ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ವಸತಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ

ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಕ್ಕೆ ಅತಿಥಿ ಶಿಕ್ಷಕರೇ ಆಸರೆ
ಮಂಜುನಾಥ ಎಸ್
Published : 2 ಸೆಪ್ಟೆಂಬರ್ 2024, 6:21 IST
Last Updated : 2 ಸೆಪ್ಟೆಂಬರ್ 2024, 6:21 IST
ಫಾಲೋ ಮಾಡಿ
Comments

ಬಂಗಾರಪೇಟೆ: ತಾಲ್ಲೂಕಿನ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ಸರ್ಕಾರವು ಕಾಯಂ ಶಿಕ್ಷಕರನ್ನು ನೇಮಕ ಮಾಡದ ಕಾರಣದಿಂದ ಆ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಆಸರೆ ಎಂಬ ಪರಿಸ್ಥಿತಿ ಉದ್ಭವಿಸಿದೆ. 

ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಯಳೇಸಂದ್ರ ಗ್ರಾಮದ ಮೊರಾರ್ಜಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ದೊಡ್ಡ ಪೊನ್ನಾಂಡಹಳ್ಳಿ ಮೊರಾರ್ಜಿ ವಸತಿ ಶಾಲೆಗಳನ್ನು ಶಾಸಕರ ಅನುದಾನ ಸೇರಿದಂತೆ ಇನ್ನಿತರ ಯೋಜನೆಯಡಿ ಲಕ್ಷಾಂತರ ವೆಚ್ಚ ಮಾಡಿ ಸುಂದರ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಶಾಲೆಗಳಲ್ಲಿ ಕೊಠಡಿಗಳ ಸಂಖ್ಯೆ, ಸಭಾಂಗಣ, ಆಟದ ಮೈದಾನ, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲ. ಇದರಿಂದಾಗಿ ಈ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತಿವೆ. ಆದರೆ, ಈ ಮೂರು ಶಾಲೆಗಳು ಕಾಯಂ ಶಿಕ್ಷಕರ ಕೊರತೆ ಎದುರಿಸುತ್ತಿವೆ. 

ಯಳೇಸಂದ್ರ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್ ಶಿಕ್ಷಕರು ಹಾಗೂ ಪ್ರಥಮ ದರ್ಜೆಯ ಸಹಾಯಕ ಹುದ್ದೆಗೆ ಮಾತ್ರವೇ ಕಾಯಂ ನೌಕರರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂಶುಪಾಲ, ವಿಜ್ಞಾನ, ಕಂಪ್ಯೂಟರ್, ದೈಹಿಕ ಶಿಕ್ಷಣಕ್ಕೆ ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಇನ್ನು  ದೊಡ್ಡ ಪೊನ್ನಾಂಡಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಪರಿಸ್ಥಿತಿ ಇದಕ್ಕಿಂತ ಏನೂ ಭಿನ್ನವಿಲ್ಲ. ಇಲ್ಲಿಯೂ ಕಂಪ್ಯೂಟರ್, ಗಣಿತ, ದೈಹಿಕ ಶಿಕ್ಷಣ ಸೇರಿದಂತೆ ಮೂವರು ಮಾತ್ರವೇ ಕಾಯಂ ಶಿಕ್ಷಕರಿದ್ದಾರೆ. ಉಳಿದ ವಿಷಯಗಳಿಗೆ ಮೂರು ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ. 

ಈ ಶಾಲೆಗಳಿಗೆ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಯು ಕಾಯಂ ಶಿಕ್ಷಕರನ್ನು ನಿಯುಕ್ತಿಗೊಳಿಸಿಲ್ಲ ಎಂಬ ಆರೋಪವಿದೆ. ಅತಿಥಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಹೇಗೆ? ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶೀಘ್ರವೇ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂಬುದು ಪೋಷಕರ ಆಗ್ರಹವಾಗಿದೆ. 

ವಾರ್ಡನ್‌ ಹುದ್ದೆಗೆ ಪ್ರಭಾರ ನೀಡಲಾಗಿದೆ. ಮೂರು ವಸತಿ ಶಾಲೆಯಲ್ಲಿ ವಾರ್ಡನ್‌ ಕೆಲಸಕ್ಕೆ ಇತರೆ ವಿಷಯ ಶಿಕ್ಷಕರನ್ನು ನಿಯೋಜಿಸಿರುವ ಕಾರಣ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ವಾರ್ಡನ್‌ನಂತಹ ಬಹಳಷ್ಟು ಜವಾಬ್ದಾರಿವುಳ್ಳ ಹುದ್ದೆಗೆ ಸರ್ಕಾರ ಕಾಯಂ ಸಿಬ್ಬಂದಿಯನ್ನು ನಿಯುಕ್ತಿಗೊಳಿಸದಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ಈ ಮೂರು ಶಾಲೆಗಳಲ್ಲಿ ಗ್ರಾಮೀಣ ಭಾಗದ ರೈತರು, ಬಡವರು, ದಲಿತರು, ಹಿಂದುಳಿದ ಮತ್ತು ಕೂಲಿ ಕಾರ್ಮಿಕರ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ ಒಟ್ಟಾರೆ 750 ವಿದ್ಯಾರ್ಥಿಗಳು ಓದುತ್ತಿದ್ದು, ಕಾಯಂ ಶಿಕ್ಷಕರಿಲ್ಲದೆ ಅವರಿಗೆ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಹೇಗೆ. ಕಾಯಂ ಶಿಕ್ಷಕರನ್ನು ನಿಯೋಜಿಸದಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಕೈಗನ್ನಡಿ ಎಂಬುದು ಪೋಷಕರ ವಾದ. 

ವಸತಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಮುಂದಾದರೆ ವಿದ್ಯಾರ್ಥಿಗಳಿಗೆ ಅನುಕೂಲಕರ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು

-ಮುರಳಿ, ಷೋಷಕ ಸಾಕರಸನಹಳ್ಳಿ

ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಎಲ್ಲಾ ವಿಷಯಗಳಿಗೆ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕಿದೆ.

-ತಳೂರು ಮುರಳಿ 

ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಮೂಲಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ಆದರೆ ಮಾನವ ಸಂಪನ್ಮೂಲ ನೀಡದೆ ಇರುವುದು ಬೇಸರದ ಸಂಗತಿ

-ಮುನಿಸ್ವಾಮಿ, ಪಲವತಿಮ್ಮನಹಳ್ಳಿ

ಅತಿ ಶೀಘ್ರದಲ್ಲೇ ಕಾಯಂ ಶಿಕ್ಷಕರನ್ನು ನಿಯೋಜಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.  -ಅಂಜಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ 

ಕಾಯಂ ಶಿಕ್ಷಕರಿಲ್ಲದ ಕಾರಣ ಅತಿಥಿ ಶಿಕ್ಷಕರನ್ನು ನೇಮಿಸುತ್ತಾರೆ. ಅವರು ಒಂದು ವರ್ಷ ಬಂದರೆ ಮತ್ತೊಂದು ವರ್ಷಕ್ಕೆ ಮತ್ತೊಬ್ಬರು ಬರುತ್ತಾರೆ. ಉತ್ತಮ ರೀತಿಯಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ

-ಸ್ವಪ್ನ, ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT