ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕರಣ ವ್ಯವಸ್ಥೆ ಬಲಗೊಳಿಸಲು ಬಿಜೆಪಿ ವಿಫಲ

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುದರ್ಶನ್‌ ಟೀಕೆ
Last Updated 29 ಜನವರಿ 2022, 13:17 IST
ಅಕ್ಷರ ಗಾತ್ರ

ಕೋಲಾರ: ‘ರಾಮಕೃಷ್ಣ ಹೆಗಡೆ, ನಸೀರ್ ಸಾಬ್ ಅವರ ದೂರದೃಷ್ಟಿ ಹಾಗೂ ರಾಜೀವ್ ಗಾಂಧಿ ಪಿ.ವಿ.ನರಸಿಂಹರಾವ್‌ರ ಆಶಯದಿಂದ ಬಂದ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಆರ್‌.ಸುದರ್ಶನ್‌ ಟೀಕಿಸಿದರು.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಾಲ್ಲೂಕಿನ ಉರಿಗಿಲಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛ ಸಂಕಿರಣ ಮತ್ತು ನೂತನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಸರ್ಕಾರಗಳನ್ನು ಬಲಗೊಳಿಸುವ ಅಗತ್ಯವಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಗ್ರಾ.ಪಂಗಳನ್ನು ಬಲಪಡಿಸದೆ ಫಲಾಯನ ಮಾಡಿದೆ’ ಎಂದು ಕುಟುಕಿದರು.

‘ದೇಶದಲ್ಲೇ ಮೊದಲ ಬಾರಿಗೆ ರಾಮಕೃಷ್ಣ ಹೆಗಡೆ, ನಸೀರ್‌ ಸಾಬ್‌ರ ದೂರದೃಷ್ಟಿಯಿಂದ ವಿಕೇಂದ್ರೀಕರಣ ವ್ಯವಸ್ಥೆಯಡಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಬಲಗೊಳಿಸುವ ಪ್ರಯತ್ನ ನಡೆಯಿತು. ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೂ ಸಿಕ್ಕಿತು. ನಂತರ ರಾಜೀವ್‌ ಗಾಂಧಿ ಹಾಗೂ ಪಿ.ವಿ.ನರಸಿಂಹರಾವ್‌ ಅವರು ಪ್ರಧಾನಿಯಾದಾಗ ಈ ವ್ಯವಸ್ಥೆಯನ್ನು ಇಡೀ ದೇಶದಲ್ಲೇ ಬಲಗೊಳಿಸಿದರು’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ, ಇಂತಹ ಸಂದರ್ಭದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು. ಎಲ್ಲರೂ ಒಗ್ಗೂಡಿ ಮುಂದೆ ಸಾಗೋಣ, ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಪಕ್ಷ ಇದ್ದರೆ ಮಾತ್ರ ನಾವು. ಅಧಿಕಾರ ಸಿಕ್ಕಾಗ ಪಕ್ಷ ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

‘ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾ.ಪಂ ಕೇಂದ್ರದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮ ವಹಿಸಿದ್ದೇವೆ. ಉರಿಗಿಲಿಯಲ್ಲಿ ಮೊದಲ ಘಟಕಕ್ಕೆ ಚಾಲನೆ ನೀಡಲಾಗಿದೆ’ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ವಿವರಿಸಿದರು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಪ್ರತಿ ಬಡವರಿಗೂ ಸೂರು ಕಲ್ಪಿಸುವ ಕೆಲಸವನ್ನು ಜಾತಿ, ಧರ್ಮ, ಪಕ್ಷ ನೋಡದೆ ಮಾಡಿದ್ದೇನೆ. ಬಿಜೆಪಿ ಸರ್ಕಾರ ಬಂದ ನಂತರ ಬಡವರಿಗೆ ಒಂದು ಮನೆ ಕೊಟ್ಟಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟದ ಅರಿವಿಲ್ಲ’ ಎಂದು ದೂರಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‍.ಅನಿಲ್‍ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಸುಗಟೂರು ಸೊಸೈಟಿ ಅಧ್ಯಕ್ಷ ಭಾಸ್ಕರ್‌ಬಾಬು, ಉರಿಗಿಲಿ ಗ್ರಾ.ಪಂ ಅಧ್ಯಕ್ಷೆ ರಾಜೇಶ್ವರಿ, ಎಪಿಎಂಸಿ ಮಾಜಿ ಸದಸ್ಯ ಕೆ.ರವಿ, ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎ.ಸಂಪತ್‍ಕುಮಾರ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು, ಪಿಡಿಒ ರಮೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT