ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಡೆಗೆ ಸಹಕರಿಸಿ: ವಿ.ಸತೀಶ್‌ಮೂರ್ತಿ

Last Updated 1 ಮೇ 2021, 14:00 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಸೋಂಕು ತಡೆಗೆ ಸಹಕರಿಸಬೇಕು’ ಎಂದು ಜನ್ನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಸತೀಶ್‌ಮೂರ್ತಿ ಮನವಿ ಮಾಡಿದರು.

ಗ್ರಾಮದಲ್ಲಿ ಶನಿವಾರ ಸ್ಯಾನಿಟೈಸರ್ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿ, ‘ಈ ಹಿಂದೆ ಕೋವಿಡ್ ಮಾರಿ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಕೋವಿಡ್‌ 2ನೇ ಅಲೆಯಲ್ಲಿ ಗ್ರಾಮಗಳಿಗೂ ಸೋಂಕು ವ್ಯಾಪಿಸುತ್ತಿದೆ. ಇದರಿಂದ ಗ್ರಾಮಗಳು ಸುರಕ್ಷಿತವಲ್ಲ ಎಂಬ ಆತಂಕ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನರು ಕೋವಿಡ್‌ ಪರಿಸ್ಥಿತಿಯ ಗಂಭೀರತೆ ಅರಿತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ್ಗೆ ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಮನೆಗಳ ಅಕ್ಕಪಕ್ಕ ಸ್ವಚ್ಛತೆ ಕಾಪಾಡಬೇಕು. ಗ್ರಾಮಕ್ಕೆ ಹೊರಗಿನಿಂದ ಹೊಸದಾಗಿ ಯಾರೇ ಬಂದರೂ ಮಾಹಿತಿ ನೀಡಬೇಕು’ ಎಂದು ಕೋರಿದರು.

‘ಜ್ವರ, ಶೀತ, ನೆಗಡಿ, ಕೆಮ್ಮು ಸೇರಿದಂತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬಾರದು. ಶೀಘ್ರವೇ ಕೋವಿಡ್ ಪರೀಕ್ಷೆ ಮಾಡಿಸಿ ಸೋಂಕು ದೃಢಪಟ್ಟರೆ ಭಯಪಡದೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲು ಅವಕಾಶವಿದೆ. ಕೊರೊನಾ ಸೋಂಕಿತರನ್ನು ಅವಮಾನಿಸಲಾಗುತ್ತಿದೆ ಮತ್ತು ಕೋವಿಡ್‌ ಬಗ್ಗೆ ಮೂಢನಂಬಿಕೆಯಿದೆ. ಇದು ಸರಿಯಲ್ಲ. ಕೋವಿಡ್‌ ಒಂದು ಕಾಯಿಲೆಯಷ್ಟೇ. ಸಕಾಲಕ್ಕೆ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು’ ಎಂದು ಸಲಹೆ ನೀಡಿದರು.

‘ಗ್ರಾಮದ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಈ ಹಿಂದೆ ಸಿಡುಬು, ದಡಾರ ಸೇರಿದಂತೆ ಮಾರಕ ಕಾಯಿಲೆಗಳಿಗೆ ಲಸಿಕೆ ಪಡೆದಂತೆಯೇ ಈಗ ಕೋವಿಡ್‌ಗೆ ಲಸಿಕೆ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಎಂಪಿಸಿಎಸ್ ಅಧ್ಯಕ್ಷ ಕೆ.ಟಿ.ಗೋಪಾಲಪ್ಪ, ಗ್ರಾ.ಪಂ ಸದಸ್ಯರಾದ ಲಕ್ಷ್ಮಣ್, ಚಂದ್ರಾರೆಡ್ಡಿ, ಜಯರಾಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT