು ಒಪ್ಪಿಸುವಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಪೊಲೀಸರು ಠಾಣೆಗೆ ಕರೆದೊಯ್ದಿದ್ದರಿಂದ ಬೇಸರಗೊಂಡಿದ್ದ ಪುಷ್ಪಾ ಮತ್ತು ಕುಟುಂಬ ಸದಸ್ಯರು ಮರ್ಯಾದೆಗೆ ಅಂಜಿ ಭಾನುವಾರ (ನ.7) ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ನೆರೆಹೊರೆಯವರು ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆ ಐದೂ ಮಂದಿ ಸೋಮವಾರ ಕೊನೆಯುಸಿರೆಳೆದರು.

‘ಸುಮಿತ್ರಾ ದಂಪತಿಯ ಮಗುವಿನ ಅಪಹರಣದಲ್ಲಿ ನನ್ನ ಪಾತ್ರವಿಲ್ಲ. ಗೀತಾ ಮತ್ತು ಸುಮಿತ್ರಾ ದಂಪತಿಯೇ ₹ 50 ಸಾವಿರಕ್ಕೆ ಮಗು ಮಾರಾಟ ಮಾಡಿದ್ದಾರೆ. ಆದರೆ, ಪೊಲೀಸರು ನನ್ನನ್ನು ಠಾಣೆಗೆ ಎಳೆದೊಯ್ದು ಚಿತ್ರಹಿಂಸೆ ನೀಡಿ ಅವಮಾನ ಮಾಡಿದರು. ಪೊಲೀಸರ ಕಿರುಕುಳ ಮತ್ತು ಅವಮಾನದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಪುಷ್ಪಾ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ.

ಪಾತ್ರವಿಲ್ಲ: ‘ಮಗುವಿನ ಅಪಹರಣದಲ್ಲಿ ಪುಷ್ಪಾ ಅವರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಸತ್ಯ ದಂಪತಿಯು ತಮ್ಮ ಮಗುವನ್ನು ನಗರದ ಕೋಟೆ ಬಡಾವಣೆಯ ಸೋಮೇಶ್ವರ ದೇವಸ್ಥಾನದ ಬಳಿ ಅ.18ರಂದು ಗೀತಾ ಅವರಿಗೆ ಕೊಟ್ಟಿದ್ದರು. ಆ ದಿನ ಪುಷ್ಪಾ ಅವರು ಗೀತಾ ಜತೆಗೆ ಹೋಗಿದ್ದರು. ಈ ದೃಶ್ಯಾವಳಿ ಸೋಮೇಶ್ವರ ದೇವಸ್ಥಾನದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸುಳಿವು ಆಧರಿಸಿ ಸಿಬ್ಬಂದಿ ಪುಷ್ಪಾ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪುಷ್ಪಾ ಅವರ ಪತ್ರ ಆಧರಿಸಿ ಗೀತಾ ಮತ್ತು ಸತ್ಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗಲ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗೀತಾ ತಲೆಮರೆಸಿಕೊಂಡಿದ್ದು, ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಸತ್ಯ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ಯಾರಾ ಮೆಡಿಕಲ್‌ ಓದುತ್ತಿರುವ ಸುಮಿತ್ರಾ ಅವರು ಪೋಷಕರಿಗೆ ತಿಳಿಸದೆ ಸತ್ಯ ಅವರನ್ನು ಪ್ರೇಮ ವಿವಾಹವಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT