ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ನಾಗರಾಜ್‌ ಕುತಂತ್ರ ಮನಸ್ಸಿನ ವ್ಯಕ್ತಿ: ಟೀಕೆ

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ನಡುವೆ ವಾಕ್ಸಮರ
Last Updated 9 ಏಪ್ರಿಲ್ 2021, 16:17 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹಾಗೂ ಉಪನ್ಯಾಸಕ ಜೆ.ಜಿ.ನಾಗರಾಜ್ ಹತಾಶರಾಗಿ ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪರಿಷತ್ತಿನ ಹಾಲಿ ಅಧ್ಯಕ್ಷ ಹಾಗೂ ಅಭ್ಯರ್ಥಿ ನಾಗಾನಂದ ಕೆಂಪರಾಜ್‌ ತಿರುಗೇಟು ನೀಡಿದ್ದಾರೆ.

ನಾಗರಾಜ್ ಕನ್ನಡಕ್ಕೆ ಕಳಂಕಿತರು. ಅವರು ನಿಜವಾಗಿಯೂ ಕನ್ನಡ ಕಟ್ಟುವವರಾಗಿದ್ದರೆ ನಾನು ಅವರ ಅವಧಿಯಲ್ಲಿ ಸಹಕಾರ ನೀಡಿದಂತೆ ನನ್ನ ಅವಧಿಯಲ್ಲಿ ಸಹಕಾರ ನೀಡಬೇಕಿತ್ತು. ಹಿಟ್ಲರ್‌ನಂತೆ ವರ್ತಿಸುವ ಅವರೇ ನಿಜವಾದ ಸರ್ವಾಧಿಕಾರಿ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ನಡೆದ ಬಂಗಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಗರಾಜ್ ತಮ್ಮನೇ ಸಮ್ಮೇಳನ ಅಧ್ಯಕ್ಷರಾಗಿ ಮಾಡಬೇಕೆಂದು ಒತ್ತಾಯಿಸಿದ್ದರು. ಪರಿಷತ್ ವತಿಯಿಂದ ನೀರಾವರಿ ಹೋರಾಟ ಮಾಡದಂತೆ ತಡೆಯಲು ಯತ್ನಿಸಿದರು. ಮುಳಬಾಗಿಲು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯದಂತೆ ಹುನ್ನಾರ ನಡೆಸಿದರು ಎಂದು ಆರೋಪಿಸಿದ್ದಾರೆ.

ಸಾಹಿತ್ಯ ಸಮ್ಮೇಳನಗಳಿಗೆ ಸಾವಿರಾರು ಕನ್ನಡ ಮನಸ್ಸುಗಳನ್ನು ಬರುವಂತೆ ಮಾಡಿದ್ದೇವೆಯೇ ಹೊರತು ದಿಗ್ಭಂದನ ವಿಧಿಸಿಲ್ಲ. ತಾವು ಈ ಹಿಂದೆ ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ತಿರಸ್ಕರಿಸುವ ಮೂಲಕ ತಾಯಿ ಭುವನೇಶ್ವರಿಗೆ ಅವಮಾನ ಮಾಡಿದ್ದೀರಿ. ತಮ್ಮ ಅವಧಿಯಲ್ಲಿ ಸಮ್ಮೆಳನಕ್ಕೆ ಎಷ್ಟು ಮಂದಿ ಬರುತ್ತಿದ್ದರು? ಎಂತಹ ಊಟ ಹಾಕಿಸಿದ್ದೀರಿ ಎಂಬುದು ಜಿಲ್ಲೆಯ ಕನ್ನಡಿಗರಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ.

ಉಪನ್ಯಾಸಕರಾಗಿ ನನ್ನನ್ನು ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿರುವ ನಾಗರಾಜ್‌ ಕುತಂತ್ರ ಮನಸ್ಸಿನ ವ್ಯಕ್ತಿ ಮತ್ತು ಮಾನಸಿಕ ಅಸ್ವಸ್ಥ. ಅವರು ಮೊದಲು ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದನ್ನು ಕಲಿಯಲಿ. ಸದಾ ರಾಜಕೀಯ ಚಟುವಟಿಕೆಗಳು, ಮೋಸ, ಕುತಂತ್ರವೇ ಅವರ ದಿನಚರಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಜಮೀನು: ನನ್ನ ಅವಧಿಯಲ್ಲಿ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮದ ಸರ್ವೆ ನಂಬರ್‌ 42ರಲ್ಲಿ ಪರಿಷತ್ತಿಗೆ 1 ಎಕರೆ 8 ಗುಂಟೆ ಜಮೀನು ಮಂಜೂರು ಮಾಡಿಸಿದ್ದೇನೆ. ಆದರೆ, ನಾಗರಾಜ್‌ ತಮ್ಮ ಅಧಿಕಾರಾವಧಿಯಲ್ಲಿ ಪರಿಷತ್ತಿಗೆ ನಿವೇಶನ ಮಂಜೂರು ಮಾಡಿಸಿರುವುದಾಗಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ನಿವೇಶನ ಮಂಜೂರಾತಿ ಸಂಬಂಧ ಅವರ ಬಳಿ ದಾಖಲೆಪತ್ರವಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಪಡೆಯುತ್ತಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಪ್ರಾಥಮಿಕ ಜ್ಞಾನವಿಲ್ಲದ ನಾಗರಾಜ್ ಸುಳ್ಳಿನ ಕಂತೆ ಕಟ್ಟಿದ್ದಾರೆ. ಉಪನ್ಯಾಸಕರಾಗಿ ಮಾನಸಿಕ ರೋಗಿಯಂತೆ ಮಾತನಾಡುವುದು ಅವರಿಗೆ ಶೋಭೆಯಲ್ಲ. ದ್ವೇಷ ಬದಿಗೊತ್ತಿ ಶುದ್ಧ ಹೃದಯದಿಂದ ಕನ್ನಡ ಸೇವೆ ಮಾಡುವವರನ್ನು ಬೆಂಬಲಿಸಿ ಕನ್ನಡ ತಾಯಿಯ ಋಣ ತೀರಿಸಲಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT