ಗುರುವಾರ , ಡಿಸೆಂಬರ್ 3, 2020
23 °C
ಪ್ರಧಾನಿ ಮೋದಿ– ಮುಖ್ಯಮಂತ್ರಿ ಯಡಿಯೂರಪ್ಪ ಪರ ಘೋಷಣೆ

ಬಿಜೆಪಿ ಗೆಲುವು: ಕಾರ್ಯಕರ್ತರ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿದರು.

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಡೂಂಲೈಟ್‌ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಿಹಿ ಹಂಚಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

‘ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಜನರು ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.

‘ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ರಾಜ್ಯವನ್ನು ಲೂಟಿ ಮಾಡಿತ್ತು. ಈ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದರು. ಜನರಿಂದ ತಿರಸ್ಕೃತಗೊಂಡಿದ್ದರೂ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ಈಗ ತಕ್ಕ ಶಾಸ್ತಿಯಾಗಿದೆ’ ಎಂದು ಟೀಕಿಸಿದರು.

‘ಬಿಜೆಪಿ ಬೆಂಬಲಿಸಿದ್ದ ಮುನಿರತ್ನ ಅವರಿಗೆ ಅನರ್ಹರೆಂಬ ಹಣೆಪಟ್ಟಿ ಕಟ್ಟಿದ್ದ ಕಾಂಗ್ರೆಸ್‌ ನಾಯಕರಿಗೆ ಉಪ ಚುನಾವಣಾ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಉಪ ಚುನಾವಣಾ ಫಲಿತಾಂಶದಿಂದ ಭ್ರಮನಿರಸನವಾಗಿದೆ. ಬಿಜೆಪಿ ಸರ್ಕಾರ ಮುಂದಿನ ಎರಡೂವರೆ ವರ್ಷ ಸುಭದ್ರವಾಗಿ ಆಡಳಿತ ನಡೆಸಲು ಮತದಾರರು ಅನುವು ಮಾಡಿಕೊಟ್ಟಿದ್ದಾರೆ’ ಎಂದರು.

ಮುಳುಗುವ ಹಡಗು: ‘ಕುಮಾರಸ್ವಾಮಿಯವರ ಅಧಿಕಾರ ದಾಹವನ್ನು ಇಡೀ ರಾಜ್ಯದ ಜನ ನೋಡಿದ್ದರು. ಅವರು ಕೇವಲ 37 ಶಾಸಕರ ಬಲದಿಂದ ಅಧಿಕಾರ ಹಿಡಿದು ರಾಜ್ಯದಲ್ಲಿ ಆಡಳಿತಾತ್ಮಕ ಅರಾಜಕತೆ ಸೃಷ್ಟಿಸಿದರು. ಜನರಿಂದ ತಿರಸ್ಕೃತಗೊಂಡಿರುವ ಜೆಡಿಎಸ್‌ ಪಕ್ಷ ಮುಳುಗುವ ಹಡಗು’ ಎಂದು ವ್ಯಂಗ್ಯವಾಡಿದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡುತ್ತಾರೆ. ರಾಜ್ಯಕ್ಕೆ ಒಳ್ಳೆಯ ದಿನಗಳು ಆರಂಭವಾಗಿವೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಪದ್ಮಾ, ಕಾರ್ಯದರ್ಶಿ ಮಂಜುಳಾ, ಪಕ್ಷದ ಮುಖಂಡರಾದ ಅನಿಲ್‌ಕುಮಾರ್, ಸುರೇಶ್, ಗೋವಿಂದರಾಜು, ಸತೀಶ್, ರಾಜೇಶ್, ರಾಜರಾಜೇಶ್ವರಿ, ಶೋಭಾರಾಣಿ, ಜಯಮ್ಮ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.