ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಕೈಗೆ ಶಕ್ತಿ ತುಂಬಿ

ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಿವಿಮಾತು
Last Updated 13 ಫೆಬ್ರುವರಿ 2021, 15:06 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಕೆ.ಸಿ ವ್ಯಾಲಿ ನೀರು ಹರಿಯುತ್ತಿರುವುದರಿಂದ ಕೊಳವೆ ಬಾವಿಗಳು ಮರುಪೂರಣಗೊಂಡಿದ್ದು, ಸಣ್ಣ ರೈತರೂ ಬೆಳೆ ಮಾಡುತ್ತಿದ್ದಾರೆ. ಬೆಳೆ ಸಾಲ ನೀಡುವ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಧಿಕಾರಿಗಳು ಬಡವರಿಗಾಗಿ ಬ್ಯಾಂಕ್ ಎಂಬುದನ್ನು ಮರೆಯಬೇಡಿ. ಬಡ ಮಹಿಳೆಯರ ಉಳಿತಾಯದ ಹಣ ಬ್ಯಾಂಕ್‌ಗೆ ಶಕ್ತಿಯಾಗಿದೆ. ಬಡವರ ಸೇವೆ ದೇವರ ಸೇವೆ ಎಂಬ ಅರಿವಿರಲಿ. ಠೇವಣಿ ಸಂಗ್ರಹಕ್ಕೆ ಆದ್ಯತೆ ನೀಡಿ’ ಎಂದು ಕಿವಿಮಾತು ಹೇಳಿದರು.

‘ಎಲ್ಲಾ ಸೌಲಭ್ಯ ನೀಡಿದ್ದೇವೆ. ಮೈಗಳ್ಳರಾಗಾದೆ ಬ್ಯಾಂಕ್‌ನ ಋಣ ತೀರಿಸಲು ಬದ್ಧತೆಯಿಂದ ಕೆಲಸ ಮಾಡಿ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಎಲ್ಲಾ ಸಾಲ ವಸೂಲಿ ಆಗಬೇಕು. ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಕಡಿಮೆಯಾಗದಿದ್ದರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಗೃಹ ಸಾಲದ ಕಂತು ಪಾವತಿಸದವರಿಗೆ ನೋಟಿಸ್ ಜಾರಿ ಮಾಡಿ. ನೋಟಿಸ್‌ಗೂ ಜಗ್ಗದಿದ್ದರೆ ಮನೆಗೆ ಬೀಗ ಜಡಿಯಿರಿ. ವಾಹನ ಸಾಲ ಹಿಂದಿರುಗಿಸದಿದ್ದರೆ ವಾಹನಗಳನ್ನು ವಶಕ್ಕೆ ಪಡೆಯಿತಿ. ಬ್ಯಾಂಕ್‌ ನೀಡಿರುವ ಸಾಲ ಯಾರದ್ದೋ ವೈಯಕ್ತಿಕ ಹಣವಲ್ಲ. ರೈತರು, ಮಹಿಳೆಯರು ಬೆವರು ಸುರಿಸಿ ಸಂಪಾದಿಸಿರುವ ಹಣ’ ಎಂದರು.

ವಹಿವಾಟು ವೃದ್ಧಿ: ‘ಈ ಹಿಂದೆ ₹ 55 ಕೋಟಿ ಇದ್ದ ಬ್ಯಾಂಕ್‌ನ ವಹಿವಾಟು ಇಂದು ₹ 1,200 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ 20ರಷ್ಟು ವಹಿವಾಟು ವೃದ್ಧಿಸಿದೆ. ಇದನ್ನು ₹ 1,500 ಕೋಟಿಗೆ ಹೆಚ್ಚಿಸುವ ಗುರಿಯಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ತಿಳಿಸಿದರು.

‘ಇದು ಬಡವರ ಬ್ಯಾಂಕ್. ಸಾಲ ಪಡೆದ ಬಡವರು ಸಕಾಲದಲ್ಲಿ ಪಾವತಿಸುತ್ತಾರೆ. ಆದರೆ, ಉಳ್ಳವರು ಸಾಲ ಮರು ಪಾವತಿಯಲ್ಲಿ ವಿಫಲರಾಗುತ್ತಿದ್ದಾರೆ. ಅಂತಹವರ ಮನೆ ಮುಂದೆ ಕುಳಿತು ವಸೂಲಿ ಮಾಡಿ. ಮಾ.31ರೊಳಗೆ ಎಲ್ಲಾ ಫ್ಯಾಕ್ಸ್‌ಗಳ ವಹಿವಾಟು ಗಣಕೀರಣಗೊಳ್ಳಬೇಕು. ಮೊಬೈಲ್ ಬ್ಯಾಂಕಿಗ್ ವಾಹನಗಳು ಸಮರ್ಪಕವಾಗಿ ಬಳಕೆಯಾಗಬೇಕು. ಪ್ರತಿ ಗ್ರಾಮಕ್ಕೂ ವಾಹನ ಕಳುಹಿಸಿಕೊಟ್ಟು ರೈತರಿಗೆ ಉಳಿತಾಯ ಖಾತೆಯಿಂದ ಹಣ ಡ್ರಾ ಮತ್ತು ಬಟವಾಡೆಗೆ ಅವಕಾಶ ಕಲ್ಪಿಸಬೇಕು’ ಎಂದು ತಾಕೀತು ಮಾಡಿದರು.

ಗುರಿ ತಲುಪಿಲ್ಲ: ‘ನಿಗದಿತ ಠೇವಣಿ ಸಂಗ್ರಹದ ಪ್ರಗತಿ ಬಗ್ಗೆ ಈಗಾಗಲೇ ಪಟ್ಟಿ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಯಾರೂ ಠೇವಣಿ ಸಂಗ್ರಹದ ಗುರಿ ತಲುಪಿಲ್ಲ. ಠೇವಣಿ ಸಂಗ್ರಹದ ಗುರಿ ಸಾಧಿಸಿ ಗೌರವ ಕಾಪಾಡಿಕೊಳ್ಳಿ’ ಎಂದು ಬ್ಯಾಂಕ್‌ನ ಯೋಜನಾ ವ್ಯವಸ್ಥಾಪಕ ಹುಸೇನ್ ದೊಡ್ಡಮುನಿ ಸಿಬ್ಬಂದಿಗೆ ಸೂಚಿಸಿದರು.

ಬ್ಯಾಂಕ್‌ನ ನಿರ್ದೇಶಕರಾದ ಸೋಮಣ್ಣ, ಎಂ.ಎಲ್.ಅನಿಲ್‌ಕುಮಾರ್, ವೆಂಕಟರೆಡ್ಡಿ, ಕೆ.ವಿ.ದಯಾನಂದ್, ಹನುಮಂತರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಖಲೀಂ ಮುಲ್ಲಾ, ಅರುಣ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT