ಕಾಂತರಾಜ್
ಬಂಗಾರಪೇಟೆ: ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಣೆ ಮಾಡದ ಪುರಸಭೆ ಪಟ್ಟಣದ ಸೌಂದರ್ಯ ಹೆಚ್ಚಿಸುವ ಪ್ರಯತ್ನ ನಡೆಸಿದೆ.
ಪಟ್ಟಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಅಲ್ಲದೆ ಇಲ್ಲಿಗೆ ವಲಸೆ ಬರುವವರ ಸಂಖ್ಯೆ ನಿತ್ಯ ಏರುತ್ತಲೇ ಇದೆ. ಪಟ್ಟಣದ ಮಾರುಕಟ್ಟೆ, ಬಜಾರು ರಸ್ತೆ, ಮುನ್ಸಿಪಲ್ ಬಸ್ನಿಲ್ದಾಣ ಸೇರಿದಂತೆ ಜನ ಸಂದಣಿ ಇರುವ ಸ್ಥಳಗಳಲ್ಲಿ ಶೌಚಾಲಯ ಇಲ್ಲದೆ ಮಲ ಮೂತ್ರ ವಿಸರ್ಜಿಸಲು ಜನರು ಪರದಾಡುವತಾಗಿದೆ.
ಪಟ್ಟಣದ ಮುನ್ಸಿಪಲ್ ಬಸ್ ನಿಲ್ದಾಣದ ಪಕ್ಕ ಮುಜರಾಯಿ ಇಲಾಖೆಗೆ ಸೇರಿದ ಐದಾರು ಗುಂಟೆ ಜಾಗ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಚಲಿಸುವ ಮಾರ್ಗದಲ್ಲಿನ ರೈಲ್ವೆ ಟಿಕೆಟ್ ಕೌಂಟರ್ ಹಿಂಭಾಗದ ಜಾಗ, ಕಾರಹಳ್ಳಿ ವೃತ್ತದಿಂದ ಕೆರೆಕೋಡಿಗೆ ತೆರಳುವ ಕೆರೆಕಟ್ಟೆ ಜಾಗ ಸೇರಿದಂತೆ ಹಲ ಜಾಗಗಳು ಮಲ ಮೂತ್ರ ವಿಸರ್ಜಿಸುವ ಬಯಲು ಶೌಚಾಲಯಗಳಾಗಿ ಮಾರ್ಪಟ್ಟಿವೆ.
ಪುರಸಭೆ ಕೆಲ ವರ್ಷದ ಹಿಂದೆ ಪಟ್ಟಣದ ಕೆರೆಕೋಡಿಗೆ ತೆರಳುವ ಕೆರೆಕಟ್ಟೆ ಬಳಿ, ತಾಲ್ಲೂಕು ಪಂಚಾಯಿತಿ ಎದುರು, ಬಾಲಕೀಯರ ಕಾಲೇಜು ಬಳಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿತ್ತು. ಆದರೆ ಆ ಪೈಕಿ ಕೆಲ ಕಟ್ಟಡಗಳನ್ನು ಉದ್ಘಾಟನೆಯೇ ಮಾಡಿಲ್ಲ. ಇನ್ನೂ ಕೆಲವನ್ನು ಒಂದೆರಡು ವರ್ಷ ಮಾತ್ರ ನಿರ್ವಹಣೆ ಮಾಡಲಾಯಿತು. ಬಳಿಕ ನಿರ್ವಹಣೆ ಇಲ್ಲದೆ ಬಾಗಿಲು ಮುಚ್ಚಲಾಗಿದೆ. ಸದರಿ ಶೌಚಾಲಯಗಳನ್ನು ಮುಚ್ಚಿ ಐದಾರು ವರ್ಷಗಳಾಗಿದೆ. ಹಲ ನೆಪಗಳನ್ನು ಒಡ್ಡಿ ನಿರ್ವಹಣೆಗೆ ಮುಂದಾಗುತ್ತಿಲ್ಲ ಎನ್ನುವುದು ನಾಗರಿಕರ ದೂರು.
ಕಾರಹಳ್ಳಿ ವೃತ್ತದ ಬಳಿ ಇರುವ ಪುರಸಭೆ ಶೌಚಾಲಯವು ಖಾಸಗಿ ವ್ಯಕ್ತಿಯೊಬ್ಬರ ಬಡಗಿ ಕೆಲಸದ ವಸ್ತುಗಳ ದಾಸ್ತಾನು ಆಗಿ ಬಳಕೆ ಆಗುತ್ತಿದೆ. ತಾಲ್ಲೂಕು ಪಂಚಾಯಿತಿ ಎದುರಿನ ಶೌಚಾಲಯ ಕಟ್ಟಡ ಸಂಪೂರ್ಣ ಮುಚ್ಚಲಾಗಿದೆ. ಬಾಲಕಿಯರ ಕಾಲೇಜು ಬಳಿ ಇದ್ದ ಶೌಚಾಲಯದ ಬಾಗಿಲನ್ನು ಕಾಲೇಜು ಕಡೆ ತಿರುಗಿಸಿದ್ದು, ಅವರಿಗೆ ಮಾತ್ರ ಬಳಕೆ ಆಗುತ್ತಿದೆ.
ಪ್ರಸ್ತುತ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಪೇ ಅಂಡ್ ಯೂಸ್ ಶೌಚಾಲಯವಿದೆ. ಅದು ಬಿಟ್ಟರೆ ಬಜಾರು ರಸ್ತೆ ಹಾಗೂ ಎಲೆಮಲ್ಲಪ್ಪ ರಸ್ತೆ ನಡುವೆ ವರ್ತಕರ ಸಂಘ ಪೇ ಅಂಡ್ ಯೂಸ್ ಶೌಚಾಲಯ ನಿರ್ಮಿಸಿದೆ. ಅಲ್ಲಿ ಪುರಸಭೆ ಸಿಬ್ಬಂದಿಯೊಬ್ಬರು ಸ್ವಚ್ಛ ಮಾಡುತ್ತಿದ್ದಾರೆ. ಈ ಎರಡು ಬಿಟ್ಟರೆ ಬೇರೆಲ್ಲೂ ಇಲ್ಲ. ಪಟ್ಟಣದಲ್ಲಿ ವ್ಯಾಪಾರಿಗಳು ಹಾಗೂ ಅಲ್ಲಿಗೆ ಬರುವ ಗ್ರಾಹಕರು ಮೂತ್ರ ವಿಸರ್ಜಿಸಲು ಜನ ಸಂದಣಿ ಇಲ್ಲದಿರುವ ಅಕ್ಕಪಕ್ಕದ ಜಾಗಗಳನ್ನು ಹುಡುಕುವಂತಾಗಿದೆ. ಇದರಿಂದ ಬಜಾರಿನ ಅಕ್ಕಪಕ್ಕದ ನಿವಾಸಿಗಳು ದುರ್ವಾಸನೆಯಲ್ಲಿ ಇರುವ ಅನಿವಾರ್ಯ ಇದೆ. ಅದನ್ನು ತಡೆಯುವ ಸಲುವಾಗಿಕೆಲವರು ಎರಡ್ಮೂರು ಕಡೆ ಕಬ್ಬಿಣದ ಗೇಟ್ಗಳನ್ನು ಅಳವಡಿಸಿದ್ದಾರೆ.
ಪುರಸಭೆ ಬಸ್ ನಿಲ್ದಾಣ, ಬಜಾರು ರಸ್ತೆ, ಮಾರುಕಟ್ಟೆ ಸ್ಥಳಗಳಲ್ಲಿ ಪುರಸಭೆ ಶೌಚಾಲಯ ತೆರೆದು ನಿರ್ವಹಣೆ ಮಾಡಬೇಕು. ಪೇ ಅಂಡ್ ಯೂಸ್ ಶೌಚಾಲಯ ಆದರೂ ಪರವಾಗಿಲ್ಲ-ರತ್ನಮ್ಮ, ಶಾಂತಿನಗರ, ಬಂಗಾರಪೇಟೆ.
ಬಂಗಾರಪೇಟೆ ಪ್ರಮುಖ ಸ್ಥಳಗಳಲ್ಲಿ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸಿ ದುರ್ವಾಸನೆ ಬೀರುತ್ತಿದೆ. ಶೌಚಾಲಯ ತೆರೆದರೆ ಸ್ವಚ್ಛತೆ ನಿರ್ವಹಣೆ ಸುಲುಭ- ಚೈತ್ರ, ಬಂಗಾರಪೇಟೆ.
ಬಂಗಾರಪೇಟೆಯನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣವಾಗಿ ಮಾಡಲು ಶಾಸಕರು ಉದ್ದೇಶಿಸಿದ್ದಾರೆ. ಆದರೆ ಕನಿಷ್ಟ ಶೌಚಾಲಯ ಇಲ್ಲದೆ ಅದು ಹೇಗೆ ಸಾಧ್ಯ?- ಮುತ್ತುರೆಡ್ಡಿ, ಶಿಕ್ಷಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.