ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ: ಜನರಿಗೆ ಜಿ.ಪಂ ಸಿಇಒ ನಾಗರಾಜ್‌ ಮನವಿ
Last Updated 7 ಜೂನ್ 2021, 15:25 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಮನೆಯ ಸುತ್ತಮುತ್ತ ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜನರು ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್‌.ಎಂ.ನಾಗರಾಜ್‌ ಸೂಚಿಸಿದರು.

ಮಲೇರಿಯಾ ವಿರೋಧಿ ಮಾಸಾಚರಣೆ ಸಂಬಂಧ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಜೂನ್ 30ರವರೆಗೆ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸಲಾಗುತ್ತದೆ. ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಿ ರಕ್ತ ಪರೀಕ್ಷೆ ಮಾಡಬೇಕು. ವಲಸೆ ಕಾರ್ಮಿಕರಿಗೆ ಮತ್ತು ಬಡವರಿಗೆ ಸೊಳ್ಳೆ ಪರದೆ ನೀಡಬೇಕು’ ಎಂದು ತಿಳಿಸಿದರು.

‘ಮಲೇರಿಯಾ ಕುರಿತು ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸುವ ಮೂಲಕ ಅರಿವು ಮೂಡಿಸಬೇಕು. ಮನೆಗಳ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯಾಗದಂತೆ, ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ತಿಳಿವಳಿಕೆ ನೀಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

‘ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಜಾನುವಾರು ತೊಟ್ಟಿಗಳು ಮತ್ತು ಕೃಷಿ ಹೊಂಡ, ಕೆರೆ, ಕುಂಟೆ, ಕಾಲುವೆ ನೀರು ಇರುವ ಕಡೆ ಗಾಂಬೂಸಿಯಾ ಹಾಗೂ ಗಪ್ಪಿ ಮೀನು ಮರಿಗಳನ್ನು ಬಿಡಬೇಕು. ಈ ಸಂಬಂಧ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಹಾಸ್ಟೆಲ್ ಮಕ್ಕಳಿಗೆ ಸೊಳ್ಳೆ ಪರದೆ ಮತ್ತು ಪೌಷ್ಟಿಕ ಆಹಾರ ಕೊಡಬೇಕು. ಜ್ವರ ಬಂದ ತಕ್ಷಣ ರಕ್ತ ಪರೀಕ್ಷೆ ಮಾಡಿಸಬೇಕು’ ಎಂದು ಹೇಳಿದರು.

‘ಶೂನ್ಯ ಮಲೇರಿಯಾ ಗುರಿ ತಲುಪೋಣ’ ಎಂಬ ಘೋಷಣೆಯೊಂದಿಗೆ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸಲಾಗುತ್ತದೆ. 2025ರ ವೇಳೆಗೆ ಮಲೇರಿಯಾ ನಿರ್ಮೂಲನೆ ಗುರಿ ತಲುಪುತ್ತೇವೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಕಮಲಾ ವಿವರಿಸಿದರು.

ಉಚಿತ ಚಿಕಿತ್ಸೆ: ‘ಎಲ್ಲಾ ಸೊಳ್ಳೆಗಳಿಂದ ಮಲೇರಿಯಾ ಬರುವುದಿಲ್ಲ. ಅನಾಫಿಲೀಸ್ ಹೆಣ್ಣು ಸೊಳ್ಳೆಗಳು ಮಾತ್ರ ರೋಗ ಪ್ರಸರಣ ಮಾಡುತ್ತವೆ. ಈ ಸೊಳ್ಳೆಗಳು ನೀರಿನಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಲಾರ್ವ ಆಗಿ, ಮರಿಯಾಗಿ, ವಯಸ್ಕ ಸೊಳ್ಳೆಯಾಗಿ 4 ಹಂತದಲ್ಲಿ ಬೆಳೆಯುತ್ತದೆ’ ಎಂದು ಮಾಹಿತಿ ನೀಡಿದರು.

‘ವಲಸೆ ಕಾರ್ಮಿಕರಿಗೆ ರಕ್ತ ಪರೀಕ್ಷೆ ಮಾಡಿ ಕಾಯಿಲೆ ಖಚಿತವಾದರೆ ಉಚಿತ ಚಿಕಿತ್ಸೆ ಹಾಗೂ ಸೊಳ್ಳೆ ಪರದೆ ನೀಡುತ್ತಿದ್ದೇವೆ. ಮಲೇರಿಯಾಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾತ್ರೆ ದೊರೆಯುತ್ತದೆ. ಸಾರ್ವಜನಿಕರು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ರಕ್ತ ಪರೀಕ್ಷೆ ಮಾಡಿಸಿ ಕಾಯಿಲೆ ಖಚಿತವಾದರೆ ವೈದ್ಯರಿಂದ ಸೂಕ್ತ ಔಷಧ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಜನರು ಮನೆಗಳ ಸುತ್ತಮುತ್ತ ಗುಂಡಿಗಳಲ್ಲಿ ನೀರು ಶೇಖರಣೆ ಆಗದಂತೆ ಕ್ರಮ ವಹಿಸಬೇಕು. ಸಂಜೆ 5 ಗಂಟೆಯ ನಂತರ ಮನೆಯ ಬಾಗಿಲು ಮುಚ್ಚಬೇಕು. ಸೊಳ್ಳೆ ಪರದೆ ಉಪಯೋಗಿಸಿ ಸೊಳ್ಳೆ ಕಚ್ಚದಂತೆ ನೋಡಿಕೊಂಡರೆ ಮಲೇರಿಯಾ ನಿರ್ಮೂಲನೆ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ಜಿಲ್ಲಾ ಕುಷ್ಠ ಮತ್ತು ಅಂಧತ್ವ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ, ಡಿಡಿಪಿಐ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪಾಲಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT