ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಬಂಡೆ ಜಾಗ ಹಂಚಿಕೆ ಕಾನೂನುಬದ್ಧ

Last Updated 18 ಜನವರಿ 2021, 13:35 IST
ಅಕ್ಷರ ಗಾತ್ರ

ಕೋಲಾರ: ‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನುಬದ್ಧವಾಗಿ ಕಲ್ಲು ಬಂಡೆ ಜಾಗಗಳನ್ನು ಬ್ಲಾಕ್‌ಗಳಾಗಿ ವಿಂಗಡಿಸಿ ಲಾಟರಿ ಮೂಲಕ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದಾರೆ’ ಎಂದು ದೊಡ್ಡವಲ್ಲಬಿ ಗ್ರಾಮದ ಎನ್‌.ಮಂಜುನಾಥ್‌ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳ್ಳೂರು ಗ್ರಾಮದ ಆಂಜನಪ್ಪ ಅವರು ಕಲ್ಲು ಬಂಡೆ ಜಾಗ ಹಂಚಿಕೆ ಸಂಬಂಧ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಆಂಜಪ್ಪ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ಬೆಂಬಲಕ್ಕೆ ನಿಂತಿದ್ದಾರೆ’ ಎಂದು ಆರೋಪಿಸಿದರು.

‘ಈ ಹಿಂದೆ ಕಲ್ಲು ಗಣಿಗಾರಿಕೆಗೆ ಲೀಸ್ ಪಡೆದಿದ್ದ ಹಲವರ ಅವಧಿ ಮುಗಿದು 10 ವರ್ಷವಾದರೂ ನಿಯಮಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಈ ಪೈಕಿ ಒಬ್ಬರಾದ ಚನ್ನರಾಯಪ್ಪ ಅವರಿಗೆ ಆಂಜನಪ್ಪ ಸಂಬಂಧಿಕರು. ಚನ್ನರಾಯಪ್ಪರ ರಕ್ಷಣೆಗಾಗಿ ಆಂಜನಪ್ಪ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ’ ಎಂದರು.

‘ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಮೇಲೆ 2018ರಲ್ಲಿ 40 ಜನರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ. ಬಲಾಢ್ಯರಾಗಿರುವ ಅವರೆಲ್ಲರೂ ಆರ್ಥಿಕವಾಗಿ ಸ್ಥಿತಿವಂತರು. ಈಗ ಕಲ್ಲು ಬಂಡೆ ಜಾಗ ಲೀಸ್‌ಗೆ ಪಡೆದಿರುವವರು ಕಲ್ಲು ಕುಟಿಕ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ವರ್ಗಕ್ಕೆ ಸೇರಿದವರು’ ಎಂದು ವಿವರಿಸಿದರು.

‘ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ನಿಯಮ 3ಈ ಅಡಿ ಯಂತ್ರೋಪಕರಣ ಬಳಸದೆ ಸಾಂಪ್ರದಾಯಿಕವಾಗಿ ಕಲ್ಲು ತೆಗೆಯುವವರಿಗೆ ದಿನ್ನೆಹೊಸಹಳ್ಳಿ ಸರ್ವೆ ನಂಬರ್‌ 58, ದಾನವಹಳ್ಳಿ ಸರ್ವೆ ನಂಬರ್‌ 2ರಲ್ಲಿ 14 ಎಕರೆಯನ್ನು ಜಿಲ್ಲಾ ಟಾಸ್ಕ್ ಫೋರ್ಸ್‌ ಸಮಿತಿಯು ಮಂಜೂರು ಮಾಡಿದೆ. ಅಲ್ಲದೇ, ಡ್ರೋಣ್ ಸರ್ವೆ ಮಾಡಿ 2 ಸಹಕಾರ ಸಂಘಗಳಿಗೆ ಹಾಗೂ 6 ಮಂದಿ ವೃತ್ತಿಪರರಿಗೆ 8 ಬ್ಲಾಕ್‌ಗಳ ಪ್ರದೇಶಕ್ಕೆ ಲೀಸ್‌ ನೀಡಲಾಗಿದೆ’ ಎಂದು ಹೇಳಿದರು.

ಕಾನೂನು ಕ್ರಮ: ‘ಸರ್ಕಾರಕ್ಕೆ ಈಗಾಗಲೇ ಭದ್ರತಾ ಠೇವಣಿ, ಮೋಜಿಣಿ ಶುಲ್ಕ ಪಾವತಿಸಿ ಅಧಿಸೂಚನೆಯ ಷರತ್ತು ಮತ್ತು ನಿಯಮಗಳನ್ನು ಒಪ್ಪಿ ಪ್ರಮಾಣಪತ್ರ ಸಲ್ಲಿಸಿದ್ದೇವೆ. ಆದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಗಣಿಗಾರಿಕೆ ತಡೆದು, ಸರ್ವೆ ಗುರುತು ನಾಶಪಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ದೊಡ್ಡವಲ್ಲಬಿ ಗ್ರಾಮದ ನರಸಿಂಹಯ್ಯ, ವಿಜಯ್‌ಕುಮಾರ್, ಬಿ.ಕೆ.ಮುನಿರಾಜು, ಬಿ.ವಿ.ರಾಜಣ್ಣ, ಕೃಷ್ಣಪ್ಪ, ಎನ್.ವಿಜಯಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT