ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಬೆಂಗಾವಲಲ್ಲಿ ಬಸ್‌ ಓಡಾಟ

5ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ
Last Updated 10 ಏಪ್ರಿಲ್ 2021, 13:41 IST
ಅಕ್ಷರ ಗಾತ್ರ

ಕೋಲಾರ: ಸಾರಿಗೆ ನೌಕರರ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯ ವಿವಿಧೆಡೆ ಶನಿವಾರ 40 ಬಸ್‌ಗಳು ಪೊಲೀಸ್‌ ಬೆಂಗಾವಲಲ್ಲಿ ಸಂಚರಿಸಿದವು. ಆದರೆ, ಬೆರಳೆಣಿಕೆಯಷ್ಟು ಪ್ರಯಾಣಿಕರು ಬಸ್‌ಗಳಲ್ಲಿ ಪ್ರಯಾಣಿಸಿದರು. ಹಲವು ಮಾರ್ಗಗಳಲ್ಲಿ ಬಸ್‌ಗಳು ಖಾಲಿಯಾಗಿ ಸಂಚರಿಸಿದವು.

ಪ್ರಯಾಣಿಕರು ನಿಲ್ದಾಣಗಳಲ್ಲಿ ಬಸ್‌ಗೆ ಗಂಟೆಗಟ್ಟಲೇ ಕಾಯುತ್ತಾ ನಿಂತಿದ್ದ ದೃಶ್ಯ ಕಂಡುಬಂತು. ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆಗಳಿಗೆ ಹೋಗಲು ಪರಿತಪಿಸಿದರು. ರೋಗಿಗಳು ಹೆಚ್ಚಿನ ಹಣ ಕೊಟ್ಟು ಆಟೊಗಳಲ್ಲಿ ಪ್ರಯಾಣ ಮಾಡಿದರು. ಮತ್ತೆ ಕೆಲ ಪ್ರಯಾಣಿಕರು ಖಾಸಗಿ ಬಸ್‌ ಹಾಗೂ ವಾಹನಗಳ ಮೊರೆ ಹೋದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಯಿತು.

ದೂರದ ಊರುಗಳಿಗೆ ಹೊರಟಿದ್ದ ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಗ್ರಾಮೀಣ ಭಾಗದಲ್ಲಿ ಬಸ್‌ ಸೇವೆ ಇಲ್ಲದೆ ರೈತರಿಗೆ ಹೆಚ್ಚಿನ ತೊಂದರೆಯಾಯಿತು. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಖಾಸಗಿ ವಾಹನಗಳ ಮಾಲೀಕರು ಮುಷ್ಕರದ ಲಾಭ ಪಡೆದು ಸಾರ್ವಜನಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದ್ದುದ್ದು ಎಲ್ಲೆಡೆ ಸಾಮಾನ್ಯವಾಗಿತ್ತು.

ಬಸ್‌ ನಿಲ್ದಾಣಗಳು ಮುಷ್ಕರದ ಕಾರಣಕ್ಕೆ ಬಿಕೋ ಎನ್ನುತ್ತಿದ್ದವು. ನಿಲ್ದಾಣದಲ್ಲಿನ ಅಂಗಡಿಗಳ ಮಾಲೀಕರು ವ್ಯಾಪಾರವಿಲ್ಲದೆ ಮಳಿಗೆಯ ಬಾಗಿಲು ಮುಚ್ಚಿ ಮನೆಗೆ ಮರಳಿದರು. ನಿಲ್ದಾಣದಲ್ಲಿನ ಹೋಟೆಲ್‌ಗಳು ಬಂದ್‌ ಆಗಿದ್ದವು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ಜೀವ ಬೆದರಿಕೆ: ಮುಳಬಾಗಿಲು ಬಸ್‌ ನಿಲ್ದಾಣದ ಸಂಚಾರ ನಿಯಂತ್ರಕ ಮಂಜುನಾಥ್‌ ಅವರು ಮುಳಬಾಗಿಲು ಘಟಕ ವ್ಯವಸ್ಥಾಪಕರ ಮೇಲೆ ಮಧ್ಯಾಹ್ನ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಘಟಕ ವ್ಯವಸ್ಥಾಪಕರು ಮಂಜುನಾಥ್‌ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳು ಮಂಜುನಾಥ್‌ ಅವರನ್ನು ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಸಂಸ್ಥೆಯ ಅಧಿಕಾರಿಗಳ ಷೋಕಾಸ್‌ ನೋಟಿಸ್‌ಗೆ ಬೆದರಿರುವ ತರಬೇತಿ ಹಂತದ 18 ಮಂದಿ ಚಾಲಕರು ಹಾಗೂ ನಿರ್ವಾಹಕರು ಸ್ವಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾದರು. ಮತ್ತೊಂದೆಡೆ 27 ಮಂದಿ ಕಾಯಂ ನೌಕರರು ಸಹ ಕೆಲಸಕ್ಕೆ ಹಾಜರಾದರು. ನೋಟಿಸ್‌ ಜಾರಿ ನಂತರವೂ ಕರ್ತವ್ಯಕ್ಕೆ ಬಾರದ 5 ನೌಕರರನ್ನು ಮಂಗಳೂರು ವಿಭಾಗಕ್ಕೆ ವರ್ಗಾವಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT