ಮಂಗಳವಾರ, ಅಕ್ಟೋಬರ್ 26, 2021
26 °C
ರೈತರಿಗೆ ಆ್ಯಪ್‌ ಮೂಲಕ ಒದಗಿಸುತ್ತೇವೆ: ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಭರವಸೆ

ನೀರಿನ ಲಭ್ಯತೆ: ಬೆರಳ ತುದಿಯಲ್ಲೇ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಭೂಗರ್ಭದಲ್ಲಿ ನೀರಿನ ಲಭ್ಯತೆ ಶೋಧಿಸಿ ರೈತರಿಗೆ ತಮ್ಮ ಕೃಷಿ ಜಮೀನಿನಲ್ಲಿನ ನೀರಿನ ಮಾಹಿತಿಯನ್ನು ಅವರ ಬೆರಳ ತುದಿಯಲ್ಲೇ ಮೊಬೈಲ್ ಆ್ಯಪ್ ಮೂಲಕ ಒದಗಿಸಲಾಗುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ಅಂತರ್ಜಲ ನಿರ್ದೇಶನಾಲಯ, ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಂತರ್ಜಲ ಮೌಲೀಕರಣ- 2020ರ ವರದಿ ಬಿಡುಗಡೆ ಸಮಾರಂಭ ಹಾಗೂ ಅಟಲ್ ಭೂಜಲ ಯೋಜನೆ ಸುಸ್ಥಿರ ಅಂತರ್ಜಲ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ರೈತರಿಗೆ ನೀರಾವರಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯಿತಿ ಮುಂದೆ ನಾಮಫಲಕ ಹಾಕಲಾಗುತ್ತದೆ. ರೈತರು ಅಲ್ಲಿ ಮಾಹಿತಿ ಪಡೆದು ತಮ್ಮ ಜಮೀನಿನಲ್ಲಿ ಅಂತರ್ಜಲ ಇದೆಯೋ ಅಥವಾ ಇಲ್ಲವೋ ಎಂಬುದನ್ನು ನೇರವಾಗಿ ದಿಶಾ ಆ್ಯಪ್‌ ಮಾದರಿಯಲ್ಲಿ ಮಾಹಿತಿ ಪಡೆಯಬಹುದು’ ಎಂದು ವಿವರಿಸಿದರು.

‘ರಾಜ್ಯ ಸರ್ಕಾರ 10 ಇಲಾಖೆಗಳನ್ನು ಒಳಗೊಂಡಂತೆ ಭೂಗರ್ಭದ ಶೋಧನೆ ಮಾಡಿ ಆದಷ್ಟು ಬೇಗ ಮತ್ತೊಂದು ವರದಿ ನೀಡಲಾಗುವುದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಲಸಂಪನ್ಮೂಲದ ಸ್ಥಿತಿಗತಿ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಮಾಹಿತಿ ನೀಡಲು ಕಾರ್ಯಕ್ರಮ ರೂಪಿಸಲಾಗುತ್ತದೆ. ಅಂತರ್ಜಲವು ಮನುಕುಲದ ಉಳಿವಿಗೆ ಮತ್ತು ಪ್ರಕೃತಿಗೆ ಅತ್ಯಮೂಲ್ಯ. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀರಿನ ಹಾಹಾಕಾರ ತಪ್ಪಿಸುವುದು ಎಲ್ಲರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಸರ್ಕಾರದಿಂದ 3 ವರ್ಷಕ್ಕೊಮ್ಮೆ ಅಂತರ್ಜಲ ಮೌಲೀಕರಣ ವರದಿ ಬಿಡುಗಡೆ ಮಾಡಲಾಗುತ್ತದೆ. ಭೂಗರ್ಭದಲ್ಲಿ ಅಂರ್ಜಲ ಹೇಗಿದೆ ಎಂಬ ಬಗ್ಗೆ ಸಮೀಕ್ಷೆ ಮಾಡಿ ಪುಸ್ತಕ ರೂಪದಲ್ಲಿ ಹೊರತರುತ್ತಾರೆ. ಪ್ರಸ್ತುತ ಭೂಮಿಯಲ್ಲಿ ಶೇ 98ರಷ್ಟು ಬಳಕೆಗೆ ಯೋಗ್ಯವಲ್ಲದ ಮತ್ತು ಕೇವಲ ಶೇ 2ರಷ್ಟು ಬಳಕೆಗೆ ಯೋಗ್ಯವಾದ ನೀರು ಲಭ್ಯವಿದೆ. ನೀರಿನ ಮರುಬಳಕೆ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಮುಂದಿನ ಪೀಳಿಗೆ ಉಳಿಸಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ 1,700 ಅಡಿಗೆ ನೀರು ಸಿಗುತ್ತಿತ್ತು. ಆದರೆ, ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬಂದ ನಂತರ 400ರಿಂದ 500 ಅಡಿಯಲ್ಲಿ ನೀರು ಸಿಗುತ್ತಿದೆ. ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ ಎಲ್ಲಾ ಕೆರೆ ತುಂಬಿಸುತ್ತೇವೆ. ಜಿಲ್ಲೆಯ ಜನ ನೀರನ್ನು ಹಿತಮಿತವಾಗಿ ಬಳಸಿ ಅಂತರ್ಜಲ ಉಳಿಸಬೇಕು’ ಎಂದು ಮನವಿ ಮಾಡಿದರು.

ಮನುಕುಲಕ್ಕೆ ಉಳಿಗಾಲವಿಲ್ಲ: ‘ಪ್ರಕೃತಿಯಲ್ಲಿ ಜಲ ಸಂಪನ್ಮೂಲ ಕಡಿಮೆಯಾಗಲು ಜನರೇ ಕಾರಣ. ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿ ನೀರಿನ ಸಮಸ್ಯೆ ತಲೆದೋರಿದೆ. ಹಿಂದೆ ಹಸಿರಿನಿಂದ ಕಂಗೊಳಿಸುತ್ತಿದ್ದ ಪ್ರದೇಶವನ್ನು ಮನುಷ್ಯ ದುರಾಸೆಗೆ ನಾಶ ಮಾಡಿ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದ್ದಾನೆ. ಈಗಾಲಾದರೂ ಎಚ್ಚೆತ್ತು ಅರಣ್ಯ ಸಂರಕ್ಷಣೆ ಮಾಡದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆತಂಕ ವ್ಯಕ್ತಪಡಿಸಿದರು.

ಸಂಸದ ಎಸ್‌.ಮುನಿಸ್ವಾಮಿ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಮುಳಬಾಗಿಲು ಶಾಸಕ ಎಚ್‌.ನಾಗೇಶ್, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ಮ್ಯತ್ಯುಂಜಯಸ್ವಾಮಿ, ಎಂಜಿನಿಯರ್ ಎನ್.ನಾಗರಾಜ್, ಅಂತರ್ಜಲ ನಿರ್ದೇಶನಾಲಯದ ನಿರ್ದೇಶಕ ಜಿ.ವಿಜಯಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.