ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ 20 ಸ್ಥಾನ ಗೆಲ್ಲುವ ಸೂಚನೆ: ಬೈರತಿ ಸುರೇಶ್‌

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಿತ್ತೊಗೆಯಲು ಸಾಧ್ಯವಿಲ್ಲ
Published 18 ಏಪ್ರಿಲ್ 2024, 15:00 IST
Last Updated 18 ಏಪ್ರಿಲ್ 2024, 15:00 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳು ಬಂದರೆ ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರವನ್ನು ಕಿತ್ತೊಗೆಯುವುದಾಗಿ ಬಿಜೆಪಿ, ಜೆಡಿಎಸ್‍ನವರು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೆಲ್ಲಾ ಸಾಧ್ಯವಿಲ್ಲ. ನಾವು ಅಧಿಕ ಸ್ಥಾನ ಗೆಲ್ಲುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಹಾಲಿಸ್ಟರ್ ಸಮುದಾಯ ಭವನದಲ್ಲಿ ಕುರುಬ ಸಮುದಾಯದವರ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನಸಭೆ ಚುನಾವಣೆ ಬೇರೆ, ಲೋಕಸಭೆ ಚುನಾವಣೆ ಬೇರೆ. ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಬೇರೆ, ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರ ಬೇರೆ. ಅದು ಅವರಿಗೆ ಅರ್ಥವಾಗುತ್ತಿಲ್ಲ, ಪ್ರಜಾಪ್ರಭುತ್ವದಲ್ಲಿ ಬಿಜೆಪಿಯವರಿಗೆ ನಂಬಿಕೆಯೂ ಇಲ್ಲ’ ಎಂದು ಕಿಡಿಕಾರಿದರು.

‘ನಮ್ಮ ನಾಯಕರಾದ ರಾಹುಲ್ ಗಾಂಧಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾದಿಯಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಇದ್ದಾರೆ’ ಎಂದರು.

‘ಸೋಲಿನ ಭೀತಿಯಿಂದಾಗಿ ನಾವೇನೂ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿಲ್ಲ. ಬಿ.ಎಸ್.ಯಡಿಯೂರಪ್ಪ ಮಗನಿಗೆ ಟಿಕೆಟ್ ನೀಡಿಲ್ಲವೇ, ಜಿ.ಎಂ.ಸಿದ್ದೇಶ್ ಅವರ ಕುಟುಂಬದಲ್ಲಿ ಟಿಕೆಟ್ ನೀಡಿಲ್ಲವೇ. ಬಿಜೆಪಿಯವರು ಬಹಳಷ್ಟು ಸಂಬಂಧಿಕರಿಗೆ ಟಿಕೆಟ್ ನೀಡಿದ್ದಾರೆ. ಜಿಲ್ಲೆಗಳಲ್ಲಿ ಜನಾಭಿಪ್ರಾಯ ಪಡೆದು ನಮ್ಮಲ್ಲಿ ಟಿಕೆಟ್ ನೀಡಲಾಗಿದೆಯೇ ಹೊರತು ಯಾರ ಪಾತ್ರವೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾರ್ಮಿಕ ಸಚಿವರ ಹೇಳಿಕೆ ವೈಯಕ್ತಿಕವಾಗಿದ್ದು, ಚುನಾವಣೆಯನ್ನು ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಜನರಿಗೆ ಒಳ್ಳೆಯ ಕೆಲಸ ಮಾಡುವ ಉದ್ದೇಶದಿಂದ ನಡೆಸುತ್ತಿದ್ದೇವೆ. ಮಾಲೂರಿನಲ್ಲಿ ನಡೆದ ಪ್ರಜಾಧ್ವನಿ 2 ಯಾತ್ರೆಗೆ 50 ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದರು’ ಎಂದರು.

‘ಶ್ರೀರಾಮನವಮಿ ಹಬ್ಬದ ದಿನದಂದು ಇಷ್ಟೊಂದು ಜನ ಬಂದಿದ್ದು, ಹೆಗ್ಗಳಿಕೆ. ಮಂಡ್ಯ, ಮಾಲೂರು ಸಮಾವೇಶಗಳಲ್ಲಿನ ಜನರನ್ನು ನೋಡಿದರೆ ನಾವು ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಸೂಚನೆ ಇದೆ’ ಎಂದು ಹೇಳಿದರು.

‘ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ರಾಹುಲ್‍ ಗಾಂಧಿ ಸಮಾವೇಶದಲ್ಲಿ ಬಾಯ್ತಪ್ಪಿನಿಂದ ಮಾತನಾಡಿದ್ದಾರೆ. ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಈ ರೀತಿ ಅನೇಕ ಬಾರಿ ಮಾತನಾಡಿದ್ದಾರೆ, ಬಾಯ್ತಪ್ಪಿನಿಂದ ಮಾತನಾಡುವುದು ಸಹಜ’ ಎಂದರು.

‘ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈ ಬಲಪಡಿಸಲು ಕುರುಬ ಸಮುದಾಯದವರು ಮುಂದಾಗಿದ್ದಾರೆ. ಹಿಂದುಳಿದವರು, ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳ ಅನೇಕ ಸಮುದಾಯಗಳು ಬೆಂಬಲ ವ್ಯಕ್ತಪಡಿಸಿದ್ದು, ಜಾತಿವಾರು ಸಮಾವೇಶಗಳನ್ನು ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಪರಿಶಿಷ್ಟ ಜಾತಿ ಬಲಗೈ ಸಮುದಾಯದವರು ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದಾರೆ. ದೇಶ, ಸಂವಿಧಾನ ಉಳಿಯಬೇಕೆಂದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕೆಂದು ನಿರ್ಧರಿಸಿದ್ದಾರೆ. ಪ್ರತಿಷ್ಠೆಯಾಗಿ ಚುನಾವಣೆಯನ್ನು ತೆಗೆದುಕೊಂಡಿದ್ದು, ತುಳಿತಕ್ಕೆ ಒಳಗಾಗಿರುವ ಸಮುದಾಯಗಳು ನಮ್ಮ ಬೆಂಬಲಕ್ಕೆ ಇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT