ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ: ವಿಪಕ್ಷಗಳ ಹಗಲುಗನಸು

ಠೇವಣಿ ಸಿಗುವುದಿಲ್ಲ: ಬಿಜೆಪಿ ಸಂಸದ ಮುನಿಸ್ವಾಮಿ ವ್ಯಂಗ್ಯ
Last Updated 3 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಕೋಲಾರ: ‘ಉಪ ಚುನಾವಣೆ ನಂತರ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಹಗಲುಗನಸು’ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಪ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್–ಜೆಡಿಎಸ್ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಠೇವಣಿ ಸಹ ಸಿಗುವುದಿಲ್ಲ’ ಎಂದು ಟೀಕಿಸಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡುತ್ತಿರುವುದರಿಂದ ಜನರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ. ಡಿ.9ರಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿಕೆ ನೀಡುತ್ತಿರುವ ವಿಪಕ್ಷಗಳ ಮುಖಂಡರು ಭ್ರಮೆಯಲ್ಲಿದ್ದಾರೆ. ಅವರು ರಾತ್ರಿ ಮಲಗಿದ್ದಾಗ ಕನಸಿನಲ್ಲಿ ಬಂದಿರುವುದನ್ನು ಹೇಳಿದ್ದಾರೆ’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರು ಮೈತ್ರಿ ಸರ್ಕಾರದ ಅವಧಿಯಲ್ಲಿ ಪರಸ್ಪರ ಯಾವ ರೀತಿ ಕಚ್ಚಾಡಿದರು ಎಂಬುದನ್ನು ಜನ ನೋಡಿದ್ದಾರೆ. ಮೈತ್ರಿ ಸರ್ಕಾರದಲ್ಲಿನ ಗೊಂದಲದಿಂದ ಬೇಸತ್ತು ಆ ಪಕ್ಷಗಳ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ಬಿಜೆಪಿಗೆ ಉತ್ತಮ ವಾತಾವರಣವಿದ್ದು, ಒಳ್ಳೆಯ ಫಲಿತಾಂಶ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಹಿಂದೆ ಹಲವು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗೆದ್ದರೆ ಮೆಟ್ರೊ ರೈಲು ಯೋಜನೆ, ಕೆರೆಗಳಿಗೆ ನೀರು ತುಂಬಿಸುವುದು, ಕಾವೇರಿ ನೀರು ತರುವುದು ಸೇರಿದಂತೆ ಪಕ್ಷವು ಜನಪರ ಕೆಲಸ ಮಾಡಲಿದೆ. ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಅವರಿಗೆ ಪ್ರತಿಸ್ಪರ್ಧಿಗಳಾಗಿರುವ ಶರತ್ ಬಚ್ಚೇಗೌಡ, ಪದ್ಮಾವತಿ ಸುರೇಶ್ ಸ್ವಕ್ಷೇತ್ರದಲ್ಲೇ ಏನೂ ಅಭಿವೃದ್ಧಿ ಮಾಡಿಲ್ಲ ಎಂಬ ಸತ್ಯ ಜನರಿಗೆ ಗೊತ್ತಿದೆ. ಜನರು ಅವರಿಬ್ಬರಿಗೂ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಶುದ್ಧೀಕರಣಕ್ಕೆ ಒತ್ತು: ‘ಕೆ.ಸಿ ವ್ಯಾಲಿ ಯೋಜನೆ ನೀರು ಹರಿಯುವ ಸಂದರ್ಭದಲ್ಲಿ ಶುದ್ಧೀಕರಣಗೊಳ್ಳುತ್ತದೆ. ಭೂಮಿಯಲ್ಲಿ ಆಳಕ್ಕೆ ಹೋದಂತೆ ಮತ್ತಷ್ಟು ಶುದ್ಧೀಕರಣಗೊಳ್ಳುತ್ತದೆ. ಅದಕ್ಕಿಂತಲೂ ಉತ್ತಮ ಸಂಸ್ಕರಣೆ ಬೇಕಿಲ್ಲ. ಕೆ.ಸಿ ವ್ಯಾಲಿ ನೀರಿನ ವಿಚಾರವಾಗಿ ಇಲ್ಲಸಲ್ಲದ ರಾಜಕಾರಣ ಬೆರೆಸಿ ಮಾತನಾಡಬಾರದು’ ಎಂದರು.

‘ಕೆ.ಸಿ ವ್ಯಾಲಿ ನೀರನ್ನು ಹಲವು ಬಾರಿ ನೋಡಿದ್ದೇನೆ. ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಹೇಗಿದೆ, ಕೋಲಾರದಲ್ಲಿ ನೀರು ಹೇಗಿದೆ ಎಂಬುದು ಗೊತ್ತಿದೆ. ಜಿಲ್ಲೆಯಲ್ಲಿ ಹೈನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನೀರಿನ ಅವಶ್ಯಕತೆಯಿದೆ. ಅಂತರ್ಜಲವೂ ವೃದ್ಧಿಯಾಗಲಿದೆ. ಹೀಗಾಗಿ ಯೋಜನೆಗೆ ತೊಂದರೆ ಮಾಡಬಾರದು. ಚುನಾವಣೆ ಬಳಿಕ ಅಧಿಕಾರಿಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿ ನೀರು ಶುದ್ಧೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT