ಸೋಮವಾರ, ಜನವರಿ 20, 2020
26 °C

ಸಂಸ್ಕೃತಿಯ ಬೇರಿಗೆ ಕೊಡಲಿ ಪೆಟ್ಟು: ಪ್ರಾಧ್ಯಾಪಕಿ ಪ್ರಸನ್ನಕುಮಾರಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ದೇಶದಲ್ಲಿ ಸಂವಿಧಾನ ಬದಲಿಸುವ ಕೂಗು ಎದ್ದಿದೆ. ಈ ಕೂಗು ಬಗ್ಗು ಬಡಿಯಲು ಪ್ರಗತಿಪರರು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು’ ಎಂದು ಸರ್ಕಾರಿ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಪ್ರಸನ್ನಕುಮಾರಿ ಅಭಿಪ್ರಾಯಪಟ್ಟರು.

ಆದಿಮ ಸಾಂಸ್ಕೃತಿಕ ಕೇಂದ್ರವು ಹುಣ್ಣಿಮೆ ಹಾಡು ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಭಾರತೀಯ ಸಂಸ್ಕೃತಿಯ ಬೇರುಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಸಂಸ್ಕೃತಿಯ ಬೇರು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

‘ಅಂಬೇಡ್ಕರ್ ರಚಿಸಿರುವ ಸಂವಿಧಾನವು ಜಗತ್ತಿನಲ್ಲೇ ಅತಿ ಶ್ರೇಷ್ಠವಾದುದು. ಇಂತಹ ಉತ್ತಮ ಸಂವಿಧಾನವನ್ನು ದುರುದ್ಧೇಶದಿಂದ ಬದಲಾಯಿಸುವಂತೆ ಪಟ್ಟಭದ್ರ ಹಿತಾಸಕ್ತಿಗಳು ಕೂಗು ಹಾಕುತ್ತಿವೆ. ದೇಶದ ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ಪಟ್ಟಭದ್ರ ಹಿತಾಸಕ್ತಿಗಳ ಸಂಚಿನ ವಿರುದ್ಧ ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇಶದಲ್ಲಿ ಅನೇಕ ಗಂಭೀರ ಸಮಸ್ಯೆಗಳಿವೆ. ಪೌರತ್ವ ಕಾಯ್ದೆ ವಿಚಾರವಾಗಿ ವಿಚಾರವಾಗಿ ಪರ–ವಿರೋಧ ಹೋರಾಟ ನಡೆಯುತ್ತದೆ. ಎಲ್ಲೆಡೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಹೋರಾಟವೇ ಮದ್ದು. ದೇಶದ ಮೂಲ ಪ್ರಜೆಗಳ ಬೇರು ಅಲುಗಾಡುತ್ತಿದೆ. ಪಟ್ಟಭದ್ರರು ಇಲ್ಲಿನ ಮೂಲ ಜನರನ್ನು ಒಕ್ಕಲೆಬ್ಬಿಸುವ ಸಂಚು ಮಾಡುತ್ತಿದ್ದಾರೆ. ಶೋಷಿತ ಸಮುದಾಯಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ಖಂಡಿತ’ ಎಂದು ಆತಂಕ ವ್ಯಕ್ತಪಡಿಸಿದರು.

ಮೌಲ್ಯಯುತ ಶಿಕ್ಷಣ

‘ದೇಶದಲ್ಲಿ ಮೌಲ್ಯಯುತ ಶಿಕ್ಷಣ ಬೇಕಿದೆ. ಮೂಲ ಶಿಕ್ಷಣ ಬದಲಾಗಬೇಕು. ಕೆಳ ಹಂತದಲ್ಲಿಯೇ ಶಿಕ್ಷಣ ಪದ್ಧತಿ ಬದಲಿಸುವ ಕೆಲಸ ಮಾಡಬೇಕು. ಜನರ ಬದುಕಿಗೆ ಅಗತ್ಯವಿರುವ ಶಿಕ್ಷಣ ಕೊಡಬೇಕು. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮನುಷ್ಯರೊಳಗಿನ ಸಂಬಂಧ ಮತ್ತು ಸಾಮರಸ್ಯ ಕಣ್ಮರೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯಕ್ಕೆ ವಿರೋಧವಾಗಿ ರಾಜ್ಯಗಳು, ದೇಶಕ್ಕೆ ವಿರೋಧವಾಗಿ ದೇಶಗಳು ಪರಸ್ಪರ ದ್ವೇಷಾಸೂಹೆ ಕಾರಿಕೊಳ್ಳುತ್ತಿವೆ. ಇಡೀ ಪ್ರಪಂಚಕ್ಕೆ ದೊಡ್ಡ ಗಂಢಾಂತರ ಕಾದಿದೆ. ಜನರಲ್ಲಿ ಮಾನವೀಯ ಮೌಲ್ಯಗಳು ಬೆಳೆಯಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿಯ ತತ್ವಸಿದ್ಧಾಂತ ಮೈಗೂಡಿಸಿಕೊಳ್ಳಬೇಕು’ ಎಂದರು.

ಬೆಂಗಳೂರಿನ ರಂಗದರ್ಶನ ತಂಡದ ಕಲಾವಿದರು ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶಿಸಿದರು. ಪತ್ರಕರ್ತ ಜೆ.ಸತ್ಯರಾಜ್, ಕೋಚಿಮುಲ್‌ ವಿಸ್ತರಣಾಧಿಕಾರಿ ಅಮರೇಶ್‌, ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು