ಶನಿವಾರ, ಜನವರಿ 18, 2020
26 °C
ನಗರಸಭೆ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿ: ವಾಗ್ವಾದ

ಪಾದಚಾರಿ ಮಾರ್ಗದ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ತೆರೆಯಲಾಗಿದ್ದ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

ನಗರದ ಕ್ಲಾಕ್‌ಟವರ್‌ ವೃತ್ತ, ಡೂಂಲೈಟ್ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೊಡ್ಡಪೇಟೆ, ಎಂ.ಜಿ ರಸ್ತೆ, ಎಂ.ಬಿ ರಸ್ತೆ ಸೇರಿದಂತೆ ಹಲವೆಡೆ ವ್ಯಾಪಾರಿಗಳು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಅಂಗಡಿ ತೆರೆದಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿತ್ತು. ಈ ಸಂಬಂಧ ನಗರವಾಸಿಗಳು ನಗರಸಭೆಗೆ ದೂರು ಕೊಟ್ಟಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಕೆಲ ವ್ಯಾಪಾರಿಗಳು ನೋಟಿಸ್‌ಗೂ ಜಗ್ಗದೆ ಪಾದಚಾರಿ ಮಾರ್ಗದಲ್ಲೇ ವಹಿವಾಟು ಮುಂದುವರಿಸಿದ್ದರು.

ಹೀಗಾಗಿ ಪೊಲೀಸ್‌ ಭದ್ರತೆಯೊಂದಿಗೆ ನಗರಸಭೆ ಆಯುಕ್ತ ಶ್ರೀಕಾಂತ್‌ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ಜೆಸಿಬಿಯಿಂದ ತೆರವು ಮಾಡಿದರು. ಮುನ್ಸಿಪಲ್‌ ಮಾರುಕಟ್ಟೆ, ಬೆಂಗಳೂರು ರಸ್ತೆ, ಎಪಿಎಂಸಿ ಮಾರುಕಟ್ಟೆಯಿಂದ ಕ್ಲಾಕ್‌ಟವರ್‌ವರೆಗೆ ತರಕಾರಿ, ಗುಜರಿ, ಗ್ಯಾರೇಜ್, ಹಣ್ಣು, ಆಟಿಕೆ ಸೇರಿದಂತೆ ವಿವಿಧ ಅಂಗಡಿ, ಹೋಟೆಲ್ ಸೇರಿದಂತೆ 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರವುಗೊಳಿಸಲಾಯಿತು.

ಕೆಲ ಅಂಗಡಿ ಮಾಲೀಕರು, ‘ಮೂರ್ನಾಲ್ಕು ದಿನ ಕಾಲಾವಕಾಶ ನೀಡಿ. ಅಂಗಡಿ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ಅಂಗಡಿ ತೆರವುಗೊಳಿಸಿದರೆ ಜೀವನ ನಿರ್ವಹಣೆಗೆ ಏನು ಮಾಡಬೇಕು. ದಯವಿಟ್ಟು ವಹಿವಾಟು ಮುಂದುವರಿಸಲು ಬೇರೆಡೆ ಸ್ಥಳಾವಕಾಶ ಕಲ್ಪಿಸಿ’ ಎಂದು ಮನವಿ ಮಾಡಿದರು.

‘ದುಡಿಮೆ ಇಲ್ಲದೆ ಜೀವನ ನಡೆಸಲು ಕಷ್ಟವಾಗುತ್ತದೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲ. ಬೇರೆಡೆ ವಹಿವಾಟಿಗೆ ಅನುಮತಿ ನೀಡದಿದ್ದರೆ ನಾವು ಬೀದಿ ಪಾಲಾಗುತ್ತೇವೆ’ ಎಂದು ಅಳಲು ತೋಡಿಕೊಂಡರು.

ಬಿಗುವಿನ ವಾತಾವರಣ: ಮತ್ತೆ ಕೆಲ ಮಾಲೀಕರು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅಧಿಕಾರಿಗಳು ಮಾಲೀಕರ ಮನವಿ ಹಾಗೂ ಒತ್ತಡಕ್ಕೆ ಮಣಿಯದೆ ಅಂಗಡಿಗಳನ್ನು ತೆರವುಗೊಳಿಸಿದರು. ಕೆಲ ಮಾಲೀಕರು ಸ್ವಪ್ರೇರಣೆಯಿಂದ ಅಂಗಡಿ ಖಾಲಿ ಮಾಡಿದರು.

‘ಅಂಗಡಿ ಖಾಲಿ ಮಾಡುವಂತೆ ಹಿಂದೆಯೇ ಮಾಲೀಕರಿಗೆ ನೋಟಿಸ್‌ ನೀಡಲಾಗಿತ್ತು. ಜತೆಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿತ್ತು. ಆದರೂ ಮಾಲೀಕರು ಅನಧಿಕೃತವಾಗಿ ಪಾದಚಾರಿ ಮಾರ್ಗದಲ್ಲಿ ವಹಿವಾಟು ಮುಂದುವರಿಸಿದ್ದರು. ಹೀಗಾಗಿ ಮಾಲೀಕರಿಗೆ ಕಾಲಾವಕಾಶ ನೀಡುವ ಅಗತ್ಯವಿಲ್ಲ. ಒಂದೇ ದಿನ 20ಕ್ಕೂ ಅಂಗಡಿ ತೆರವುಗೊಳಿಸಲಾಗಿದೆ. ಮತ್ತೆ ಪಾದಚಾರಿ ಮಾರ್ಗದಲ್ಲಿ ಅಂಗಡಿ ಇಟ್ಟರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಶ್ರೀಕಾಂತ್‌ ಎಚ್ಚರಿಕೆ ನೀಡಿದರು.

ನಗರಸಭೆ ಕಂದಾಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕಿ ದೀಪಾ ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)