ಗುರುವಾರ , ಮಾರ್ಚ್ 23, 2023
31 °C
ಜಮೀನು ಹುಡುಕಾಟದಲ್ಲೇ ಕಾಲಹರಣ

ಎಪಿಎಂಸಿ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮೀನಮೇಷ: ರೈತರು ಹೈರಾಣ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಮಾರುಕಟ್ಟೆ ಸ್ಥಳಾಂತರದ ಕೂಗು ಅರಣ್ಯರೋದನವಾಗಿದೆ.

ಟೊಮೆಟೊ ವಹಿವಾಟಿಗೆ ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿರುವ ಈ ಮಾರುಕಟ್ಟೆಯಲ್ಲಿ ತರಕಾರಿ ವಹಿವಾಟಿಗೆ ನಿತ್ಯವೂ ಸಮಸ್ಯೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಜಾಗದಲ್ಲಿ 1980ರಲ್ಲಿ ಆರಂಭವಾದ ಈ ಮಾರುಕಟ್ಟೆ ತುಂಬಾ ಕಿರಿದಾಗಿದ್ದು, ಜಾಗದ ಸಮಸ್ಯೆಯು ರೈತರು, ಮಂಡಿ ಮಾಲೀಕರು ಹಾಗೂ ವರ್ತಕರನ್ನು ತೀವ್ರವಾಗಿ ಬಾಧಿಸುತ್ತಿದೆ.

ಮಾರುಕಟ್ಟೆ ಕಾರ್ಯಾರಂಭ ಮಾಡಿದಾಗ ಸುಮಾರು 22 ಎಕರೆ ವಿಸ್ತಾರವಾಗಿತ್ತು. ನಂತರ 4 ಎಕರೆ ಜಾಗವನ್ನು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ನೀಡಲಾಯಿತು. ಆರಂಭದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಪ್ರಮಾಣ ತುಂಬಾ ಕಡಿಮೆಯಿತ್ತು. ವರ್ಷಗಳು ಉರುಳಿದಂತೆ ಜಿಲ್ಲೆಯಲ್ಲಿ ತರಕಾರಿ ಬೆಳೆಗಾರರ ಸಂಖ್ಯೆ ಹಾಗೂ ಬೆಳೆ ವಿಸ್ತೀರ್ಣ ಹೆಚ್ಚಿ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ದ್ವಿಗುಣವಾಯಿತು.

ಮಾರುಕಟ್ಟೆಯಲ್ಲಿ ಸದ್ಯ 198 ತರಕಾರಿ ಮಂಡಿಗಳಿವೆ. ಜತೆಗೆ ಮಾರುಕಟ್ಟೆ ಆವರಣದಲ್ಲಿ ವರ್ತಕರು ತರಕಾರಿ ವಹಿವಾಟು ನಡೆಸುತ್ತಿದ್ದಾರೆ. ಪ್ರತಿನಿತ್ಯ ಸುಮಾರು 30 ಸಾವಿರ ಕ್ವಿಂಟಾಲ್‌ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ. ಜತೆಗೆ 2 ಸಾವಿರ ಕ್ವಿಂಟಾಲ್‌ನಷ್ಟು ಇತರೆ ತರಕಾರಿಗಳು ಬರುತ್ತಿವೆ. ಅಲ್ಲಿದೇ, ಅಕ್ಕಿ, ರಾಗಿಯಂತಹ ದಿನಸಿ ಪದಾರ್ಥಗಳ ವಹಿವಾಟು ನಡೆಯುತ್ತಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳ ಜತೆಗೆ ಪಕ್ಕದ ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೂ ಈ ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಬರುತ್ತಾರೆ. ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಲೋಡ್‌ಗಟ್ಟಲೆ ತರಕಾರಿ ಬರುತ್ತದೆ.

ಮಾರುಕಟ್ಟೆಯಿಂದ ರಾಜಸ್ತಾನ, ಕೇರಳ, ತಮಿಳುನಾಡು, ಅಸ್ಸಾಂ, ಒಡಿಶಾ, ಬಿಹಾರ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ತರಕಾರಿ ಪೂರೈಕೆಯಾಗುತ್ತಿವೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ದೇಶಕ್ಕೂ ತರಕಾರಿ ರಫ್ತಾಗುತ್ತಿದೆ.

ಕೋಟಿಗಟ್ಟಲೇ ಆದಾಯ: ಸುಂಕ ಹಾಗೂ ಮಂಡಿಗಳ ಬಾಡಿಗೆ ರೂಪದಲ್ಲಿ ಎಪಿಎಂಸಿ ಆಡಳಿತ ಮಂಡಳಿಗೆ ಕೋಟಿಗಟ್ಟಲೆ ಆದಾಯ ಬರುತ್ತಿದೆ. ಮಾರುಕಟ್ಟೆಯಲ್ಲಿ ವರ್ಷಕ್ಕೆ ಸುಮಾರು ₹ 400 ಕೋಟಿ ವಹಿವಾಟು ನಡೆಯುತ್ತಿದ್ದು, ₹ 5 ಕೋಟಿ ಸುಂಕ ಸಂಗ್ರಹವಾಗುತ್ತಿದೆ. ಜತೆಗೆ ಮಂಡಿಗಳ ಬಾಡಿಗೆ ರೂಪದಲ್ಲಿ ₹ 25 ಲಕ್ಷ ಆದಾಯ ಬರುತ್ತಿದೆ. ಇದರ ಜತೆಗೆ ಸರ್ಕಾರದಿಂದ ಕಾಲಕಾಲಕ್ಕೆ ಅನುದಾನ ಬಿಡುಗಡೆಯಾಗುತ್ತದೆ.

ಇಷ್ಟೆಲ್ಲಾ ಆದಾಯವಿದ್ದರೂ ಎಪಿಎಂಸಿ ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಮಾರುಕಟ್ಟೆಯಲ್ಲಿ ಶೌಚಾಲಯ, ರಸ್ತೆ, ನೈರ್ಮಲ್ಯ ಹೀಗೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ತರಕಾರಿಯೊಂದಿಗೆ ರಾತ್ರಿಯೇ ಮಾರುಕಟ್ಟೆಗೆ ಬರುವ ರೈತರಿಗೆ ಉಳಿದುಕೊಳ್ಳಲು ಸೂಕ್ತ ಕೊಠಡಿ ವ್ಯವಸ್ಥೆಯಿಲ್ಲ. ರೈತರು ಮಾರುಕಟ್ಟೆ ಆವರಣದ ಕಟ್ಟೆಗಳ ಮೇಲೆ ಅಥವಾ ವಾಹನಗಳಲ್ಲೇ ಮಲಗುವ ಪರಿಸ್ಥಿತಿಯಿದೆ. ಶೌಚಾಲಯಗಳ ಸಂಖ್ಯೆ ಕಡಿಮೆಯಿದ್ದು, ಅಲ್ಲಿ ನೀರಿನ ಅಭಾವವಿದೆ.

ಕಸದ ಸಮಸ್ಯೆ: ಮಾರಾಟವಾಗದೆ ಉಳಿಯುವ ತರಕಾರಿಗಳ ವಿಲೇವಾರಿಗೆ ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಕಸದ ತೊಟ್ಟಿ ನಿರ್ಮಿಸಿಲ್ಲ ಹಾಗೂ ಪ್ಲಾಸ್ಟಿಕ್‌ ಡ್ರಮ್‌ಗಳನ್ನು ಇಟ್ಟಿಲ್ಲ. ಹೀಗಾಗಿ ಮಂಡಿ ಮಾಲೀಕರು ಹಾಗೂ ರೈತರು ಉಳಿದ ತರಕಾರಿಗಳನ್ನು ಮಾರುಕಟ್ಟೆ ಆವರಣದಲ್ಲೇ ಸುರಿಯುತ್ತಿದ್ದಾರೆ. ತರಕಾರಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಮಾರುಕಟ್ಟೆಯಲ್ಲಿ ನೈರ್ಮಲ್ಯ ಸಮಸ್ಯೆ ಎದುರಾಗಿದೆ.

ವಿಲೇವಾರಿಯಾಗದೆ ಉಳಿದ ತರಕಾರಿಗಳು ಸ್ಥಳದಲ್ಲೇ ಕೊಳೆತು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದೆ. ಇದರಿಂದ ರೈತರು ಹಾಗೂ ವರ್ತಕರು ಮಾರುಕಟ್ಟೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೈರ್ಮಲ್ಯ ಸಮಸ್ಯೆಯಿಂದ ಹಂದಿ, ನೊಣ, ಸೊಳ್ಳೆ ಕಾಟ ಹೆಚ್ಚಿದೆ. ತರಕಾರಿಗಳ ಮೇಲೆ ನೊಣಗಳು ಕುಳಿತಿರುವ ದೃಶ್ಯ ಕಂಡುಬರುತ್ತದೆ.

ಮಾರುಕಟ್ಟೆಯ ಸ್ವಚ್ಛತೆ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಗುತ್ತಿಗೆದಾರರು ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಹೆಚ್ಚಿನ ಕೆಲಸಗಾರರನ್ನು ನಿಯೋಜಿಸಿಲ್ಲ. ಹೀಗಾಗಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದ್ದು, ಚರಂಡಿಗಳಲ್ಲಿ ಹಾಗೂ ಮಾರುಕಟ್ಟೆ ಆವರಣದಲ್ಲಿ ಕಸ ರಾಶಿಯಾಗಿ ಬಿದ್ದಿದೆ.

ರಾಡಿಯಾಗುವ ರಸ್ತೆಗಳು: ಎಪಿಎಂಸಿಯಲ್ಲಿನ ತರಕಾರಿ ತ್ಯಾಜ್ಯದಿಂದ ಪಶು ಆಹಾರ ತಯಾರಿಸುವ ಘಟಕ ಆರಂಭಿಸುವ ಸಂಬಂಧ ಜಿಲ್ಲಾಡಳಿತವು ಈ ಹಿಂದೆ ಕರ್ನಾಟಕ ಹಾಲು ಮಹಾಮಂಡಳದೊಂದಿಗೆ (ಕೆಎಂಎಫ್‌) ಚರ್ಚೆ ನಡೆಸಿತ್ತು. ಪಶು ಆಹಾರ ಘಟಕದ ಮೂಲಕ ಮಾರುಕಟ್ಟೆಯಲ್ಲಿನ ತರಕಾರಿ ತ್ಯಾಜ್ಯದ ಸಮಸ್ಯೆ ಪರಿಹರಿಸುವುದು ಜಿಲ್ಲಾಡಳಿತದ ಚಿಂತನೆಯಾಗಿತ್ತು. ಆದರೆ, ಜಿಲ್ಲಾಡಳಿತದ ಪ್ರಯತ್ನ ಕೈಗೂಡಲಿಲ್ಲ.

ತುಂತುರು ಮಳೆ ಬಂದರೂ ಮಾರುಕಟ್ಟೆ ಆವರಣ ಕೆಸರು ಗದ್ದೆಯಂತಾಗುತ್ತಿದೆ. ಆವರಣದಲ್ಲಿ ವಿಲೇವಾರಿಯಾಗದೆ ಬಿದ್ದಿರುವ ತರಕಾರಿ ತ್ಯಾಜ್ಯದ ಜತೆ ಮಳೆ ನೀರು ಸೇರಿ ರಸ್ತೆಗಳು ರಾಡಿಯಾಗುತ್ತವೆ. ಮಳೆಗಾಲದಲ್ಲಿ ಮಾರುಕಟ್ಟೆ ಆವರಣದಲ್ಲಿ ಓಡಾಡುವುದು ದೊಡ್ಡ ಸಾಹಸವೇ ಸರಿ.

ಜಾಗದ ಸಮಸ್ಯೆ: ಮಾರುಕಟ್ಟೆ ಆವರಣ ಕಿರಿದಾಗಿರುವ ಕಾರಣ ವಹಿವಾಟಿಗೆ ಸಮಸ್ಯೆಯಾಗುತ್ತಿದೆ. ವಾಹನಗಳ ನಿಲುಗಡೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿಲ್ಲದ ಕಾರಣ ಚಾಲಕರು ಪಕ್ಕದ ಸರ್ವಿಸ್‌ ರಸ್ತೆ ಹಾಗೂ ಮಾಲೂರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಎಪಿಎಂಸಿ ಪಕ್ಕದ ಸರ್ವಿಸ್‌ ರಸ್ತೆ ಮತ್ತು ಮಾಲೂರು ರಸ್ತೆಯಲ್ಲಿ ತರಕಾರಿ ಸಾಗಣೆ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ.

ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬಂದ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಿ ಸಮಸ್ಯೆ ಗಂಭೀರವಾಗುತ್ತದೆ. ವಾಹನಗಳಿಗೆ ಮಾರುಕಟ್ಟೆಯ ಒಳಗೆ ಹೋಗಲು ಸಾಧ್ಯವಾಗದೆ ಪ್ರವೇಶದ್ವಾರದಲ್ಲೇ ನಿಲ್ಲುತ್ತವೆ. ಇದರಿಂದ ತರಕಾರಿಗಳು ಹರಾಜು ಪ್ರಕ್ರಿಯೆ ತಡವಾಗಿ ರೈತರಿಗೆ ನಷ್ಟವಾಗುತ್ತಿದೆ.

ನಿರಂತರ ಪ್ರಯತ್ನ: ಎಪಿಎಂಸಿ ಸ್ಥಳಾಂತರಕ್ಕೆ ಅಗತ್ಯವಿರುವ ಜಮೀನಿಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ಪ್ರಯತ್ನ ನಡೆಯುತ್ತಲೇ ಇದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕೆ.ವಿ.ತ್ರಿಲೋಕಚಂದ್ರ ಅವರು ಮಾಲೂರು ರಸ್ತೆಯ ಮಂಗಸಂದ್ರ ಗ್ರಾಮದ ಸರ್ವೆ ನಂಬರ್‌ 90ರಲ್ಲಿನ ಅರಣ್ಯ ಇಲಾಖೆಯ 30 ಎಕರೆ ಸರ್ಕಾರಿ ಜಮೀನು ಗುರುತಿಸಿ ಅಲ್ಲಿಗೆ ಟೊಮೆಟೊ ಮಾರುಕಟ್ಟೆ ಸ್ಥಳಾಂತರಿಸುವ ಪ್ರಯತ್ನ ಮಾಡಿದರು. ಜತೆಗೆ ಆ ಜಾಗದ ಸುತ್ತಮುತ್ತಲಿನ  ಕೃಷಿ ಜಮೀನು ಗುರುತಿಸಿ ಎಪಿಎಂಸಿಗೆ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ, ಕೃಷಿ ಜಮೀನು ನೀಡಲು ರೈತರು ಒಪ್ಪದಿದ್ದರಿಂದ ಮಾರುಕಟ್ಟೆ ಸ್ಥಳಾಂತರದ ಪ್ರಯತ್ನ ಸ್ಥಗಿತಗೊಂಡಿತು.

ಮಂಗಸಂದ್ರದ ಬಳಿ ಜಮೀನು ಸಿಗದ ಕಾರಣ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದ ಮಡೇರಹಳ್ಳಿಯ ಸರ್ವೆ ನಂಬರ್‌ 35ರಲ್ಲಿನ ಸರ್ಕಾರಿ ಗೋಮಾಳದ ಜಮೀನನ್ನು ಮಾರುಕಟ್ಟೆಗೆ ಪಡೆಯಲು ನಡೆಸಿದ ಪ್ರಯತ್ನವೂ ವಿಫಲವಾಯಿತು. ಈ ಜಮೀನು ಮೀಸಲು ಅರಣ್ಯ ಪ್ರದೇಶವಾದ ಕಾರಣ ಮಾರುಕಟ್ಟೆ ಸ್ಥಳಾಂತರಕ್ಕೆ ಜಮೀನು ಹಸ್ತಾಂತರ ಸಾಧ್ಯವಾಗಲಿಲ್ಲ.

ಹೀಗಾಗಿ ಎಪಿಎಂಸಿ ಆಡಳಿತ ಮಂಡಳಿಯು 2018ರಲ್ಲಿ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ಸರ್ವೆ ನಂಬರ್‌ 74ರಲ್ಲಿನ ಅರಣ್ಯ ಇಲಾಖೆಯ 30 ಎಕರೆ ಜಮೀನು ಗುರುತಿಸಿ ಅಲ್ಲಿಗೆ ಟೊಮೆಟೊ ಮಾರುಕಟ್ಟೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿತು. ಜಿಲ್ಲಾಡಳಿತವು ಈ ಜಮೀನಿಗೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಬೇರೆಡೆ ಜಮೀನು ನೀಡುವ ನಿರ್ಧಾರ ಕೈಗೊಂಡು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು.

ಆದರೆ, ಈ ಜಮೀನು ಕೆರೆಯಂಗಳದ ಜಲಮೂಲ ಪ್ರದೇಶವಾದ ಕಾರಣ ಕರ್ನಾಟಕ ಭೂ ಕಂದಾಯ ನಿಯಮದ ಪ್ರಕಾರ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಆಯುಕ್ತರು ಪ್ರಸ್ತಾವ ತಿರಸ್ಕರಿಸಿದರು. ಇದೀಗ ಅರಾಭಿಕೊತ್ತನೂರು, ನರಸಾಪುರ, ಕೋರಗಂಡಹಳ್ಳಿ ಸೇರಿದಂತೆ ವಿವಿಧೆಡೆ ಜಮೀನಿನ ಹುಡುಕಾಟ ನಡೆದಿದ್ದು, ರೈತರು ಮಾರುಕಟ್ಟೆ ಜಾಗದ ವಿಸ್ತರಣೆ ಹಾಗೂ ಸ್ಥಳಾಂತರದ ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು