ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ

ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯ
Last Updated 21 ಜನವರಿ 2021, 16:50 IST
ಅಕ್ಷರ ಗಾತ್ರ

ಕೋಲಾರ: ‘ವಚನಕಾರ ಅಂಬಿಗರ ಚೌಡಯ್ಯರು ಜನ ಸಮೂಹದಲ್ಲಿನ ಮೂಢನಂಬಿಕೆ ತೊಡೆದು ಹಾಕುತ್ತಲೇ ವಿಚಾರಪರ ವಾಸ್ತವ ಮೂಡಿಸಿದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿ, ‘ಚೌಡಯ್ಯರು ಸಮಾಜದಲ್ಲಿನ ತಾರತಮ್ಯದ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟು ಭದ್ರಗೊಳಿಸಲು ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಬಸವಣ್ಣರ ಕಾಲಘಟ್ಟದ ನೇರ ನಡೆ ನುಡಿಯ ಅಂಬಿಗರ ಚೌಡಯ್ಯ ವೃತ್ತಿಯಿಂದ ಪ್ರವೃತ್ತಿಯಿಂದ ಅನುಭಾವಿ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವರು. ಇವರು ಕಾಯಕಕ್ಕೆ ವಿಶೇಷ ಮಾನ್ಯತೆ ನೀಡಿದರು. ಸಮಾಜಕ್ಕೆ ಅಗತ್ಯವಾದ ಮೌಲ್ಯಗಳು ಅವರ ವಚನಗಳಲ್ಲಿ ಅಡಗಿವೆ’ ಎಂದು ಹೇಳಿದರು.

‘ಭಕ್ತಿಯಿಂದ ಪೂಜಿಸಿದರೇ ಶಿವನು ಒಳಿಯುತ್ತಾನೆ ಎಂಬ ಸಂದೇಶ ಸಾರಿದ ಚೌಡಯ್ಯರು ಎಲ್ಲರಿಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ಎಲ್ಲರೂ ಸಮಾನರೆಂದು ಭಾವಿಸಿ ಶೋಷಣೆಯ ವಿರುದ್ಧ ಹೋರಾಟ ಮಾಡಿದ ಇವರು ನಿಜಧೀರ ಚೌಡಯ್ಯ ಎಂಬ ಖ್ಯಾತಿ ಪಡೆದರು’ ಎಂದು ಬಣ್ಣಿಸಿದರು.

‘ಚೌಡಯ್ಯರ ಮಾತು ಕಟುವಾದರೂ ನುಡಿದಂತೆ ನಡೆದವರು. ನಿಜಾರ್ಥದಲ್ಲಿ ಅವರು ಬಂಡುಕೋರ, ಕಾಂತ್ರಿಕಾರಿ ಶರಣರು. ಎಲ್ಲಾ ಶರಣರಂತೆ ಕಾಯಕ ಯೋಗಿ. ಚೌಡಯ್ಯರ 278 ವಚನಗಳು ಲಭ್ಯವಿದ್ದು, ಆ ವಚನಗಳ ಸಾರ ಅರಿತು ಸಮ ಸಮಾಜ ನಿರ್ಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಚೌಡಯ್ಯರು ವಚನ ಸಾಹಿತ್ಯದಲ್ಲಿ ಅಧ್ಯಾತ್ಮಿಕ ನೆಲೆ ತೋರಿಸಿಕೊಟ್ಟಿದ್ದಾರೆ. ಸಮಾಜದ ಅಂಕುಡೊಂಕು ತಿದ್ದಲು ವಚನಗಳನ್ನು ನೀಡಿ, ಸಮಾನತೆಯ ಸಂದೇಶ ಸಾರುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಅವರ ವಚನಗಳನ್ನು ಜನರಿಗೆ ಮುಟ್ಟಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಷಾದಿಸಿದರು.

ವಚನಕಾರರ ರಕ್ಷಣೆ: ‘12ನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯರು ವಚನ ಚಳವಳಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಪರಿಶುದ್ಧ ಹೃದಯದಲ್ಲಿ ದೇವರು ಖಂಡಿತವಾಗಿಯು ನೆಲೆಸುತ್ತಾನೆ. ಕಲ್ಯಾಣ ಕ್ರಾಂತಿ ಸಮಯದಲ್ಲಿ ವಚನಕಾರರನ್ನು ರಕ್ಷಣೆ ಮಾಡಿದ ಕೀರ್ತಿ ಚೌಡಯ್ಯ ಅವರಿಗೆ ಸಲ್ಲುತ್ತದೆ’ ಎಂದು ಹರಿಕಥೆ ವಿದ್ವಾನ್‌ ಎನ್.ಆರ್.ಜ್ಞಾನಮೂರ್ತಿ ಅಭಿಪ್ರಾಯಪಟ್ಟರು.

‘ಅಂಬಿಗರ ಚೌಡಯ್ಯರು ಧರ್ಮ ಮತ್ತು ವೈಯಕ್ತಿಕವಾಗಿ ಯಾರನ್ನೂ ನಿಂದಿಸುತ್ತಿರಲಿಲ್ಲ. ಧರ್ಮ, ಜಾತಿ ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ಅಂತಹವರ ಬಗ್ಗೆ ಇತಿಹಾಸಕಾರರು ಸರಿಯಾಗಿ ಸಂಶೋಧನೆ ಮಾಡದಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

ಸಮುದಾಯ ಭವನ: ‘ಚೌಡಯ್ಯರ ವಚನಗಳು ಸಮಾಜದಲ್ಲಿನ ಮೇಲು- ಕೀಳು ಶೋಷಣೆ ವಿರುದ್ಧ ಹೋರಾಡುವಂತೆ ಪ್ರೇರೇಪಿಸುತ್ತವೆ. ಅವರು ಸಮಾಜದ ಅಂಕು-ಡೊಂಕುಗಳನ್ನು ವಚನಗಳ ಮೂಲಕ ತಿದ್ದಿ ಜನರಲ್ಲಿ ಜಾಗೃತಿ ಮೂಡಿಸಿದರು. ಜಿಲ್ಲೆಯಲ್ಲಿ ಅಂಬಿಗರ ಚೌಡಯ್ಯರ ಸಮುದಾಯ ಭವನ ನಿರ್ಮಿಸಬೇಕು’ ಎಂದು ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಮುನಿಕೃಷ್ಣ ಮನವಿ ಮಾಡಿದರು.

ಜಿಲ್ಲಾ ಬೆಸ್ತ ಸಂಘದ ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಫಲ್ಗುಣ, ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷ ಕೆ.ರಾಜೇಶ್‌ಸಿಂಗ್, ಜಿಲ್ಲಾ ಮರಾಠ ಸಂಘದ ಅಧ್ಯಕ್ಷ ಎಸ್.ರಾಜಾರಾವ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT