ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಅನಾಥವಾಗಿರುವ ವಾಣಿಜ್ಯ ತೆರಿಗೆ ಇಲಾಖೆ ಕಟ್ಟಡ

Published 5 ಜನವರಿ 2024, 7:33 IST
Last Updated 5 ಜನವರಿ 2024, 7:33 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಎನ್.ಗಡ್ಡೂರು ಗ್ರಾಮದ ಬಳಿ ಇರುವ ವಾಣಿಜ್ಯ ತೆರಿಗೆ ಇಲಾಖೆಗಳ ತನಿಖಾ ಠಾಣೆಯ ಕಟ್ಟಡ ಸುಸಜ್ಜಿತವಾಗಿದ್ದರೂ, ಕಟ್ಟಡದಲ್ಲಿ ತೆರಿಗೆ ವಸೂಲಿ ವ್ಯವಹಾರ ನಿಲ್ಲಿಸಿರುವ ಕಾರಣದಿಂದ ಕಟ್ಟಡ ಅನಾಥವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮುದಿಗೆರೆ ಮತ್ತು ಗಡ್ಡೂರು ಗ್ರಾಮಗಳ ಮದ್ಯದಲ್ಲಿ ಸುಸಜ್ಜಿತವಾಗಿ ಕಚೇರಿಯ ವ್ಯವಹಾರಗಳಿಗಾಗಿ ಒಂದು ಕಟ್ಟಡ ಹಾಗೂ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶ್ರಾಂತಿಗಾಗಿ ಒಂದು ಕಟ್ಟಡವನ್ನು ನಿರ್ಮಿಸಲಾಗಿದೆ. ಕುಡಿಯುವ ನೀರು, ವಿದ್ಯುತ್, ಜನರೇಟರ್, ಶೌಚಾಲಯ ಇತ್ಯಾದಿ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಈಚೆಗೆ ಸುಮಾರು ಆರು ವರ್ಷಗಳಿಂದ ಕಚೇರಿಯಲ್ಲಿ ಕರ್ತವ್ಯ ನಿಲ್ಲಿಸಿರುವ ಕಾರಣದಿಂದ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ.

ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯದೆ ಇರುವುದರಿಂದ ಕಟ್ಟಡ ಅನಾಥವಾಗಿದೆ. ಲಕ್ಷಾಂತರ ರೂಗಳ ವೆಚ್ಚದ ಯಂತ್ರಗಳು ಬಯಲಲ್ಲಿಯೇ ಬಿದ್ದಿವೆ. ಹೀಗಾಗಿ, ಸರ್ಕಾರದ ಲಕ್ಷಾಂತರ ರೂಗಳು ವ್ಯರ್ಥವಾದಂತಾಗಿದೆ.

ಕಿಟಕಿ ಬಾಗಿಲು ನಾಶ: ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಕಚೇರಿಯ ಕಿಟಕಿ ಬಾಗಿಲುಗಳು ಮಳೆ, ಬಿಸಿಲು, ಗಾಳಿಗೆ ನಾಶವಾಗಿ ಮುರಿದು ಬಿದ್ದಿದ್ದು, ಬಹುತೇಕ ಕಿಟಕಿ– ಬಾಗಿಲುಗಳನ್ನು ಗೆದ್ದಲು ಹುಳುಗಳು ತಿಂದು ನಾಶ ಪಡಿಸಿವೆ. ಇದರಿಂದ ಕಟ್ಟಡಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಇದರಿಂದ ಹಾವುಗಳು, ಚೇಳುಗಳು ಮುಂತಾದ ವಿಷಕಾರಿ ಜೀವ ಜಂತುಗಳ ವಾಸ ಸ್ಥಾನವಾಗಿದೆ.

ಜನರೇಟರಿಗೆ ಇಲ್ಲದ ರಕ್ಷಣೆ: ಎರಡೂ ಕಟ್ಟಡಗಳಿಗೆ ಹೊಂದಿಕೊಂಡಂತೆ ಭಾರೀ ಗಾತ್ರದ ಜನರೇಟರನ್ನು ಬಯಲಲ್ಲಿಯೇ ಇಟ್ಟಿದ್ದು ಮಳೆ, ಗಾಳಿ ಬಿಸಿಲಿಗೆ ತುಕ್ಕು ಹಿಡಿದು ನಾಶವಾಗುತ್ತಿದ್ದರೆ, ಮತ್ತೊಂದು ಕಡೆ ಜನರೇಟರ್ ಯಂತ್ರದ ಬೆಲೆ ಬಾಳುವ ವಸ್ತುಗಳು ಕಳ್ಳಕಾಕರರ ಪಾಲಾಗುತ್ತಿದೆ. ಯಂತ್ರದ ವಿದ್ಯುತ್ ಸಲಕರಣೆಗಳು ನೇತಾಡುತ್ತಿವೆ.

ಅನಾಥವಾಗಿರುವ ವಿದ್ಯುತ್ ಪರಿವರ್ತಕ: ಕಚೇರಿಗಾಗಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿದೆಯಾದರೂ ಕಚೇರಿಯಲ್ಲಿ ವ್ಯವಹಾರಗಳು ನಡೆಯದ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗಿದೆ. ಆದರೂ ವಿದ್ಯುತ್ ಪರಿವರ್ತಕ ಅನಾಥವಾಗಿ ವಾಲಿಕೊಂಡಿದೆ.

ಕಟ್ಟಡದ ಸುತ್ತಲೂ ಗಿಡಗೆಂಟೆಗಳು: ಅಧಿಕಾರಿಗಳಾಗಲಿ ಅಥವಾ ಜನರ ಓಡಾಟವೇ ಇಲ್ಲದ ಕಾರಣದಿಂದ ಕಚೇರಿಯ ಸುತ್ತಲೂ ನಾನಾ ವಿಧವಾದ ಗಿಡಗೆಂಟೆಗಳು ಮರಗಳಂತೆ ಬೆಳೆದು ನಿಂತಿದ್ದು ಕಾಲಿಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾನಾ ವಿಧವಾದ ಮುಳ್ಳುಗಿಡಗಳು ಪೊದೆಗಳಂತೆ ಬೆಳೆದು ಬಿಂತಿದ್ದು ಕಟ್ಟಡ ಪಾಳು ಬಿದ್ದ ರೀತಿಯಲ್ಲಿ ಗೋಚರಿಸುತ್ತಿದೆ.

ಕಚೇರಿಯ ಒಳಗಿನ ವಸ್ತುಗಳೂ ನಾಶ: ಒಡೆದ ಕಿಟಕಿಗಳ ಮೂಲಕ ಇಣುಕಿ ನೋಡಿದರೆ ಎರಡೂ ಕಟ್ಟಡಗಳ ಒಳಗೆ ಕಸ ಕಡ್ಡಿ ತುಂಬಿಕೊಂಡು ಜೇಡರ ಬಲೆಗಳು ವಿದ್ಯುತ್ ತಂತಿಗಳಂತೆ ತೂಗುತ್ತಿವೆ. ಜೊತೆಯಲ್ಲಿ ಇಲಿಗಳು, ಹಾವುಗಳ ವಾಸ ಸ್ಥಾನವಾಗಿದೆ.

ಕುಡುಕರ ಅಡ್ಡೆಯಾಗಿ ಬದಲಾವಣೆ: ಇನ್ನು ಕಟ್ಟಡದ ಮೇಲೆ, ಮೆಟ್ಟಿಲುಗಳು, ಕಚೇರಿಯ ಬಾಗಿಲುಗಳ ಮುಂದೆ ಹಾಗೂ ಕಟ್ಟಡದ ಹಿಂಭಾಗದಲ್ಲಿ ಕುಡುಕರು ಮದ್ಯಪಾನ ಕುಡಿದು ಬಾಟಲಿಗಳನ್ನು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದಿದ್ದಾರೆ. ಹೀಗಾಗಿ ಕಟ್ಟಡ ಕುಡುಕರ ಅಡ್ಡೆಯಾಗಿ ಬದಲಾಗಿದೆ.

ಕಟ್ಟಡ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡಂತೆಯೇ ಇರುವುದರಿಂದ ಪ್ರತಿನಿತ್ಯ ನಾನಾ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಸಂಚರಿಸುತ್ತಿದ್ದರೂ ಕಟ್ಟಡದ ಸ್ವಚ್ಛತೆ, ಸುರಕ್ಷತೆ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ.

ಕಚೇರಿಯ ಮುಂದೆ ಅನಾಥವಾಗಿರುವ ಜನರೇಟರ್ ಯಂತ್ರ
ಕಚೇರಿಯ ಮುಂದೆ ಅನಾಥವಾಗಿರುವ ಜನರೇಟರ್ ಯಂತ್ರ
ಕಚೇರಿಯ ಶೌಚಾಲಯದ ಬಾಗಿಲು ಗೆದ್ದಲು ಹಿಡಿದಿದೆ
ಕಚೇರಿಯ ಶೌಚಾಲಯದ ಬಾಗಿಲು ಗೆದ್ದಲು ಹಿಡಿದಿದೆ
ವಾಣಿಜ್ಯ ತೆರಿಗೆ ವಸೂಲಾತಿ ಕಟ್ಟಡ ನೋಡಲು ಅತ್ಯಾಕರ್ಷಕವಾಗಿದ್ದು ತಾತ್ಕಾಲಿಕವಾಗಿ ಬೀಗ ಹಾಕಲಾಗಿರುವ ಕಟ್ಟಡಕ್ಕೆ ಇಲಾಖೆ ರಕ್ಷಣೆ ನೀಡಲು ಕಾಂಪೌಂಡ್ ನಿರ್ಮಿಸಿ ಸುರಕ್ಷಿಸಬೇಕಾಗಿದೆ.
ನರಸಿಂಹಪ್ಪ ನಂಗಲಿ
ಕಟ್ಟಡಕ್ಕೆ ರಸ್ತೆ ನೀರಿನ ಸಂಪರ್ಕ ವಿದ್ಯುತ್ ಮುಂತಾದ ಎಲ್ಲಾ ಸೌಲಭ್ಯಗಳು ಇವೆ. ಗಡ್ಡೂರು ಹಾಗೂ ಮುದಿಗೆರೆ ಗ್ರಾಮಗಳಲ್ಲಿ ಅಂಗನವಾಡಿಗೆ ಸರಿಯಾದ ಕಟ್ಟಡದ ವ್ಯವಸ್ಥೆಗಳಾಗಲಿ ಹಾಗೂ ಗ್ರಾಮ ಪಂಚಾಯತಿ ಕಚೇರಿಗೆ ಕಟ್ಟಡವೇ ಇಲ್ಲ. ಆದ್ದರಿಂದ ಅಂಗನವಾಡಿ ಮತ್ತು ಗ್ರಾಮ ಪಂಚಾಯತಿ ಕಟ್ಟಡಗಳು ನಿರ್ಮಾಣವಾಗುವವರೆಗೂ ವಾಣಿಜ್ಯ ತೆರಿಗೆ ಕಟ್ಟಡಗಳನ್ನು ಬಳಸಿಕೊಳ್ಳಲು ಸಂಬಂಧಿಸಿದ ಇಲಾಖೆ ಅವಕಾಶ ಮಾಡಿ ಕೊಡಬೇಕಾಗಿದೆ.
ರಾಜು ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT