ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗಳಿಗೆ ಸ್ವಚ್ಛತೆ ಬಂಡವಾಳ

ಸಿಬ್ಬಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌ ಕಿವಿಮಾತು
Last Updated 15 ಫೆಬ್ರುವರಿ 2020, 15:47 IST
ಅಕ್ಷರ ಗಾತ್ರ

ಕೋಲಾರ: ‘ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ವ್ಯವಸ್ಥೆ ಕಾಣಬೇಕು. ಆಸ್ಪತ್ರೆಗಳಿಗೆ ಸ್ವಚ್ಛತೆಯೇ ಬಂಡವಾಳ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು 2 ತಿಂಗಳಲ್ಲಿ ಭರ್ತಿ ಮಾಡಿ ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಎಸ್‍ಎನ್‍ಆರ್ ಆಸ್ಪತ್ರೆಯು 250 ಹಾಸಿಗೆ ಸಾಮರ್ಥ್ಯದಿಂದ 500 ಹಾಸಿಗೆ ಸೌಲಭ್ಯದವರೆಗೆ ಬೆಳೆದಿದೆ. ಹಾಸಿಗೆಗಳಿಗೆ ತಕ್ಕಂತೆ ವೈದ್ಯರು ಮತ್ತು ಸಿಬ್ಬಂದಿ ಇರಬೇಕು. ಆಗ ಮಾತ್ರ ಉತ್ತಮ ಸೇವೆ ಸಲ್ಲಿಸಲು ಸಾಧ್ಯ’ ಎಂದರು.

‘ಆರೋಗ್ಯವೇ ಭಾಗ್ಯ, ಮನುಷ್ಯನಿಗೆ ಮೊದಲು ಆರೋಗ್ಯ ಬೇಕು. ರೋಗಿಗಳ ಕಣ್ಣಿಗೆ ವೈದ್ಯರು ದೇವರಂತೆ ಕಾಣುತ್ತಾರೆ. ಜಿಲ್ಲೆಯಲ್ಲಿ ಈ ಹಿಂದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೊರತೆಯಿಂದ ಸಾಕಷ್ಟು ಮಕ್ಕಳು ಮೃತಪಟ್ಟಿವೆ. ಮುಂದೆ ಈ ರೀತಿ ಆಗಬಾರದು. ಹೊಸದಾಗಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಿವೆ’ ಎಂದರು.

ವೈದ್ಯಕೀಯ ಕಾಲೇಜು: ‘ರಾಜ್ಯದ ರಾಜಧಾನಿ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಕೋಲಾರಕ್ಕೆ ವೈದ್ಯಕೀಯ ಕಾಲೇಜು ಬೇಕು. ಕೋಲಾರದಿಂದ ಬೆಂಗಳೂರಿಗೆ ಹೋಗಿ ಕಲಿಯಲು ಮಕ್ಕಳಿಗೆ ತೊಂದರೆ ಆಗುತ್ತದೆ. ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಜನರಿಗೆ ಮತ್ತಷ್ಟು ಸುಧಾರಿತ ಆರೋಗ್ಯ ಸೇವೆ ಸಿಗುತ್ತದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

‘ಕೋಲಾರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮೊದಲಿನಿಂದಲೂ ಹೆಚ್ಚಿನ ಬೇಡಿಕೆಯಿತ್ತು. ಈ ಬೇಡಿಕೆ ಈಗ ಈಡೇರಿದೆ. ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳೀಯವಾಗಿ ಸಾಕಷ್ಟು ಜನಪ್ರತಿನಿಧಿಗಳು ಶ್ರಮಿಸಿದ್ದಾರೆ. ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿನ 5 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕವನ್ನು 25 ಹಾಸಿಗೆಗಳಿಗೆ ಏರಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಕೆ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯ ಎಂ.ವಿ.ಶ್ರೀನಿವಾಸ್‌, ಬಿ.ಎಂ.ಜಯಪ್ರಕಾಶ್‌, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿ.ಪಂ ಸಿಇಒ ಎಚ್‌.ವಿ.ದರ್ಶನ್‌, ತಹಶೀಲ್ದಾರ್‌ ಶೋಭಿತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT