ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳು: ಜಿಲ್ಲಾಧಿಕಾರಿ ಸೆಲ್ವಮಣಿ

Last Updated 8 ಡಿಸೆಂಬರ್ 2021, 13:14 IST
ಅಕ್ಷರ ಗಾತ್ರ

ಕೋಲಾರ: ‘ಬಾಲ್ಯವಿವಾಹ ತಡೆಗೆ ಮನೆಯಿಂದಲೇ ಪ್ರಯತ್ನ ಆರಂಭವಾಗಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಿವಿಮಾತು ಹೇಳಿದರು.

ಇಲ್ಲಿ ಬುಧವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬಾಲ್ಯವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ನಿರ್ಣಾಯಕ. ಸಮಾಜದಲ್ಲಿ ಬಾಲ್ಯವಿವಾಹ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಾಲ್ಯವಿವಾಹ ತಡೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ದೇಶದಲ್ಲಿ ಇಂದಿಗೂ ಬಾಲ್ಯವಿವಾಹ ಪದ್ಧತಿ ಆಚರಣೆಯಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬ ಪರಿಕಲ್ಪನೆ ಪೋಷಕರಿಗೆ ಇಲ್ಲವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ ಪ್ರತಿ ಜಾತಿ ಧರ್ಮಕ್ಕೆ ಅನ್ವಯಿಸುತ್ತದೆ. ಬಾಲ್ಯವಿವಾಹ ನಿಯಂತ್ರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಕರ್ತವ್ಯ’ ಎಂದು ತಿಳಿಸಿದರು.

‘ಮದುವೆ ಆಗುವ ಯುವತಿಗೆ 18 ವರ್ಷ ಮತ್ತು ಯುವಕನಿಗೆ 21 ವರ್ಷ ಪೂರ್ಣಗೊಂಡಿರಬೇಕು. ಬಾಲ್ಯವಿವಾಹವು ಸಾಮಾಜಿಕವಾಗಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯಾದರೆ ಹೆರಿಗೆ ಸಂದರ್ಭದಲ್ಲಿ ಪ್ರಾಣ ಹಾನಿ, ಮಗುವಿಗೆ ಅಂಗವಿಕಲತೆ, ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ’ ಎಂದರು.

‘ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಬಾಲ್ಯವಿವಾಹ ತಡೆಗೆ ಸಭೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಬಾಲ್ಯವಿವಾಹ ನಡೆಯುವುದು ಅಕ್ಕಪಕ್ಕ ಮನೆಯವರಿಗೆ ತಿಳಿದಿರುತ್ತದೆ. ಆದರೆ, ಮಾಹಿತಿ ನೀಡಲು ಮುಂದೆ ಬರುತ್ತಿಲ್ಲ. ಬಾಲ್ಯವಿವಾಹ ತಡೆಗೆ ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಾಮಾಜಿಕ ಅಜ್ಞಾನ: ‘ಸಾಮೂಹಿಕ ವಿವಾಹಗಳಲ್ಲಿ ಅನೇಕ ಬಾಲ್ಯವಿವಾಹಗಳು ಕಾನೂನಿನ ಕಣ್ತಪ್ಪಿಸಿ ಆಗುತ್ತಿವೆ. ಪೋಷಕರಿಗೆ ಕಾನೂನಿನ ಅರಿವು ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಸಾಮಾಜಿಕ ಅಜ್ಞಾನದಿಂದ ಬಾಲ್ಯವಿವಾಹದಂತಹ ಅಚಾತುರ್ಯ ನಡೆಯುತ್ತಿವೆ. ಆದ ಕಾರಣ ಪ್ರತಿಯೊಬ್ಬರು ಕನಿಷ್ಠ ಶಿಕ್ಷಣ ಪಡೆಯಲೇಬೇಕು. ಇದು ವಲಸೆ ಕಾರ್ಮಿಕರಿಗೂ ಅನ್ವಯಿಸುತ್ತದೆ’ ಎಂದು ತಿಳಿಸಿದರು.

‘ಅಪೌಷ್ಟಿಕ ಮಕ್ಕಳ ತಾಯಂದಿರನ್ನು ಎನ್‌ಆರ್‌ಸಿ ಕೇಂದ್ರಗಳಿಗೆ ದಾಖಲಿಸಿ ಪೌಷ್ಟಿಕ ಆಹಾರ ಮತ್ತು ಸೂಕ್ತ ಚಿಕಿತ್ಸೆ ನೀಡಿ. ಎನ್‌ಆರ್‌ಸಿ ಕೇಂದ್ರಗಳಲ್ಲಿ ದಾಖಲಾಗುವ ತಾಯಂದಿರಿಗೆ ನರೇಗಾ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗುವುದು’ ಎಂದು ವಿವರಿಸಿದರು.

62 ಬಾಲ್ಯವಿವಾಹ: ‘ಜಿಲ್ಲೆಯಲ್ಲಿ 2021ರ ಏಪ್ರಿಲ್‌ನಿಂದ ಈವರೆಗೆ 62 ಬಾಲ್ಯವಿವಾಹ ಪ್ರಕರಣ ದಾಖಲಾಗಿದ್ದು, ಈ ಪೈಕಿ 8 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 3,542 ಮಂದಿ ಅಪೌಷ್ಟಿಕ ಮಕ್ಕಳಿದ್ದಾರೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಜೀವಂತ ಹೆರಿಗೆಗೆ 3 ಕಂತಿನಲ್ಲಿ ₹ 5 ಸಾವಿರ ಹೆರಿಗೆ ಭತ್ಯೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 52,026 ವಿಧವೆಯರು ನೋಂದಣಿಯಾಗಿದ್ದು, ಮಾಸಾಶನ ನೀಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT