ಶುಕ್ರವಾರ, ಜನವರಿ 22, 2021
19 °C
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಘುನಾಥ್ ಕಿವಿಮಾತು

ಆರೋಗ್ಯಕರ ಸಮಾಜ ನಿರ್ಮಾಣ ಮಾಡಿ: ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ತಂಬಾಕು ಉತ್ಪನ್ನ ಸೇವನೆ ಚಟ ತ್ಯಜಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಮಾತನಾಡಿದರು.

‘ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಆದ ಕಾರಣ ಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಬಲಿಯಾಗದೆ ಆರೋಗ್ಯಕರ ಜೀವನ ನಡೆಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು. ತಂಬಾಕು ಉತ್ಪನ್ನ ಸೇವನೆ ವ್ಯಸನಿಗಳ ಮನಪರಿವರ್ತನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ತಂಬಾಕು ಸೇವನೆಯು ಜೀವಕ್ಕೆ ಅಪಾಯವೆಂದು ತಿಳಿದಿದ್ದರೂ ಜನ ಅದರ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳ ಸೇವನೆಯಿಂದ 60 ರೀತಿಯ ಮಾರಕ ಕಾಯಿಲೆಗಳು ಮತ್ತು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ. ಆದ ಕಾರಣ ಜನ ಎಚ್ಚೆತ್ತು ತಂಬಾಕು ರಹಿತ ರಾಜ್ಯ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಕೋರಿದರು.

‘ದುಶ್ಚಟಗಳು ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತವೆ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಪ್ರತಿ ವ್ಯಕ್ತಿಯು ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಹಂತ ಹಂತವಾಗಿ ತಂಬಾಕು ಸೇವನೆ ಕಡಿಮೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡಬೇಕು. ಈ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ವಿಶ್ವ ತಂಬಾಕು ರಹಿತ ದಿನ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.

ಆತಂಕಕಾರಿ: ‘ತಂಬಾಕು ಬೆಳೆಯುವ ಮತ್ತು ತಂಬಾಕು ಉತ್ಪನ್ನ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. 18 ವರ್ಷದಿಂದ 25 ವರ್ಷದೊಳಗಿನ ಯುವಕ ಯುವತಿಯರು ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗಿ ತಪ್ಪು ದಾರಿ ಹಿಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಕಳವಳ ವ್ಯಕ್ತಪಡಿಸಿದರು.

‘ಕಠಿಣ ಕಾನೂನು ಜಾರಿಯಾದರೆ ಮಾತ್ರ ತಂಬಾಕು ಉತ್ಪನ್ನ ನಿಯಂತ್ರಿಸಲು ಸಾಧ್ಯ. ಆರೋಗ್ಯದ ದೃಷ್ಟಿಯಿಂದ ಸ್ನೇಹಪೂರ್ವಕವಾಗಿ ತಂಬಾಕು ಸೇವನೆ ವ್ಯಸನ ತ್ಯಜಿಸುವಂತೆ ಅರಿವು ಮೂಡಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಹೊಸಬರು ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಅಪಾಯಕಾರಿ ನಿಕೋಟಿನ್: ‘ತಂಬಾಕು ಉತ್ಪನ್ನಗಳ ಬಳಕೆ ಯೂರೋಪ್ ದೇಶದಿಂದ ಆರಂಭವಾಗಿ, 2ನೇ ಶತಮಾನದಿಂದ ಭಾರತ ದೇಶದಲ್ಲೂ ಬಳಕೆ ಆರಂಭವಾಯಿತು. ತಂಬಾಕು ಉತ್ಪನ್ನಗಳಲ್ಲಿನ ಅಪಾಯಕಾರಿ ನಿಕೋಟಿನ್ ಅಂಶವು ದೇಹದ ರಕ್ತನಾಳದಲ್ಲಿನ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯದ ಜತೆಗೆ ಅಂಗಾಂಗಳಿಗೆ ಅಪಾಯ ಉಂಟು ಮಾಡುತ್ತದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ವಿವರಿಸಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌, ನ್ಯಾಯಾಧೀಶರಾದ ಶಹಮತ್ ಖಮ್ರರೋಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿಗೌಡ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು