ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಮಾರಾಟ: ತಂದೆ–ಆಶಾ ಕಾರ್ಯಕರ್ತೆಯರ ಬಂಧನ

Last Updated 5 ಅಕ್ಟೋಬರ್ 2021, 14:40 IST
ಅಕ್ಷರ ಗಾತ್ರ

ಕೆಜಿಎಫ್‌: ಮಗು ಮಾರಾಟ ಪ್ರಕರಣ ಸಂಬಂಧ ಮಗುವಿನ ತಂದೆ, ಆಶಾ ಕಾರ್ಯಕರ್ತೆಯರು ಸೇರಿದಂತೆ 4 ಮಂದಿಯನ್ನು ತಾಲ್ಲೂಕಿನ ಬೇತಮಂಗಲ ಪೊಲೀಸರು ಬಂಧಿಸಿದ್ದಾರೆ.

ಮಗುವಿನ ತಂದೆ ಬಾಬು, ಆಶಾ ಕಾರ್ಯಕರ್ತೆಯರಾದ ಸಂಧ್ಯಾರಾಣಿ, ರೂಪಾ ಮತ್ತು ಬೆಂಗಳೂರಿನ ರಾಜಲಕ್ಷ್ಮೀ ಬಂಧಿತರು. ತಾಲ್ಲೂಕಿನ ಪಂಥನಹಳ್ಳಿಯ ಬಾಬು ಮತ್ತು ನೀಲಮ್ಮ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ನೀಲಮ್ಮ ಅವರು ಸೆ.6ರಂದು ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದರು.

ಆರೋಗ್ಯ ವಿಚಾರಿಸುವ ಸೋಗಿನಲ್ಲಿ ನೀಲಮ್ಮರ ಮನೆಗೆ ಬಂದಿದ್ದ ಆಶಾ ಕಾರ್ಯಕರ್ತೆಯರಾದ ಸಂಧ್ಯಾರಾಣಿ ಮತ್ತು ರೂಪಾ ಅವರು ಬಾಬುಗೆ ಹಣದ ಆಮಿಷವೊಡ್ಡಿ ಗಂಡು ಮಗುವನ್ನು ಮಾರಾಟ ಮಾಡುವಂತೆ ಪುಸಲಾಯಿಸಿದ್ದರು. ಬಳಿಕ ರಾಜಲಕ್ಷ್ಮೀ ಎಂಬ ಮಧ್ಯವರ್ತಿ ಮೂಲಕ ಬೆಂಗಳೂರಿನ ದಂಪತಿಯನ್ನು ಸಂಪರ್ಕಿಸಿ ಗಂಡು ಮಗು ಕೊಡಿಸುವುದಾಗಿ ಹೇಳಿ ₹ 1 ಲಕ್ಷ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬು ಹಣದಾಸೆಗೆ ಸಂಧ್ಯಾರಾಣಿ ಮತ್ತು ರೂಪಾ ಅವರಿಂದ ₹ 70 ಸಾವಿರ ಪಡೆದು ಪತ್ನಿಗೆ ತಿಳಿಯದಂತೆ ಗಂಡು ಮಗುವನ್ನು ಅವರಿಗೆ ಕೊಟ್ಟು ಕಳುಹಿಸಿದ್ದ. ಆಶಾ ಕಾರ್ಯಕರ್ತೆಯರು ರಾಜಲಕ್ಷ್ಮೀ ಮೂಲಕ ಮಗುವನ್ನು ಬೆಂಗಳೂರಿಗೆ ದಂಪತಿಯ ಮನೆಗೆ ಸೇರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಶಾ ಕಾರ್ಯಕರ್ತೆಯರು ಸರ್ಕಾರದಿಂದ ಹಣ ಬಂದಿದೆ ಎಂದು ಸುಳ್ಳು ಹೇಳಿ ನಂಬಿಸಿ ಮಗುವನ್ನು ದತ್ತು ಕೊಡುವ ದಾಖಲೆಪತ್ರಕ್ಕೆ ನೀಲಮ್ಮರ ಸಹಿ ಪಡೆದಿದ್ದರು. ಬಾಬು, ಚುಚ್ಚುಮದ್ದು ಹಾಕಿಸುವ ಸೋಗಿನಲ್ಲಿ ಮಗುವನ್ನು ಕೆಜಿಎಫ್‌ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಮಾರಾಟ ಮಾಡಿದ್ದ. ಪತಿಯು ಮಗುವನ್ನು ವಾಪಸ್‌ ಮನೆಗೆ ಕರೆದುಕೊಂಡು ಬಾರದ ಕಾರಣ ಅನುಮಾನಗೊಂಡ ನೀಲಮ್ಮ ದೂರು ನೀಡಿದರು. ಆತನ ವಿಚಾರಣೆ ನಡೆಸಿದಾಗ ಮಗು ಮಾರಾಟದ ಸಂಗತಿ ಬೆಳಕಿಗೆ ಬಂದಿತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT