ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಆರೋಪ: ರೈತ ಸಂಘ ಧರಣಿ

Last Updated 10 ಫೆಬ್ರುವರಿ 2020, 15:41 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ತಾಲ್ಲೂಕು ಕಚೇರಿಯು ಭ್ರಷ್ಟಾಚಾರ ಮೇರೆ ಮೀರಿದ್ದು, ರೈತರ ಹಾಗೂ ಜನಸಾಮಾನ್ಯರ ಗೋಳು ಹೇಳತೀರದು. ಸರ್ವಾಧಿಕಾರಿಗಳಂತೆ ವರ್ತಿಸುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಲಂಚಬಾಕ ಅಧಿಕಾರಿಗಳು ಹಣದಾಸೆಗೆ ಜನರನ್ನು ಶೋಷಿಸುತ್ತಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕು ಕಚೇರಿಯಲ್ಲಿನ ಭ್ರಷ್ಟ ಅಧಿಕಾರಿಗಳು ಸರ್ಕಾರಿ ಜಮೀನನ್ನು ಭೂಗಳ್ಳರಿಗೆ ಅಕ್ರಮವಾಗಿ ಪರಭಾರೆ ಮಾಡಿದ್ದಾರೆ. ಕೆರೆ, ಗುಂಡು ತೋಪು, ಗೋಮಾಳ, ಅರಣ್ಯ ಭೂಮಿಗೆ ಸಂಬಂಧಪಟ್ಟಂತೆ ನಕಲಿ ದಾಖಲೆಪತ್ರ ಸೃಷ್ಟಿಸಲಾಗಿದೆ. ಅಧಿಕಾರಿಗಳು ಹಣದಾಸೆಗೆ ಭೂಗಳ್ಳರ ಜತೆ ಶಾಮೀಲಾಗಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ತಾಲ್ಲೂಕು ಕಚೇರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸರ್ವೆಯರ್‌ಗಳ ಜತೆ ಶಾಮೀಲಾಗಿ ಲಂಚದ ದಂಧೆ ನಡೆಸುತ್ತಿದ್ದಾರೆ. ಸರ್ವೆಯರ್‌ಗಳು ರೈತರಿಂದ ಲಂಚದ ರೂಪದಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಲಂಚಕ್ಕಾಗಿ ರೈತರನ್ನು ಶೋಷಿಸುವ ಅಧಿಕಾರಿಗಳು ಕಚೇರಿಯನ್ನು ಸಂಪೂರ್ಣ ಭೂಗಳ್ಳರ ಆಸ್ತಿಯಾಗಿ ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ಹಣದ ದಂಧೆ

‘ಪೋಡಿ ಅದಾಲತ್‌ ಹಣ ಮಾಡುವ ದಂಧೆಯಾಗಿದೆ. ಅಧಿಕಾರಿಗಳು ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಮಾರಾಟ ಮಾಡುವ ಸಂಚು ರೂಪಿಸಿದ್ದಾರೆ. ಲಂಚ ಕೊಡದ ರೈತರ ಜಮೀನಿನ ಕಡತಗಳನ್ನೇ ಅಧಿಕಾರಿಗಳು ನಾಪತ್ತೆ ಮಾಡುತ್ತಾರೆ. ದಾಖಲೆಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸಿ ರೈತರಿಗೆ ತೊಂದರೆ ಮಾಡುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಉನ್ನತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಚೇರಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಒತ್ತುವರಿ ತೆರವು ಮಾಡಿ ಜಮೀನು ವಶಕ್ಕೆ ಪಡೆಯಬೇಕು. ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಅಧ್ಯಕ್ಷ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಸದಸ್ಯರಾದ ನಾಗೇಶ್, ತಿಮ್ಮಣ್ಣ, ಹನುಮಯ್ಯ, ವೆಂಕಟೇಶಪ್ಪ, ಸುಧಾಕರ್, ನವೀನ್, ಆಂಜಿನಪ್ಪ, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT